ತುಮಕೂರು(ಅ.27): ಕೇಂದ್ರ ಸರ್ಕಾರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸಲವತ್ತು ಒದಗಿಸುವ ಜತೆಗೆ ಹಂತ ಹಂತವಾಗಿ ಬಡವರು ಮುಖ್ಯವಾಹಿನಿಗೆ ಬರಬೇಕು ಎಂಬ ಕಾರಣಕ್ಕೆ ಶಿಕ್ಷಣ, ಉದ್ಯೋಗ, ಆರೋಗ್ಯ ಕಲ್ಪನೆ ಅಳವಡಿಸಿಕೊಳ್ಳಲಾಗಿದ್ದು, ಅರ್ಹ ಫಲಾನುಭವಿಗಳು ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ದಿಶಾ ಉಪ ಸಮಿತಿಯ ಅಧ್ಯಕ್ಷರೂ ಆದ ಸಂಸದ ಜಿ.ಎಸ್‌.ಬಸವರಾಜು ತಿಳಿಸಿದ್ದಾರೆ.

ಗುಬ್ಬಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದಿಶಾ ಉಪ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಸತಿ ಹೀನರಿಗೆ ಮನೆ ನೀಡಲು ಮುಂದಾದ ಕೇಂದ್ರ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಒಂದು ಲಕ್ಷ ಮನೆಯನ್ನು ನಿರ್ಮಾಣ ಮಾಡಲಿದೆ ಎಂದು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಇರಲೇಬೇಕು ಎಂದಿದ್ದಾರೆ.

ತುಮಕೂರು: ವಿಚಿತ್ರ ಜ್ವರಕ್ಕೆ ವ್ಯಕ್ತಿಯೋರ್ವ ಬಲಿ?

ಸಾರ್ವಜನಿಕರ ಸೇವೆಗೆ ಸರ್ಕಾರಿ ನೌಕರರು ಕೇಂದ್ರ ಸರ್ಕಾರದ ಅಂತ್ಯೋದಯ ಯೋಜನೆಯಡಿ ಬದ್ಧರಾಗಿ ದುಡಿಯಲೇಬೇಕು. ಇಲ್ಲವಾದಲ್ಲಿ ದಿಶಾ ಉಪ ಸಮಿತಿಯ ಶಿಫಾರಸ್ಸಿನಲ್ಲಿ ಕರ್ತವ್ಯದಿಂದ ಮುಕ್ತಿಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, 142 ಅಂಶಗಳನ್ನು ಒಳಗೊಂಡ ಯೋಜನೆಯಲ್ಲಿ 450 ವಿವಿಧ ಹಂತದ ಕೆಲಸವನ್ನು ಎಲ್ಲಾ ಇಲಾಖೆಗಳು ಮಾಡಲೇಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದ ಎಲ್ಲಾ ಯೋಜನೆಗಳು, ಕಾಮಗಾರಿಗಳು, ಅಭಿವೃದ್ಧಿ ಕೆಲಸಗಳ ಬಗ್ಗೆ ಆನ್‌ಲೈನ್‌ ಮೂಲಕ ಅಪ್‌ಲೋಡ್‌ ಮಾಡಿ ಒಂದೇ ಕಡತದಲ್ಲಿ ಇಲಾಖೆಯ ಪ್ರಗತಿ ಬಗ್ಗೆ ಮಾಹಿತಿ ಒದಗಿಸಬೇಕಿದೆ ಎಂದಿದ್ದಾರೆ.

ಸಾಮಾಜಿಕ ಕಾರ‍್ಯಕರ್ತರನ್ನು ಬಳಸಿಕೊಳ್ಳಿ:

