ಟೋಕಿಯೋ 2020: ಮೇರಿ ಕೋಮ್ ಹೋರಾಟ ಅಂತ್ಯ..!
* ಒಲಿಂಪಿಕ್ಸ್‌ನಲ್ಲಿ ಮತ್ತೊಂದು ಪದಕ ಗೆಲ್ಲುವ ಮೇರಿ ಕೋಮ್ ಕನಸು ಭಗ್ನ
* ಪ್ರೀಕ್ವಾರ್ಟರ್ ಫೈನಲ್‌ನಲ್ಲಿ ಕೊಲಂಬಿಯಾ ಬಾಕ್ಸರ್ ಎದುರು ಸೋಲುಂಡ ಮೇರಿ
* 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದ ಮೇರಿ ಕೋಮ್
ಟೋಕಿಯೋ(ಜು.29): ಆರು ಬಾರಿ ವಿಶ್ವ ಚಾಂಪಿಯನ್, ಭಾರತದ ಪದಕ ಭರವಸೆ ಎನಿಸಿದ್ದ ಬಾಕ್ಸರ್ ಮೇರಿ ಕೋಮ್ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ. ಕೊಲಂಬಿಯಾದ ಇಂಗ್ರಿತ್ ವೆಲೆನ್ಷಿಯಾ ಎದುರು ಪ್ರೀಕ್ವಾರ್ಟರ್ ಫೈನಲ್‌ನಲ್ಲಿ ಮೇರಿ 2-3 ಅಂಕಗಳ ಅಂತರದಲ್ಲಿ ಶರಣಾಗಿದ್ದಾರೆ.
2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಮೇರಿ, 2016ರ ರಿಯೋ ಒಲಿಂಪಿಕ್ಸ್ ಕಂಚಿತ ಪದಕ ವಿಜೇತೆ ಕೊಲಂಬಿಯಾ ಆಟಗಾರ್ತಿಗೆ ಶರಣಾಗಿದ್ದಾರೆ. ಮೊದಲ ಸುತ್ತಿನಲ್ಲಿ ನಾಲ್ವರು ತೀರ್ಪುಗಾರರು ಇಂಗ್ರಿತ್ ವೆಲೆನ್ಷಿಯಾ ಪರ ತೀರ್ಪನ್ನಿತ್ತರೆ, ಕೇವಲ ಓರ್ವ ಜಡ್ಜ್ ಮಾತ್ರ ಮೇರಿ ಪರ ಅಂಕ ನೀಡಿದರು. ಇನ್ನು ಎರಡನೇ ಸುತ್ತಿನಲ್ಲಿ ಮೇರಿ ಆಕ್ರಮಣಕಾರಿ ಪಂಚ್‌ಗಳ ಮೂಲಕ ಗಮನ ಸೆಳೆದರು. ಎರಡನೇ ಸುತ್ತಿನಲ್ಲಿ ಮೂವರು ಜಡ್ಜ್‌ಗಳು ಮೇರಿ ಪರ ತೀರ್ಪು ನೀಡಿದರೆ, ಇಬ್ಬರು ತೀರ್ಪುಗಾರರ ಇಂಗ್ರಿತ್ ವೆಲೆನ್ಷಿಯಾ ಪರ ಅಂಕ ನೀಡಿದರು.
ಟೋಕಿಯೋ 2020: ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಬಾಕ್ಸರ್ ಸತೀಶ್ ಕುಮಾರ್
ಇನ್ನು ನಿರ್ಣಾಯಕ ಸುತ್ತಿನಲ್ಲಿ ಕೂಡ 38 ವರ್ಷದ ಮೇರಿ 3-2ರ ಮುನ್ನಡೆ ಪಡೆದರಾದರೂ, ಮೊದಲ ಸುತ್ತಿನಲ್ಲಿ ಅನುಭವಿಸಿದ್ದ ಹಿನ್ನೆಡೆಯಿಂದಾಗಿ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರಬೀಳಬೇಕಾಯಿತು. ಮೇರಿ ತಾವು ಸೋತರೂ ಎದುರಾಳಿ ಆಟಗಾರ್ತಿಯನ್ನು ತಬ್ಬಿಕೊಂಡು ಅಭಿನಂದಿಸಿದರು.