ಟೋಕಿಯೋ 2020: ಭಾರತ ಹಾಕಿ ತಂಡದ ಫೈನಲ್ ಕನಸು ಭಗ್ನ..!
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಪುರುಷರ ಹಾಕಿ ತಂಡಕ್ಕೆ ಸೆಮಿಫೈನಲ್‌ನಲ್ಲಿ ಸೋಲು
* ಬೆಲ್ಜಿಯಂ ಎದುರು 5-2 ಗೋಲು ಅಂತರದಲ್ಲಿ ಮನ್‌ಪ್ರೀತ್ ಪಡೆಗೆ ಸೋಲು
* ಕೊನೆಯ ಕ್ವಾರ್ಟರ್‌ನಲ್ಲಿ 3 ಗೋಲು ಬಾರಿಸಿ ಮಿಂಚಿದ ಬೆಲ್ಜಿಯಂ
ಟೋಕಿಯೋ(ಆ.03): ಅಲೆಕ್ಸಾಂಡರ್ ಹೆಂಡ್ರಿಕ್ಸ್ ಬಾರಿಸಿದ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಬೆಲ್ಜಿಯಂ ತಂಡವು 5-2 ಗೋಲುಗಳ ಅಂತರದಲ್ಲಿ ಭಾರತ ಹಾಕಿ ತಂಡವನ್ನು ರೋಚಕವಾಗಿ ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದರೊಂದಿಗೆ ಬರೋಬ್ಬರಿ 41 ವರ್ಷಗಳ ಬಳಿಕ ಫೈನಲ್‌ಗೇರುವ ಭಾರತ ಹಾಕಿ ತಂಡದ ಕನಸು ಸೆಮಿಫೈನಲ್‌ನಲ್ಲೇ ಭಗ್ನವಾಗಿದೆ. ಇದೀಗ ಆಗಸ್ಟ್ 05ರಂದು ನಡೆಯಲಿರುವ ಪಂದ್ಯದಲ್ಲಿ ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡವು ಕಂಚಿನ ಪದಕಕ್ಕಾಗಿ ಜರ್ಮನಿ ಇಲ್ಲವೇ ಆಸ್ಟ್ರೇಲಿಯಾ ನಡುವೆ ಕಾದಾಟ ನಡೆಸಲಿದೆ
ಮೊದಲ ಕ್ವಾರ್ಟರ್‌ನ ಎರಡನೇ ನಿಮಿಷದಲ್ಲೇ ಬೆಲ್ಜಿಯಂ ಗೋಲು ಬಾರಿಸುವ ಮೂಲಕ ತನ್ನ ಖಾತೆ ಆರಂಭಿಸಿತು. ಪೆನಾಲ್ಟಿ ಕಾರ್ನರ್ ಅವಕಾಶ ಪಡೆದುಕೊಂಡ ಬೆಲ್ಜಿಯಂ ಗೋಲು ಬಾರಿಸಿ 1-0 ಮುನ್ನಡೆ ಸಾಧಿಸಿತು. ಆರಂಭಿಕ ಹಿನ್ನಡೆಯಿಂದ ಎಚ್ಚೆತ್ತುಕೊಂಡ ಭಾರತ ತಂಡ ಚುರುಕಿನ ಆಟಕ್ಕೆ ಮೊರೆ ಹೋಯಿತು. ಏಳನೇ ನಿಮಿಷದಲ್ಲಿ ಸಿಕ್ಕ ಎರಡನೇ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಹರ್ಮನ್‌ಪ್ರೀತ್ ಗೋಲಾಗಿ ಪರಿವರ್ತಿಸುವ ಮೂಲಕ 1-1ರ ಸಮಬಲ ಸಾಧಿಸುವಂತೆ ಮಾಡಿದರು. ಇದಾದ ಮರು ನಿಮಿಷದಲ್ಲೇ ಮನ್ದೀಪ್ ಸಿಂಗ್ ಆಕರ್ಷಕ ಗೋಲು ಬಾರಿಸುವ ಮೂಲಕ ಭಾರತಕ್ಕೆ 2-1ರ ಮುನ್ನಡೆ ಒದಗಿಸಿಕೊಟ್ಟರು. ಮೊದಲ ಕ್ವಾರ್ಟರ್ ಅಂತ್ಯದ ವೇಳೆಗೆ ಭಾರತ 2-1ರ ಮುನ್ನಡೆ ಸಾಧಿಸಿತ್ತು.