ಈ ಕಾರ್ಯಕ್ಕೆ ಕೂಡಲೇ ಕಂದಾಯ ಇಲಾಖೆ ಸರ್ಕಾರಿ ಸ್ಥಳವನ್ನು ಗುರುತಿಸಿ ಮಾಹಿತಿಯನ್ನು ದಿಶಾ ಸಮಿತಿಗೆ ಸಲ್ಲಿಸಬೇಕು. ದಿಶಾ ಸಮಿತಿಯು ಕೇಂದ್ರ ಸರ್ಕಾರ ನಿಯೋಜಿಸಿದ ಕಾರ್ಯವನ್ನು ಶಿಸ್ತು ಬದ್ಧವಾಗಿ ನಿರ್ವಹಿಸಲಿದೆ. ಸಾಮಾಜಿಕ ಜಾಲತಾಣ ಬಳಸಲು ಮುಂದಾಗುವ ಜತೆಗೆ ಪಂಚಾಯಿತಿ ಮಟ್ಟದ ಎಲ್ಲಾ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ಸೇವಕರನ್ನು ಬಳಸಿಕೊಂಡು ಅಭಿವೃದ್ಧಿ ಕೆಲಸ ಮಾಡಬೇಕು ಎಂದ ಅವರು, ಚುನಾಯಿತ ಪ್ರತಿನಿಧಿಗಳ ಹಿಂದೆ ಕಾರ್ಯಕರ್ತರ ರೀತಿ ತಿರುಗುವ ನೌಕರರ ಬಗ್ಗೆ ಮಾಹಿತಿ ಸಿಕ್ಕಿದೆ. ದಿಶಾ ಮೊದಲ ಸಭೆ ಇದಾದ ಕಾರಣ ಎಚ್ಚರಿಕೆ ಮಾತ್ರ ನೀಡಲಾಗಿದೆ ಎಂದು ಸೂಚಿಸಿದ್ದಾರೆ.

ಬಡವರ ಕಲ್ಯಾಣಕ್ಕೆ ಒತ್ತು:

ಸಮಿತಿ ಸದಸ್ಯ ಕುಂದುರನಹಳ್ಳಿ ರಮೇಶ್‌ ಮಾತನಾಡಿ, ದೇಶದ ಅಭಿವೃದ್ಧಿ ಕಾರ್ಯದಲ್ಲಿ ಆಮೆ ನಡಿಗೆಯನ್ನು ಕಂಡ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚುರುಕಿನ ಕೆಲಸವನ್ನು ನಡೆಸಲು ಸರ್ಕಾರಿ ನೌಕರರನ್ನು ಎಚ್ಚರಗೊಳಿಸುತ್ತಿದೆ. ದಿಶಾ ಸಮಿತಿ ಸರ್ಕಾರಿ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಿದೆ. ನೌಕರರ ಕೆಲಸ ಕಾರ್ಯಗಳ ಮೇಲೂ ಕಣ್ಗಾವಲು ರೀತಿಯಲ್ಲಿ ದಿಶಾ ಕೆಲಸ ಮಾಡಲಿದೆ ಎಂದಿದ್ದಾರೆ.

ಪೊಲೀಸಪ್ಪನ ಬಾಯಿಗೇ ಆಲ್ಕೋ ಮೀಟರ್ ಇಟ್ಟು ಊದು ಎಂದ್ರು ಜನ..!

ಪಂಚಾಯಿತಿ ಮಟ್ಟದಲ್ಲಿ ಆರಂಭವಾಗುವ ಸಮಿತಿಯ ಕೆಲಸ ಎಲ್ಲಾ ಇಲಾಖೆಯಿಂದಲೂ ಮಾಹಿತಿ ಪಡೆಯಲಿದೆ. ಅಧಿಕಾರಿಗಳ ಕರ್ತವ್ಯ, ವಾಸ್ತವ್ಯದ ಮೂಲಕ ಸಮಿತಿ ಮೊದಲ ಕೆಲಸ ಆರಂಭಿಸಿದೆ. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳ ವಾಸಸ್ಥಳದ ಮಾಹಿತಿ ತಾಲೂಕು ಪಂಚಾಯಿತಿ ನೀಡಬೇಕು. ಪಕ್ಷಾತೀತ, ಜಾತ್ಯತೀತವಾಗಿ ಕೆಲಸ ಮಾಡುವ ದಿಶಾ ಸಮಿತಿಯು ಬಡವರ ಕಲ್ಯಾಣಕ್ಕೆ ಒತ್ತು ನೀಡಲಿದೆ ಎಂದಿದ್ದಾರೆ.

