ಟೋಕಿಯೋ 2020: ದೈತ್ಯ ಸಂಹಾರ ಮಾಡಿದ ಸಾತ್ವಿಕ್‌ರಾಜ್-ಚಿರಾಗ್ ಶೆಟ್ಟಿ ಜೋಡಿ
* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಜೋಡಿಯ ಶುಭಾರಂಭ
* ಬಲಿಷ್ಠ ಚೈನೀಸ್ ತೈಪೆ ತಂಡಕ್ಕೆ ಸೋಲುಣಿಸಿದ ಚಿರಾಗ್ ಶೆಟ್ಟಿ-ಸಾತ್ವಿಕ್‌ರಾಜ್ ರಂಕಿರೆಡ್ಡಿ ಜೋಡಿ
* 497 ದಿನಗಳ ಬಳಿಕ ಮೊದಲ ಸೋಲು ಕಂಡ ಚೈನೀಸ್ ತೈಪೆ ಜೋಡಿ
ಟೋಕಿಯೋ(ಜು.24): ಸಾತ್ವಿಕ್‌ರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರನ್ನೊಳಗೊಂಡ ಭಾರತ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ತಂಡವು ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬಲಿಷ್ಠ ಚೈನೀಶ್ ತೈಪೆ ತಂಡವನ್ನು ಮಣಿಸಿ ಭರ್ಜರಿಯಾಗಿಯೇ ಶುಭಾರಂಭ ಮಾಡಿದೆ.
ಹೌದು, 'ಎ' ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ಪುರುಷರ ಡಬಲ್ಸ್ ತಂಡವು ವಿಶ್ವದ ಮೂರನೇ ಶ್ರೇಯಾಂಕಿಯ ಚೈನೀಸ್ ತೈಪೆ ಜೋಡಿಯಾದ ಯಂಗ್ ಲೀ ಮತ್ತು ಲಿನ್ ಚಾಂಗ್ ವ್ಯಾಂಗ್ ಎದುರು 21-16, 16-21 ಹಾಗೂ 27-25 ಗೇಮ್‌ಗಳಿಂದ ಜಯಿಸುವ ಮೂಲಕ ಕ್ರೀಡಾಕೂಟದಲ್ಲಿ ಶುಭಾರಂಭ ಮಾಡಿದೆ. ಸುಮಾರು 69 ನಿಮಿಷಗಳ ಕಾಲ ನಡೆದ ಪ್ರಬಲ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತದ ಜೋಡಿ ಕೊನೆಗೂ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಇದೇ ವೇಳೆ ಚೈನೀಸ್ ತೈಪೆ ಜೋಡಿ ಬರೋಬ್ಬರಿ 497 ದಿನಗಳ ಬಳಿಕ ಮೊದಲ ಸೋಲು ಕಂಡಿದೆ.
ಮೊದಲ ಗೇಮ್‌ನಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಭಾರತದ ಜೋಡಿ 21-16 ಅಂಕಗಳ ಅಂತರದಲ್ಲಿ ಮೊದಲ ಗೇಮ್‌ನಲ್ಲಿ ಗೆಲುವು ಸಾಧಿಸಿತು. ಆದರೆ ಎರಡನೇ ಗೇಮ್‌ನಲ್ಲಿ ಚೈನೀಸ್ ತೈಪೆ ಜೋಡಿ 16-21 ಅಂತರದಲ್ಲಿ ಗೆಲುವು ದಾಖಲಿಸುವ ಮೂಲಕ ತಿರುಗೇಟು ನೀಡಿತು. ಇನ್ನು ನಿರ್ಣಾಯಕ ಗೇಮ್‌ನಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಆದರೆ ಹೊಂದಾಣಿಯ ಆಟ ಪ್ರದರ್ಶಿಸಿ ಭಾರತದ ಜೋಡಿ ಕೊನೆಗೂ ದೈತ್ಯ ಸಂಹಾರ ಮಾಡುವಲ್ಲಿ ಯಶಸ್ವಿಯಾಯಿತು.
ಟೋಕಿಯೋ ಒಲಿಂಪಿಕ್ಸ್: ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ ಸೈಕೋಮ್ ಮೀರಾಬಾಯಿ ಚಾನು
ಇನ್ನು ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್‌ರಾಜ್ ರಂಕಿರೆಡ್ಡಿ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಇಂಡೋನೇಷ್ಯಾದ ಜೋಡಿಯಾದ ಸಂಜಯ ಕೆವಿನ್ ಸುಕಮೌಲ್ಜೊ ಹಾಗೂ ಫೆರ್ನಾಲ್ಡಿ ಮಾರ್ಕಸ್ ಗಿಡಿನೊ ಜೋಡಿ ಎದುರು ಸೆಣಸಾಟ ನಡೆಸಲಿದೆ.
ಸಾಯಿ ಪ್ರಣೀತ್‌ಗೆ ನಿರಾಸೆ: ಪುರುಷರ ಸಿಂಗಲ್ಸ್‌ನ ಭಾರತದ ತಾರಾ ಆಟಗಾರ ಬಿ ಸಾಯಿ ಪ್ರಣೀತ್ ಮೊದಲ ಸುತ್ತಿನಲ್ಲಿ ಇಸ್ರೇಲ್ ಆಟಗಾರನ ಎದುರು ಆಘಾತಕಾರಿ ಸೋಲು ಕಂಡಿದ್ದಾರೆ. ವಿಶ್ವದ 15ನೇ ಶ್ರೇಯಾಂಕಿತ ಸಾಯಿ ಪ್ರಣೀತ್, ಇಸ್ರೇಲ್‌ನ ಮಿಶಾ ಜಿಲ್ಬರ್‌ಮ್ಯಾನ್ ಎದುರು 21-17, 21-15 ನೇರ ಗೇಮ್‌ಗಳಲ್ಲಿ ಸೋಲು ಕಂಡರು.
'ಡಿ' ಗುಂಪಿನಲ್ಲಿ ಸಾಯಿ ಪ್ರಣೀತ್ 47ನೇ ಶ್ರೇಯಾಂಕಿತ ಆಟಗಾರನೆದುರು ಶರಣಾಗುವಂತಾಯಿತು. 2021ರ ಸ್ವಿಸ್ ಓಪನ್ ಟೂರ್ನಿಯಲ್ಲಿ ಇಸ್ರೇಲ್ ಆಟಗಾರನಿಗೆ ಸಾಯಿ ಪ್ರಣೀತ್ ಸೋಲುಣಿಸಿದ್ದರು. ಈ ಸೋಲು ಬಹುತೇಕ ಟೋಕಿಯೋ ಒಲಿಂಪಿಕ್ಸ್‌ನ ನಾಕೌಟ್ ಹಂತಕ್ಕೇರುವ ಸಾಯಿ ಪ್ರಣೀತ್ ಅವರ ಕನಸನ್ನು ಕ್ಷೀಣಿಸುವಂತೆ ಮಾಡಿದೆ.