ತುಮಕೂರು(ಅ.12): ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳ ದಾಳಿ ನಡೆಸಿದ ಬೆನ್ನಲ್ಲೇ ಮೊದಲ ಸಮನ್ಸ್‌ ಜಾರಿ ಮಾಡಿದ್ದಾರೆ.

ಪರಮೇಶ್ವರ್‌ ಅವರ ಸಹೋದರ ಶಿವಪ್ರಸಾದ್‌ ಪುತ್ರ ಆನಂದ್‌ ಅವರ ಪರಮಾಪ್ತ ಕುಮಾರ್‌ ಎಂಬಾತನಿಗೆ ನೋಟಿಸ್‌ ಜಾರಿ ಮಾಡಿರುವ ಐಟಿ ಅಧಿಕಾರಿಗಳು ಸೋಮವಾರ ವಿಚಾರಣೆಗೆ ಆಗಮಿಸುವಂತೆ ಸೂಚಿಸಿದ್ದಾರೆ.

ಸೋಮವಾರ ವಿಚಾರಣೆ:

ಕುಮಾರ್‌ ನಿರ್ವಹಣೆ ಮಾಡುತ್ತಿದ್ದ ಡೈರಿಯಲ್ಲಿ ಕೋಟ್ಯಂತರ ರು.ಗಳ ವ್ಯವಹಾರದ ಬಗ್ಗೆ ಮಾಹಿತಿ ಇದೆ. ಚಿತ್ರರಂಗ, ರಿಯಲ್‌ಎಸ್ಟೇಟ್‌ ಸೇರಿದಂತೆ ಅನೇಕ ಕಡೆ ಹೂಡಿಕೆ ಮಾಡಿದ್ದ ಲೆಕ್ಕ ಬರೆದಿರುವ ಮಾಹಿತಿ ಡೈರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಈ ಲೆಕ್ಕದಂತೆ ದಾಖಲಾತಿಗಳನ್ನು ಐಟಿ ಅಧಿಕಾರಿಗಳು ಕೇಳಿದ್ದು ಸೋಮವಾರ ವಿಚಾರಣೆಗೆ ಆಗಮಿಸುವಂತೆ ಸೂಚಿಸಿದ್ದಾರೆ.

ಪರಂ ಪಾಲಿಗೆ ಅಣ್ಣನ ಮಗ ಆನಂದ್‌ ವಿಲನ್‌?

ಗುರುವಾರ ಮಧ್ಯರಾತ್ರಿಯವರೆಗೂ ದಾಳಿ ನಡೆಸಿದ ಅಧಿಕಾರಿಗಳು ಶುಕ್ರವಾರ ಬೆಳಗ್ಗೆಯೇ ಪರಿಶೀಲನೆ ಕಾರ್ಯದಲ್ಲಿ ತೊಡಗಿದರು. ಪರಮೇಶ್ವರ್‌ ಹಾಗೂ ಅವರ ಅಣ್ಣನ ಮಗ ಆನಂದ್‌ಗೆ ಸಂಬಂಧಿಸಿದಂತೆ ಪ್ರಮುಖ ದಾಖಲೆಗಳನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡು ವಶಕ್ಕೆ ತೆಗೆದುಕೊಂಡಿದ್ದಾರೆ.

ಸಿಬ್ಬಂದಿಯಿಂದ ಮಾಹಿತಿ:

ಮೊದಲು ಗುರುವಾರ ವಶಪಡಿಸಿಕೊಂಡ ದಾಖಲೆಗಳಿಗೆ ಶಿಕ್ಷಣ ಸಂಸ್ಥೆ ಮುಖ್ಯಸ್ಥರಿಂದ ಮಾಹಿತಿಯನ್ನು ಅಧಿಕಾರಿಗಳು ಪಡೆದರು. ಪದವಿ ಕಾಲೇಜು, ಮೆಡಿಕಲ್‌ ಹಾಗೂ ಎಂಜಿನಿಯರ್‌ ಕಾಲೇಜುಗಳ ಆಡಳಿತ ನಿರ್ವಹಣೆ ಬಗ್ಗೆ ಕೂಲಂಕಷವಾಗಿ ಕಾಲೇಜಿನ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಈ ಮಧ್ಯೆ ಎಂಜಿನಿಯರ್‌ ಕಾಲೇಜಿನ ಪ್ರಾಂಶುಪಾಲರನ್ನು ಸಹ ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದರು.

ಪರಮೇಶ್ವರ್ ಖಜಾನೆ ಜಾಲಾಡಿದ IT: 100 ಕೋಟಿ ಅಘೋಷಿತ ಆಸ್ತಿ ಪತ್ತೆ

ಅಲ್ಲಿಂದ ಅಡ್ಮಿನ್‌ ಬ್ಲಾಕ್‌ಗೆ ಸಿಬ್ಬಂದಿಯನ್ನು ಕರೆದೊಯ್ದು ಅಲ್ಲಿ ಮಾಹಿತಿ ಪಡೆದರು. ಮಾಹಿತಿ ಪಡೆದ ಬೆನ್ನಲ್ಲೇ ಮತ್ತಷ್ಟುದಾಖಲೆಗಳನ್ನು ಕಾಲೇಜಿನ ಪ್ರಾಂಶುಪಾಲ ಡಾ. ಶಿವಪ್ರಕಾಶ್‌ ಸಮ್ಮುಖದಲ್ಲಿ ಪರಿಶೀಲಿಸಿದರು.

ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಅಳತೆ ಮಾಡಲೂ ಆಡಳಿತ ಮಂಡಳಿ ಒಪ್ಪಿಲ್ಲ. ಶುಕ್ರವಾರ ಬೆಳಗ್ಗೆ ಕಾಲೇಜಿನ ಸಿಬ್ಬಂದಿಯೊಬ್ಬರನ್ನು ಬ್ಯಾಂಕ್‌ಗೆ ಕರೆದೊಯ್ದು ಪರಿಶೀಲನೆ ನಡೆಸಿದರು.

ಬ್ಯಾಂಕ್ ಖಾತೆ ಪರಿಶೀಲನೆ:

ಸಿಂಡಿಕೇಟ್‌ ಬ್ಯಾಂಕ್‌ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಖಾತೆ ಪರಿಶೀಲನೆ ನಡೆಸಿತು. ಅಲ್ಲದೆ, ಬ್ಯಾಂಕ್‌ನಲ್ಲಿರುವ ಲಾಕರ್‌ ಪರಿಶೀಲನೆಯನ್ನೂ ಮಾಡಲಾಯಿತು. ಬಳಿಕ ಸದ್ಯ ಸಂಸ್ಥೆ ಆದಾಯದಲ್ಲಿದೆಯೇ ಅಥವಾ ನಷ್ಟದಲ್ಲಿದೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಿತು.

ಮಾಜಿ ಡಿಸಿಎಂ ಪರಮೇಶ್ವರ್ ಒಡೆತನದ ಕಾಲೇಜ್‌ನಲ್ಲಿ ಸಿಕ್ತು ಕಂತೆ ಕಂತೆ ಹಣ..!