ಟೋಕಿಯೋ 2020: ಚಿನ್ನದ ಹುಡುಗ ಚೋಪ್ರಾಗೆ KSRTC ‘ಗೋಲ್ಡನ್ ಪಾಸ್’
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಿಂಚಿದ ನೀರಜ್ ಚೋಪ್ರಾಗೆ ಕೆಎಸ್‌ಆರ್‌ಟಿಸಿ ಬಂಪರ್ ಆಫರ್
* ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾಗೆ ಗೋಲ್ಡನ್ ಪಾಸ್ ಘೋಷಿಸಿದ ಕೆಎಸ್‌ಆರ್‌ಟಿಸಿ
* ಕರ್ನಾಟಕದ ಅದಿತಿ ಅಶೋಕ್‌ಗೆ ಕೆಎಸ್‌ಆರ್‌ಟಿಸಿ ಉಚಿತ ಬಸ್ ಪಾಸ್ ಘೋಷಣೆ
ಬೆಂಗಳೂರು(ಆ.08): ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಚಿನ್ನ ಗೆದ್ದು ದೇಶದ ಗೌರವ ಹೆಚ್ಚಿಸಿರುವ ಜಾವೆಲಿನ್ ಥ್ರೋ ಪಟು ನೀರಜ್ ಜೋಪ್ರಾ ಅವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಆಜೀವ ‘ಗೋಲ್ಡನ್ ಪಾಸ್’ ಘೋಷಿಸಿದೆ. ಈ ಮೂಲಕ ನೀರಜ್ ಅವರ ಸಾಧನೆ ಹಾಗೂ ಯಶಸ್ಸನ್ನು ಸಂಭ್ರಮಿಸಿದೆ.
ಕೆಎಸ್‌ಅರ್‌ಟಿಸಿ ನಿಗಮದ 60ನೇ ವರ್ಷಾಚರಣೆ ಸಂದರ್ಭದಲ್ಲಿ ನೀರಜ್ ಚೋಪ್ರಾ ಅವರು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಇಂತಹ ಅಪರೂಪದ ಸನ್ನಿವೇಶದಲ್ಲಿ ಕೆಎಸ್‌ಆರ್‌ಟಿಸಿ ನಿಗಮದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಸಾಧಕರೊಬ್ಬರಿಗೆ ಗೋಲ್ಡನ್ ಪಾಸ್ ಘೋಷಿಸಲಾಗಿದೆ. ನೀರಜ್ ಜೋಪ್ರಾ ಅವರು ಜೀವಮಾನಪೂರ್ತಿ ‘ಗೋಲ್ಡನ್ ಪಾಸ್’ ಮುಖಾಂತರ ನಿಗಮದ ರಾಜ್ಯ ಹಾಗೂ ಅಂತರ್ ರಾಜ್ಯ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂದು ಕೆಎಸ್‌ಅರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ತಿಳಿಸಿದ್ದಾರೆ.
ಅದಿತಿಗೆ ಕೆಎಸ್‌ಆರ್‌ಟಿಸಿಯಿಂದ ಉಚಿತ ಬಸ್ ಪಾಸ್
ಬೆಂಗಳೂರು: ಒಲಿಂಪಿಕ್ಸ್‌ನ ಗಾಲ್ಫ್ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ನಾಲ್ಕನೇ ಸ್ಥಾನ ಪಡೆದ ಕರ್ನಾಟಕದ ಹೆಮ್ಮೆಯ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರಿಗೆ ಕೆಎಸ್‌ಆರ್‌ಟಿಸಿ ಉಚಿತ ಬಸ್ ಪಾಸ್ ಘೋಷಿಸಿದೆ.
ಟೋಕಿಯೋ 2020: ಬೆಳ್ಳಿಯೊಂದಿಗೆ ಆರಂಭ, ಚಿನ್ನದೊಂದಿಗೆ ಮುಕ್ತಾಯ!
ಅರ್ಜುನ ಪ್ರಶಸ್ತಿ ಪುರಸ್ಕೃತ ಕರ್ನಾಟಕದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರು ಒಲಿಪಿಂಕ್ಸ್‌ನಲ್ಲಿ ಪದಕ ಗೆಲ್ಲದಿದ್ದರೂ ತಮ್ಮ ಅತ್ಯುತ್ತಮ ಪ್ರದರ್ಶನದಿಂದ ಗಾಲ್ಫ್ ಪ್ರೀತಿಸುವ ದೇಶದ ಲಕ್ಷಾಂತರ ಜನರ ಮನಸು ಗೆದ್ದಿದ್ದಾರೆ. ಹೀಗಾಗಿ ಅವರ ಸಾಧನೆ ಅಭಿನಂದಿಸುತ್ತೇವೆ. ಇನ್ನು ಮುಂದೆ ನಿಗಮದ ಎಲ್ಲ ಮಾದರಿ ಬಸ್ಸುಗಳಲ್ಲಿ ಜೀವಮಾನಪೂರ್ತಿ ಉಚಿತವಾಗಿ ಪ್ರಯಾಣಿಸಲು ಬಸ್ ಪಾಸ್ ನೀಡುವುದಾಗಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ತಿಳಿಸಿದ್ದಾರೆ.
ವಿಶ್ವದ ಅಗ್ರ ಗಾಲ್ಫರ್‌ಗಳಿಗೆ ಪೈಪೋಟಿ ನೀಡಿದ ಅದಿತಿ!
ಅದಿತಿ ಸಾಧನೆ ಬಹಳ ಮಹತ್ವದ್ದು ಯಾಕೆ ಎಂದರೆ, ಅವರು ವಿಶ್ವದ ಅಗ್ರ ