ಬ್ರಿಟನ್ ಎದುರು ಗೆದ್ದರೂ ಒಲಿಂಪಿಕ್ಸ್ ಕೂಟದಿಂದ ಹೊರಬಿದ್ದ ಸಾತ್ವಿಕ್-ಚಿರಾಗ್ ಶೆಟ್ಟಿ ಜೋಡಿ..!
* 2 ಪಂದ್ಯ ಗೆದ್ದರೂ ಆಘಾತಕಾರಿಯಾಗಿ ಒಲಿಂಪಿಕ್ಸ್‌ನಿಂದ ಹೊರಬಿದ್ದ ಭಾರತದ ಬ್ಯಾಡ್ಮಿಂಟನ್ ತಂಡ
* ಬ್ರಿಟನ್ ಎದುರು ನೇರ ಗೇಮ್‌ಗಳಿಂದ ಗೆದ್ದು, ಕೂಟದಿಂದ ಹೊರಬಿದ್ದ ಭಾರತದ ಜೋಡಿ
* ಸಾತ್ವಿಕ್‌ರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿಗೆ ಎದುರಾಯ್ತು ದೊಡ್ಡ ನಿರಾಸೆ
ಟೋಕಿಯೋ(ಜು.27): ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲು ಪ್ರತಿಭೆಯೊಂದೇ ಇದ್ದರೆ ಸಾಲದು, ಒಮ್ಮೊಮ್ಮೆ ಅದೃಷ್ಟವೂ ಬೇಕಾಗುತ್ತದೆ ಎನ್ನುವುದು ಭಾರತ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ತಂಡದ ವಿಚಾರದಲ್ಲಿ ಮತ್ತೊಮ್ಮೆ ಸಾಬೀತಾಗಿದೆ. 10ನೇ ಶ್ರೇಯಾಂಕ ಹೊಂದಿದ್ದ ಭಾರತದ ಸಾತ್ವಿಕ್‌ರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಚೊಚ್ಚಲ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ವಿರೋಚಿತ ಪ್ರದರ್ಶನದ ಹೊರತಾಗಿಯೂ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೇರಲು ವಿಫಲವಾಗಿದ್ದು ಮಾತ್ರ ವಿಪರ್ಯಾಸ.
'ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದ ಸಾತ್ವಿಕ್‌ರಾಜ್ ಹಾಗೂ ಚಿರಾಗ್ ಶೆಟ್ಟಿ ಜೋಡಿ ಮೊದಲ ಪಂದ್ಯದಲ್ಲೇ ಮೂರನೇ ಶ್ರೇಯಾಂಕಿತ ಚೈನೀಸ್ ತೈಪೆ ಜೋಡಿ ಎದುರು 21-16, 16-21 ಹಾಗೂ 27-25 ಗೇಮ್‌ಗಳಿಂದ ಗೆಲುವು ಸಾಧಿಸುವ ಮೂಲಕ ದೈತ್ಯ ಸಂಹಾರ ಮಾಡಿ ಒಲಿಂಪಿಕ್ಸ್‌ನಲ್ಲಿ ಶುಭಾರಂಭ ಮಾಡಿದ್ದರು. ಇದಾದ ಬಳಿಕ ವಿಶ್ವದ ನಂ.1 ತಂಡವಾದ ಇಂಡೋನೇಷ್ಯಾದ ಎದುರು ಭಾರತದ ಜೋಡಿ 21-13,21-12 ನೇರ ಗೇಮ್‌ಗಳಲ್ಲಿ ರೋಚಕ ಸೋಲು ಕಂಡಿತ್ತು. ಇನ್ನು ಇಂದು(ಜು.27) ನಡೆದ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಎದುರು ಭಾರತ ತಂಡ 21-17, 21-19 ನೇರ ಗೇಮ್‌ಗಳಲ್ಲಿ ಗೆಲುವು ದಾಖಲಿಸಿತಾದರೂ ಕ್ವಾರ್ಟರ್ ಫೈನಲ್‌ಗೇರಲು ವಿಫಲವಾಯಿತು.
