* ಟೋಕಿಯೋ ಒಲಿಂಪಿಕ್ಸ್ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಭಾರತ ಹಾಕಿ ತಂಡ* ಭಾರತದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ* ಬೆಲ್ಜಿಯಂ ಎದುರು 5-2 ಅಂತರದಲ್ಲಿ ಭಾರತಕ್ಕೆ ಸೋಲು
ನವದೆಹಲಿ(ಆ.03): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಭಾರತ ಹಾಗೂ ಬೆಲ್ಜಿಯಂ ನಡುವಿನ ಹಾಕಿ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು 5-2 ಗೋಲುಗಳ ಅಂತರದಲ್ಲಿ ಸೋಲನ್ನನುಭವಿಸಿದೆ. ಇದರೊಂದಿಗೆ 41 ವರ್ಷಗಳ ಬಳಿಕ ಫೈನಲ್‌ಗೇರುವ ಅವಕಾಶದಿಂದ ವಂಚಿತವಾಗಿದೆ.
ಇನ್ನು ಹಾಕಿ ಸೆಮಿಫೈನಲ್ ಪಂದ್ಯವು ಆರಂಭವಾಗುತ್ತಿದ್ದಂತೆಯೇ ಪಂದ್ಯ ವೀಕ್ಷಿಸುತ್ತಿರುವುದಾಗಿ ಭಾರತ ಹಾಕಿ ತಂಡಕ್ಕೆ ಶುಭ ಹಾರೈಸಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿ, ಪಂದ್ಯ ಮುಗಿಯುತ್ತಿದ್ದಂತೆಯೇ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ಹಾಕಿ ತಂಡದ ಕೆಚ್ಚೆದೆಯ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ''ಸೋಲು-ಗೆಲುವುಗಳು ಜೀವನದ ಭಾಗಗಳು. ನಮ್ಮ ಹಾಕಿ ತಂಡವು ಅತ್ಯುತ್ತಮ ಪ್ರದರ್ಶನ ತೋರಿದೆ. ಮುಂಬರುವ ಪಂದ್ಯಗಳಿಗೆ ಭಾರತ ತಂಡಕ್ಕೆ ನನ್ನ ಶುಭ ಹಾರೈಕೆಗಳು'' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಪಂದ್ಯ ಮುಗಿಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ, ಮುಂದಿನ ಪಂದ್ಯಕ್ಕೆ ಶುಭ ಹಾರೈಸಿದ್ದಾರೆ.
ಭಾರತ ಫೈನಲ್‌ಗೇರುವ ಅವಕಾಶದಿಂದ ವಂಚಿತವಾಗಿದ್ದರೂ, ಇನ್ನೂ ಮನ್‌ಪ್ರೀತ್ ಸಿಂಗ್ ಪಡೆಗೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಅವಕಾಶ ಕೈ ಜಾರಿಲ್ಲ. ಜುಲೈ 05ರಂದು ಬೆಳಗ್ಗೆ 7 ಗಂಟೆಗೆ ಆರಂಭವಾಗಲಿರುವ ಕಂಚಿನ ಪದಕಕ್ಕಾಗಿನ ಕಾದಾಟದಲ್ಲಿ ಭಾರತ ಹಾಕಿ ತಂಡವು ಆಸ್ಟ್ರೇಲಿಯಾ ಇಲ್ಲವೇ ಜರ್ಮನಿ ತಂಡವನ್ನು ಎದುರಿಸಲಿದೆ.
ಟೋಕಿಯೋ 2020: ಭಾರತ ಹಾಕಿ ತಂಡದ ಫೈನಲ್ ಕನಸು ಭಗ್ನ..!
ಇನ್ನು ಮಾಜಿ ಕ್ರೀಡಾಸಚಿವ ಹಾಗೂ ಹಾಲಿ ಕಾನೂನು ಸಚಿವ ಕಿರಣ್ ರಿಜಿಜು, ಬೇಸರ ಮಾಡಿಕೊಳ್ಳಬೇಡಿ. ನೀವೀಗಾಗಲೇ ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದೀರ. ನೀಮಗಿನ್ನೂ ಒಲಿಂಪಿಕ್ಸ್ ಪದಕ ಗೆಲ್ಲುವ ಅವಕಾಶವಿದೆ. ಕಂಚಿನ ಪದಕದ ಪಂದ್ಯದಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ತೋರಿ ಎಂದು ಭಾರತಯ ಹಾಕಿ ತಂಡವನ್ನು ಟ್ವೀಟ್ ಮೂಲಕ ಹುರಿದುಂಬಿಸಿದ್ದಾರೆ.
