ಪ್ಲ್ಯಾಸ್ಟಿಕ್ ಎಂಬುದು ಆಧುನಿಕ ರಕ್ಕಸರ ಇರುವಿಕೆಯ ಕುರುಹು. ದಟ್ಟ ಕಾಡಿನ ನಡುವೆಯೊಂದು ಸಣ್ಣ ಪ್ಲ್ಯಾಸ್ಟಿಕ್ ರ್ಯಾಪರ್ ಬಿದ್ದಿದೆ ಎಂದರೆ ಅಲ್ಲಿಗೆ ಮನುಷ್ಯನೆಂಬೋ ಪ್ರಾಣಿ ಬಂದು ಹೋಗಿದ್ದಾನೆಂಬುದು ಸುಲಭವಾಗಿ ಅರ್ಥವಾದೀತು. ಮನುಷ್ಯ ಹೋದಲ್ಲೆಲ್ಲ ಪ್ಲ್ಯಾಸ್ಟಿಕ್ ಪರಿಸರಕ್ಕೆ ಸೇರಿಸಿಯೇ ಬರುತ್ತಾನೆ. ಅವನೊಂತರಾ ಆಧುನಿಕ ರಕ್ತ ಬೀಜಾಸುರ. ಆ ರಕ್ಕಸನ ರಕ್ತದ ಹನಿ ಬಿದ್ದಲ್ಲೆಲ್ಲ ರಾಕ್ಷಸರು ಹುಟ್ಟಿಕೊಳ್ಳುತ್ತಿದ್ದಂತೆ, ಈ ರಕ್ಕಸ ಹೋದಲ್ಲೆಲ್ಲ ಪ್ಲ್ಯಾಸ್ಟಿಕ್ ತ್ಯಾಜ್ಯ ತುಂಬುತ್ತದೆ. ಎಲ್ಲ ಜೀವಿಗಳಿಗಿಂತ ಬುದ್ಧಿವಂತ ಎಂದು ಕೊಚ್ಚಿಕೊಳ್ಳುವ ಈತನ ಬುದ್ಧಿಮಟ್ಟಕ್ಕೆ ಪರಿಸರ ಸಂರಕ್ಷಣೆ ಕುರಿತ ಯಾವ ಜಾಗೃತಿ ಕೂಡಾ ತಲುಪಲಾರದ್ದು ದುರಂತವೇ ಸರಿ. 
ಆದರೆ, ಸಿಕ್ಕಿಂ ಹಾಗೂ ಇಲ್ಲಿನ ಲ್ಯಾಚೆನ್ ಹಳ್ಳಿಯ ಜನರು ಇತರರಿಗಿಂತ ಸ್ವಲ್ಪ ವಿಭಿನ್ನ ಎನಿಸಿಕೊಂಡಿದ್ದಾರೆ. 

ಪಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳೋ ಭಾರತದ ನಿಗೂಢ ಸ್ಥಳವಿದು......

ಹೌದು, ಮೊದಲ ಆರ್ಗ್ಯಾನಿಕ್ ಸ್ಟೇಟ್ ಎಂಬ ಪಟ್ಟ ಪಡೆದು 2018ರಲ್ಲಿ ವಿಶ್ವಸಂಸ್ಥೆಯಿಂದ ಪ್ರಶಸ್ತಿಗೆ ಭಾಜನವಾಗಿದೆ ಸಿಕ್ಕಿಂ. 1998ರಲ್ಲೇ ನೀರಿನ ಪ್ಲ್ಯಾಸ್ಟಿಕ್ ಬಾಟಲಿಗಳನ್ನು ನಿಷೇಧಿಸಿ ಮಾದರಿಯಾದ ರಾಜ್ಯವಿದು. 2016ರಲ್ಲಿ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರನ್ನು ಸರ್ಕಾರಿ ಕಚೇರಿಗಳು ಸೇರಿದಂತೆ ಬೃಹತ್ ಸಮಾವೇಶಗಳಲ್ಲಿ ಸಂಪೂರ್ಣ ಬ್ಯಾನ್ ಮಾಡಿತು. ಇದೀಗ ಇಲ್ಲಿನ ಲ್ಯಾಚೆನ್ ಎಂಬ ಹಳ್ಳಿ ಪ್ಲ್ಯಾಸ್ಟಿಕ್‌ಗೆ ಬದಲಿಯಾಗಿ ಬಿದಿರಿನ ನೀರಿನ ಬಾಟಲ್‌ಗಳನ್ನು ಬಿಕರಿ ಮಾಡಲು ಹೊರಟು ಸುದ್ದಿಯಾಗಿದೆ. 