ಟೋಕಿಯೋ 2020: ದೈತ್ಯ ಸಂಹಾರ ಮಾಡಿದ ಸಾತ್ವಿಕ್‌ರಾಜ್-ಚಿರಾಗ್ ಶೆಟ್ಟಿ ಜೋಡಿ
2 ಪಂದ್ಯ ಗೆದ್ದರೂ ಭಾರತ ಕ್ವಾರ್ಟರ್ ಫೈನಲ್‌ಗೇರಲಿಲ್ಲ ಏಕೆ?: ಗುಂಪು ಹಂತದಲ್ಲಿ ಇಂಡೋನೇಷ್ಯಾ, ಚೈನೀಸ್ ತೈಪೆ ಹಾಗೂ ಭಾರತ ತಂಡಗಳು ತಲಾ 2 ಗೆಲುವು ದಾಖಲಿಸಿವೆಯಾದರೂ, ಗೇಮ್ ಪಾಯಿಂಟ್ ಆಧಾರದಲ್ಲಿ ಇಂಡೋನೇಷ್ಯಾ ಹಾಗೂ ಚೈನೀಸ್ ತೈಪೆ ತಂಡಗಳು ನಾಕೌಟ್ ಪ್ರವೇಶಿಸುವಲ್ಲಿ ಯಶಸ್ವಿಯಾದವು. ಇಂಡೋನೇಷ್ಯಾ 5 ಗೇಮ್ ಪಾಯಿಂಟ್ ಗೆದ್ದು 2ರಲ್ಲಿ ಮಾತ್ರ ಸೋತಿತ್ತು. ಇನ್ನು ಚೈನೀಸ್ ತೈಪೆ ಕೂಡಾ 5 ಗೇಮ್ ಪಾಯಿಂಟ್ ಗೆದ್ದು, 3 ಗೇಮ್ ಪಾಯಿಂಟ್ ಸೋತಿತ್ತು. ಇನ್ನು ಚಿರಾಗ್ ಶೆಟ್ಟಿ-ಸಾತ್ವಿಕ್‌ರಾಜ್ ಅವರನ್ನೊಳಗೊಂಡ ಭಾರತ ತಂಡ 4 ಗೇಮ್ ಪಾಯಿಂಟ್ ಗೆದ್ದು 3 ಗೇಮ್ ಪಾಯಿಂಟ್‌ನಲ್ಲಿ ಸೋಲು ಅನುಭವಿಸಿತ್ತು. ಹೀಗಾಗಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಒಂದು ವೇಳೆ ಚೈನೀಸ್ ತೈಪೆ ಎದುರು ಭಾರತದ ಶಟ್ಲರ್‌ಗಳು ನೇರ ಗೇಮ್‌ಗಳಲ್ಲಿ(2-0 ಅಂತರದಲ್ಲಿ) ಭಾರತದ ಜೋಡಿ ಕ್ವಾರ್ಟರ್ ಫೈನಲ್ ಪ್ರವೇಶಿಸುತ್ತಿತ್ತು.
ಈಗಾಗಲೇ ಪುರುಷರ ಸಿಂಗಲ್ಸ್‌ನಲ್ಲಿ ಬಿ. ಸಾಯಿ ಕಿಶೋರ್ ಆಘಾತಕಾರಿ ಸೋಲು ಕಂಡು ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ. ಇನ್ನು ಪುರುಷರ ಡಬಲ್ಸ್ ವಿಭಾಗದ ಹೋರಾಟ ಕೂಡಾ ಅಂತ್ಯವಾಗಿದೆ. ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿರುವ ಪಿ.ವಿ. ಸಿಂಧು ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಡಲಾಗಿದೆ. ಸಿಂಧು ಈಗಾಗಲೇ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.