ಟೋಕಿಯೋ 2020: ಭಾರತ-ಬೆಲ್ಜಿಯಂ ಪುರುಷರ ಹಾಕಿ ಸೆಮೀಸ್ ಆರಂಭ
ಇನ್ನು ಎರಡನೇ ಕ್ವಾರ್ಟರ್‌ನಲ್ಲಿ ಎರಡು ತಂಡಗಳು ಚೆಂಡಿನ ಮೇಲೆ ಹಿಡಿತ ಸಾಧಿಸಲು ಸಾಕಷ್ಟು ಪೈಪೋಟಿ ನಡೆಸಿದವು. ಎರಡನೇ ಕ್ವಾರ್ಟರ್‌ನ ನಾಲ್ಕನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬೆಲ್ಜಿಯಂ ಗೋಲಾಗಿ ಪರಿವರ್ತಿಸಿ 2-2ರ ಸಮಬಲ ಸಾಧಿಸುವಂತೆ ಮಾಡಿದರು. ಇನ್ನು ದ್ವಿಇತಿಯಾರ್ಧ ಮುಕ್ತಾಯಕ್ಕೆ ಕೊನೆಯ 3 ನಿಮಿಷಗಳಿದ್ದಾಗ ಬೆಲ್ಜಿಯಂಗೆ ಮತ್ತೊಮ್ಮೆ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಆದರೆ ಬೆಲ್ಜಿಯಂ ಪ್ರಯತ್ನವನ್ನು ಭಾರತ ವಿಫಲಗೊಳಿಸಿತು. ಇನ್ನು ಎರಡನೇ ಕ್ವಾರ್ಟರ್‌ನ ಕೊನೆಯ ನಿಮಿಷದಲ್ಲಿ ಭಾರತಕ್ಕೂ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತಾದರೂ ಹರ್ಮನ್‌ಪ್ರೀತ್ ಅದನ್ನು ಸದುಪಯೋಗ ಪಡಿಸಿಕೊಳ್ಳಲು ವಿಫಲರಾದರು. ಮೊದಲಾರ್ಧದ ಅಂತ್ಯದ ವೇಳೆಗೆ ಉಭಯ ತಂಡಗಳು 2-2ರ ಸಮಬಲ ಸಾಧಿಸಿದ್ದವು.
ಇನ್ನು ಮೂರನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳು ಗೋಲು ಬಾರಿಸಲು ಸಾಕಷ್ಟು ಪ್ರಯತ್ನಿಸಿದವಾದರೂ ಯಶಸ್ವಿಯಾಗಲಿಲ್ಲ. ಹೀಗಾಗಿ ಮೂರನೇ ಕ್ವಾರ್ಟರ್ ಮುಕ್ತಾಯದ ವೇಳೆಗೆ ಉಭಯ ತಂಡಗಳು 2-2ರ ಸಮಬಲ ಸಾಧಿಸಿದ್ದವು. ಇನ್ನು ನಿರ್ಣಾಯಕ ಕ್ವಾರ್ಟರ್‌ನಲ್ಲಿ ಪಂದ್ಯದ 48ನೇ ನಿಮಿಷದಲ್ಲಿ ಹೆಂಡ್ರಿಕ್ಸ್ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಬಾರಿಸುವ ಮೂಲಕ ಬೆಲ್ಜಿಯಂಗೆ 3-2ರ ಮುನ್ನಡೆ ಒದಗಿಸಿಕೊಟ್ಟರು. ಇನ್ನು ಪಂದ್ಯ ಮುಕ್ತಾಯಕ್ಕೆ ಕೊನೆಯ ಎಂಟು ನಿಮಿಷಗಳಿದ್ದಾಗ ಸಿಕ್ಕ ಪೆನಾಲ್ಟಿ ಸ್ಟ್ರೋಕ್ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡ ಅಲೆಕ್ಸಾಂಡರ್ ಹೆಂಡ್ರಿಕ್ಸ್ ಹ್ಯಾಟ್ರಿಕ್ ಗೋಲು ಬಾರಿಸುವ ಮೂಲಕ ಬೆಲ್ಜಿಯಂಗೆ 4-2ರ ಮುನ್ನಡೆ ಒದಗಿಸಿಕೊಟ್ಟರು. ಕೊನೆಯ ನಿಮಿಷದಲ್ಲಿ ಬೆಲ್ಜಿಯಂ ಮತ್ತೊಂದು ಗೋಲು ಬಾರಿಸಿ ಅನಾಯಾಸವಾಗಿ ಗೆಲುವಿನ ನಗೆ ಬೀರಿತು. ಕೊನೆಯ ಕ್ವಾರ್ಟರ್‌ನಲ್ಲಿ ಆಕ್ರಮಣಕಾರಿ ಆಟವಾಡಿ 3 ಗೋಲು ಬಾರಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿತು.