ಟೋಕಿಯೋ 2020: ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಬಾಕ್ಸರ್ ಸತೀಶ್ ಕುಮಾರ್
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಸತೀಶ್ ಕುಮಾರ್
* ಪುರುಷ ಸೂಪರ್ ಹೆವಿವೇಟ್ ಬಾಕ್ಸಿಂಗ್ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಸತೀಶ್
* ಕ್ವಾರ್ಟರ್‌ಫೈನಲ್‌ಗೇರಿದ ಮೂರನೇ ಬಾಕ್ಸರ್ ಎನ್ನುವ ಕೀರ್ತಿ ಸತೀಶ್ ಪಾಲು
ಟೋಕಿಯ(ಜು.29): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಗುರುವಾರ ಅದೃಷ್ಟದ ವಾರವಾಗಿ ಬದಲಾಗಿದ್ದು, ಭಾರತ ಹಾಕಿ ತಂಡ. ಪಿ.ವಿ ಸಿಂಧು, ಆತನು ದಾಸ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಇದೀಗ ಪುರುಷರ ಸೂಪರ್ ಹೆವಿವೇಟ್ ಬಾಕ್ಸಿಂಗ್ ವಿಭಾಗದಲ್ಲಿ ಸತೀಶ್ ಕುಮಾರ್ ಕೂಡಾ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು, ಜಮೈಕಾದ ರಿಕಾರ್ಡೊ ಬ್ರೌನ್ ಎದುರು 4-1 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಪದಕ ಗೆಲ್ಲುವ ಗುರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಇದಷ್ಟೇ ಅಲ್ಲದೇ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಮೂರನೇ ಭಾರತೀಯ ಬಾಕ್ಸರ್ ಎನ್ನುವ ಗೌರವಕ್ಕೂ ಸತೀಶ್ ಕುಮಾರ್ ಭಾಜನರಾಗಿದ್ದಾರೆ. ಈಗಾಗಲೇ ಮಹಿಳಾ ಬಾಕ್ಸರ್‌ಗಳಾದ ಲೊವ್ಲಿನಾ ಬೊರ್ಗೊಹೈನ್ ಹಾಗೂ ಪೂಜಾ ರಾಣಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಇನ್ನೊಂದು ಪಂದ್ಯ ಜಯಿಸಿದರೆ ಕನಿಷ್ಠ ಕಂಚಿನ ಪದಕ ಖಚಿತಪಡಿಸಿಕೊಳ್ಳಲಿದ್ದಾರೆ.
ಟೋಕಿಯೋ ಒಲಿಂಪಿಕ್ಸ್: ಪದಕ ಗೆಲ್ಲಲು ಲೊವ್ಲಿನಾಗೆ ಒಂದೇ ಜಯ ಸಾಕು!
ಮೊದಲ ಸುತ್ತಿನಲ್ಲೇ ಸತೀಶ್ ಕುಮಾರ್ ಡಿಫೆಂಡ್ ಮಾಡುವುದಕ್ಕಿಂತ ಹೆಚ್ಚಾಗಿ ಅಟ್ಯಾಕ್ ಮಾಡುವ ರಣತಂತ್ರ ಮೈಗೂಡಿಸಿಕೊಂಡರು. ಹೀಗಾಗಿ ಮೊದಲ ಸುತ್ತಿನ ಎಲ್ಲಾ 5 ತೀರ್ಪುಗಾರರು ಸತೀಶ್‌ಗೆ ಅಂಕ ನೀಡಿದರು. ಇನ್ನು ಎರಡನೇ ಸುತ್ತಿನಲ್ಲಿ ನಾಲ್ವರು ತೀರ್ಪುಗಾರರು ಸತೀಶ್ ಪರ ಅಂಕ ನೀಡಿದರೆ, ಓರ್ವ ಜಡ್ಜ್ ಮಾತ್ರ ಜಮೈಕಾ ಆಟಗಾರನಿಗೆ ಅಂಕ ನೀಡಿದರು. ಮೊದಲೆರಡು ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡ ಸತೀಶ್ ಆ ಬಳಿಕ ಚಾಣಾಕ್ಷ ರಣತಂತ್ರ ರೂಪಿಸಿಕೊಂಡು ಜಮೈಕಾ ಆಟಗಾರ ತಮಗೆ ಹೆಚ್ಚು ಪಂಚ್ ಮಾಡದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಸತೀಶ್ 4-1 ಅಂತರದಲ್ಲಿ ಗೆಲುವಿನ ನಗೆ ಬೀರಿದರು.