ಈ ಸಭೆಯಲ್ಲಿ ಜಿಪಂ ಡಿ.ಎಸ್‌.ಕೃಷ್ಣಮೂರ್ತಿ, ಎಪಿಒ ಮಂಜುನಾಥ್‌, ತಾಪಂ ಇಒ ನರಸಿಂಹಯ್ಯ, ಶಿರಸ್ತೇದಾರ್ ಗೋವಿಂದರೆಡ್ಡಿ, ತಾಪಂ ಯೋಜನಾಧಿಕಾರಿ ರಾಜಾನಾಯಕ್‌ ಮುಂತಾದವರು ಭಾಗವಹಿಸಿದ್ದರು.

ಪಿಡಿಒಗಳ ವಿರುದ್ಧ ದೂರುಗಳಿವೆ

ನಗರ ಪ್ರದೇಶಗಳಿಂದ ಪಂಚಾಯಿತಿ ಕಾರ್ಯಾಲಯಕ್ಕೆ ಬರುವ ಪಿಡಿಒಗಳು ಕರ್ತವ್ಯ ಹೇಗೆ ನಿರ್ವಹಿಸುತ್ತಾರೆ ಎಂಬುದು ತಿಳಿದಿದೆ. ಪಂಚಾಯಿತಿ ಕಾರ್ಯದರ್ಶಿಯೊಂದಿಗೆ ಒಡಂಬಡಿಕೆಯಲ್ಲಿ ಕೆಲಸ ಮಾಡುವ ಪಿಡಿಒಗಳು ತಿಂಗಳಿಗೆ ಮೂರ್ನಾಲ್ಕು ಬಾರಿ ಕಚೇರಿಗೆ ಬರುವ ಬಗ್ಗೆ ದೂರುಗಳಿವೆ. ಈ ನಿಟ್ಟಿನಲ್ಲಿ ಮೊದಲು ಕೇಂದ್ರ ಸ್ಥಾನದಲ್ಲಿ ವಾಸವಿರಬೇಕು. ಈ ಜತೆಗೆ ಗ್ರಾಮಲೆಕ್ಕಿಗರು ಸಹ ಪಿಡಿಒಗಳೊಂದಿಗೆ ಸಹಭಾಗಿತ್ವದಲ್ಲಿ ಕೆಲಸ ಮಾಡಬೇಕು ಎಂದು ಜಿಎಸ್‌ಬಿ ಸಲಹೆ ನೀಡಿದರು.

ಮೂರು ತಿಂಗಳಿಗೊಮ್ಮೆ ದಿಶಾ ಸಭೆ

ಮುಂದಿನ ಸಭೆಯಲ್ಲಿ ಎಲ್ಲಾ ಸರ್ಕಾರಿ ಮಾಹಿತಿಗಳು ಅಪ್‌ಲೋಡ್‌ ಮಾಡಿರಬೇಕು. ಅಂಕಿ ಅಂಶಗಳ ಸಹಿತ ಎಲ್ಲಾ ಮಾಹಿತಿ ಸಭೆಯಲ್ಲಿ ಒಪ್ಪಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ದಿಶಾ ಸಮಿತಿ ಸಭೆ ನಡೆಸಲಾಗುವುದು. ಮೂರು ಇಲಾಖೆಗಳಿಗೆ ಒಂದು ಸಭೆ ನಡೆಸಿ ಕೂಲಂಕಷವಾಗಿ ಪರಿಶೀಲನೆ ಮಾಡಲಾಗುವುದು ಎಂದ ಅವರು, ಯಾವುದೇ ಮಾಹಿತಿ ಒದಗಿಸದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಸಂಸದ ಬಸವರಾಜು ಪಟ್ಟಣದಲ್ಲಿ ಬಡಾವಣೆಗಳು, ಪಾರ್ಕ್ಗಳ ಬಗ್ಗೆ ಮಾಹಿತಿ ತಿಳಿಯದ ಅಧಿಕಾರಿ ಸಾರ್ವಜನಿಕರಿಗೆ ಯಾವ ರೀತಿ ಕೆಲಸ ಮಾಡಬಲ್ಲರು ಎಂದು ಅಸಮಾಧಾನ ವ್ಯಕ್ತಪಡಿಸಿದರು.