ಟೋಕಿಯೋ ಒಲಿಂಪಿಕ್ಸ್: ಪಿ.ವಿ ಸಿಂಧುವಿಗೆ ಒಟ್ಟಿಗೆ ಐಸ್‌ಕ್ರೀಮ್ ತಿನ್ನೋಣವೆಂದ ಮೋದಿ
* ಟೋಕಿಯೋ ಒಲಿಂಪಿಕ್ಸ್ ಅಥ್ಲೀಟ್‌ಗಳ ಜತೆ ಮಾತುಕತೆ ನಡೆಸಿದ ಪ್ರಧಾನಿ ಮೋದಿ
* ಸಿಂಧುವಿನ ಜತೆ ಒಟ್ಟಿಗೆ ಐಸ್‌ಕ್ರೀಮ್ ತಿನ್ನುವ ಮಾತುಕೊಟ್ಟ ಪ್ರಧಾನಿ
* ಸಿಂಧು. ಮೇರಿ ಕೋಮ್ ಸೇರಿ 15 ಅಥ್ಲೀಟ್‌ಗಳ ಜತೆ ಮಾತುಕತೆ ನಡೆಸಿದ ಮೋದಿ
ನವದೆಹಲಿ(ಜು.13): ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್‌ಗೆ ದಿನಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ತುದಿಗಾಲಿನಲ್ಲಿ ನಿಂತಿರುವ ಅಥ್ಲೀಟ್‌ಗಳ ವರ್ಚುವಲ್ ವಿಡಿಯೋ ಮೂಲಕ ಮಾತುಕತೆ ನಡೆಸಿದ್ದಾರೆ.
ಈ ಪೈಕಿ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಅವರ ಜತೆ ಮೋದಿ ಮಾತುಕತೆ ನಡೆಸಿದರು. ಟೋಕಿಯೋ ಒಲಿಂಪಿಕ್ಸ್ ಕುರಿತಂತೆ ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಸಿಂಧು ಸಿದ್ದತೆಯ ಕುರಿತಂತೆ ವಿಚಾರಿಸಿದರು. ಇದೇ ವೇಳೆ ಸಿಂಧು ಜತೆ ಒಟ್ಟಿಗೆ ಐಸ್ ಕ್ರೀಮ್ ತಿನ್ನುವ ಮಾತುಗಳನ್ನು ಆಡಿದ್ದಾರೆ. ಕಳೆದ ರಿಯೋ ಒಲಿಂಪಿಕ್ಸ್ ವೇಳೆ ಫಿಟ್ನೆಸ್ ಕಾಪಾಡಿಕೊಳ್ಳುವ ಉದ್ದೇಶದಿಂದ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್ ಅವರು ಸಿಂಧು ಅವರಿಂದ ಮೊಬೈಲ್ ದೂರವಿಟ್ಟಿದ್ದನ್ನು, ಐಸ್‌ಕ್ರೀಮ್ ತಿನ್ನದಂತೆ ತಡೆದಿದ್ದನ್ನು ಮೋದಿ ಸ್ಮರಿಸಿಕೊಂಡರು. ಈ ವೇಳೆ ಕೋಚ್ ನಡೆಯನ್ನು ಸಿಂಧು ಸಮರ್ಥಿಸಿಕೊಂಡಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಕನಸು ಹೊತ್ತವರ ಜತೆ ಪ್ರಧಾನಿ ಮೋದಿ ಸ್ಪೂರ್ತಿಯ ಮಾತು
ನಿಮ್ಮ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಯಶಸ್ವಿಯಾಗಿ ಮುಗಿಸಿದ ಬಳಿಕ ಒಟ್ಟಿಗೆ ಐಸ್‌ಕ್ರೀಮ್ ತಿನ್ನೋಣ ಎಂದು ಮೋದಿ ಬ್ಯಾಡ್ಮಿಂಟನ್ ತಾರೆ ಸಿಂಧುಗೆ ತಿಳಿಸಿದ್ದಾರೆ. ಜತೆಗೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಯಶಸ್ವಿ ಪ್ರದರ್ಶನ ತೋರಿ ಎಂದು ಸಿಂಧುವಿಗೆ ಪ್ರಧಾನಿ ಶುಭ ಹಾರೈಸಿದ್ದಾರೆ.
ಇನ್ನು ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಬಾಕ್ಸರ್ ಮೇರಿ ಕೋಮ್ ಜತೆ ಮಾತನಾಡಿದ ಮೋದಿ, ನೀವು ಇಡೀ ದೇಶಕ್ಕೆ ಸ್ಪೂರ್ತಿ, ನಿಮ್ಮ ನೆಚ್ಚಿನ ಬಾಕ್ಸರ್ ಯಾರು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಮೊಹಮ್ಮದ್ ಅಲಿ ಅವರೇ ಸ್ಫೂರ್ತಿ, ಅವರನ್ನು ನೋಡಿಯೇ ಸ್ಪೂರ್ತಿಗೊಂಡು ಬಾಕ್ಸಿಂಗ್ ಆಡಲು ಆರಂಭಿಸಿದೆ ಎಂದು ಆರು ಬಾರಿಯ ವಿಶ್ವಚಾಂಪಿಯನ್ ಮೇರಿ ಕೋಮ್ ತಿಳಿಸಿದ್ದಾರೆ.
ಅಥ್ಲೀಟ್‌ಗಳ ಜತೆ ಪ್ರಧಾನಿ ಮೋದಿ ಸಂವಾದ ಇಲ್ಲಿದೆ ನೋಡಿ
ಪ್ರಧಾನಿ ನರೇಂದ್ರ ಮೋದಿ ಬಾಕ್ಸರ್ ಮೇರಿ ಕೋಮ್, ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಬ್ಯಾಡ್ಮಿಂಟನ್ ಪಟು ಪಿ.ವಿ. ಸಿಂಧು ಮಾತ್ರವಲ್ಲದೇ ಆರ್ಚರಿಪಟು ದೀಪಿಕಾ ಕುಮಾರಿ, ಪ್ರವೀಣ್ ಜಾಧವ್, ಜಾವಲಿನ್ ಪಟು ನೀರಜ್ ಚೋಪ್ರಾ, ದ್ಯುತಿ ಚಾಂದ್, ಆಶೀಸ್ ಕುಮಾರ್, ಸೌರಭ್ ಚೌಧರಿ, ಶರತ್ ಕಮಲ್, ಮನಿಕಾ ಭಾತ್ರಾ, ವಿನೇಶ್ ಫೋಗಟ್, ಸಾಜನ್ ಪ್ರಕಾಶ್, ಮನ್‌ಪ್ರೀತ್ ಸಿಂಗ್ ಜತೆ ಮೋದಿ ಮಾತುಕತೆ ನಡೆಸಿದ್ದಾರೆ.