ಬಿದಿರಿನ ಬಾಟಲ್
ಲ್ಯಾಚೆನ್ ಎಂಬುದು ಸಿಕ್ಕಿಂನ ಅತಿ ಸುಂದರ ಊರು. ಜನಸಂಖ್ಯೆ ಸುಮಾರು 2500. ಇಲ್ಲಿನ ಹಿಮಚ್ಚಾದಿತ ಪರ್ವತಗಳು ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಬರ ಸೆಳೆಯುತ್ತವೆ. ಪ್ರವಾಸಿಗರು ಹೆಚ್ಚಾದಂತೆಲ್ಲ ಊರು ತುಂಬಾ ಪ್ಲ್ಯಾಸ್ಟಿಕ್ ತ್ಯಾಜ್ಯವೂ ಪರ್ವತದಷ್ಟೇ ಬೆಳೆಯತೊಡಗಿದೆ. ಇದರ ಬಹುಪಾಲು ಇರುವುದು ಕುಡಿವ ನೀರಿನ ಬಾಟಲ್‌ಗಳೇ. ಈ ಕಾರಣಕ್ಕೆ ಲ್ಯಾಚೆನ್‌ನ ಸ್ಥಳೀಯರು ಎಚ್ಚೆತ್ತು ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಬಾಟಲ್‌ಗಳನ್ನು ಸಂಪೂರ್ಣ ನಿಷೇಧಿಸಿದರು. ಆದರೆ, ಇದರಿಂದ ಕುಡಿಯುವ ನೀರಿನ ವಿಷಯದಲ್ಲಿ ಪೇಚಾಟಕ್ಕೆ ಸಿಲುಕಿಕೊಂಡ ಪ್ರವಾಸಿಗರಿಗೆ ಬದಲಿ ವ್ಯವಸ್ಥೆ ಕಲ್ಪಿಸಬೇಕಲ್ಲ... ಅದಕ್ಕಾಗಿ ಈಗ ಬಿದಿರಿನ ವಾಟರ್ ಬಾಟಲ್ ಮಾರಾಟಕ್ಕೆ ಸಜ್ಜಾಗಿದೆ ಲ್ಯಾಚೆನ್. 

12 ಪವಿತ್ರ ಜ್ಯೋತಿರ್ಲಿಂಗಗಳ ದರ್ಶನ ನಿಮಗಾಗಿ ಇಲ್ಲಿ!...

ಲ್ಯಾಚೆನ್‌ನ ಬೇಡಿಕೆಗೆ ಸ್ಪಂದಿಸಿರುವ ಸಿಕ್ಕಿಂನ ಸಂಸದ ಹಿಷಿ ಲಚುಂಗ್ಪ ಅವರು ಬಿದಿರಿನಿಂದ ಶ್ರೀಮಂತವಾಗಿರುವ ಅಸ್ಸಾಂನಿಂದ 1000 ಬಿದಿರಿನ ಬಾಟಲ್‌ಗಳಿಗೆ ಆರ್ಡರ್ ಮಾಡಿದ್ದಾರೆ. ಇದೇನು ಕೇವಲ ಸಾವಿರವಾ ಎನ್ನಬೇಡಿ. ಎಲ್ಲ ಉತ್ತಮ ಕೆಲಸವೂ ಆರಂಭವಾಗುವುದು ಸಣ್ಣ ಸಂಖ್ಯೆಯಿಂದಲೇ. ಈ ಸಂಖ್ಯೆ ಬೇಗ ಲಕ್ಷ ತಲುಪುವುದರಲ್ಲಿ ಅನುಮಾನವಿಲ್ಲ. 

ಇಷ್ಟಕ್ಕೂ ಬಿದಿರಿನ ಬಾಟಲ್‌ನಲ್ಲಿ ತುಂಬಿಸಿದ ನೀರು ಪ್ಲ್ಯಾಸ್ಟಿಕ್ ಬಾಟಲ್‌ನಂತೆ ಬೇಸಿಗೆಯಲ್ಲಿ ಬಿಸಿಯಾಗುವುದಿಲ್ಲ, ಆರೋಗ್ಯಕ್ಕೆ ಹಾನಿಕಾರಕವಲ್ಲ. ಪರಿಸರಕ್ಕೂ ಮಾರಕವಲ್ಲ. ಬಿದಿರಿನ ಬಾಟಲ್ ಎಂದ ಮಾತ್ರಕ್ಕೆ ಇದರಲ್ಲಿ ನೀರು ಸೋರುವ ಭಯವಿಲ್ಲ, ಬ್ಯಾಕ್ಟೀರಿಯಾ ಶಂಕೆಗೆ ಆಸ್ಪದವಿಲ್ಲದಂತೆ ಇದನ್ನು ತಯಾರಿಸಲಾಗುತ್ತದೆ. 

ಮಾದರಿ ಸಿಕ್ಕೀಂ
ಇದೀಗ ಲ್ಯಾಚೆನ್‌ಗೆ ಹೋಗುವ ಪ್ರವಾಸಿಗರ ಪ್ರತಿಯೊಂದು ಬ್ಯಾಗನ್ನೂ ಪರಿಶೀಲಿಸಿ, ಪ್ಲ್ಯಾಸ್ಟಿಕ್ ಬಾಟಲ್ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕವಷ್ಟೇ ಒಳಬಿಡಲಾಗುತ್ತಿದೆ. ಹಾಗೆೇನಾದರೂ ಅವರು ಪ್ಲ್ಯಾಸ್ಟಿಕ್ ಬಾಟಲ್ ಹೊಂದಿದ್ದರೆ ಅದನ್ನು ಪಟ್ಟಣದ ಹೊರಗೆಯೇ ಬಿಡಬೇಕು ಇಲ್ಲವೇ ಹತ್ತಿರದ ಅಂಗಡಿಗಳಲ್ಲಿ ದೊರೆವ ಮರುಬಲಕೆ ಯೋಗ್ಯ ಬಾಟಲ್ ಖರೀದಿಸಿ ನೀರನ್ನು ಅದಕ್ಕೆ ವರ್ಗಾಯಿಸಬೇಕು. 

ಇದರೊಂದಿಗೆ ವೇಫರ್ ಹಾಗೂ ಬಿಸ್ಕೇಟ್ ಪ್ಯಾಕ್‌ಗಳನ್ನು ಕೂಡಾ ಲ್ಯಾಚೆನ್‌ನ ಸ್ಥಳೀಯರು ನಿಷೇಧಿಸಿದ್ದಾರೆ. ಈ ಹಿಂದೆ ಸಿಂಗಲ್ ಯೂಸ್ ಪ್ಲ್ಯಾಸ್ಟಿಕ್‌ಗಳನ್ನು ಸಂಪೂರ್ಣ ಬ್ಯಾನ್ ಮಾಡಿ ಲ್ಯಾಚೆನ್ ಪ್ರಶಂಸೆಗೆ ಪಾತ್ರವಾಗಿತ್ತು. 
ಪ್ಲ್ಯಾಸ್ಟಿಕ್ ವಿರುದ್ಧ ಲ್ಯಾಚೆನ್ ಹಾಗೂ ಸಿಕ್ಕಿಂ ಕೈಗೊಂಡಿರುವ ಕ್ರಮಗಳು ಜಗತ್ತಿಗೇ ಮಾದರಿಯಾಗಬೇಕು. ಇದನ್ನೊಂದು ಸ್ಪೂರ್ತಿಯಾಗಿ ಪರಿಗಣಿಸಿ ಎಲ್ಲ ಹಳ್ಳಿ ಪಟ್ಟಣಗಳೂ ಇಂಥ ಕ್ರಮಕ್ಕೆ ಮುಂದಾದರೆ, ಅದು ನಮಗೆ ಬಹಳಷ್ಟನ್ನು ನೀಡಿದ ಪರಿಸರಕ್ಕೆ ನಾವು ತೋರಬಹುದಾದ ಅಲ್ಪ ಕೃತಜ್ಞತೆ.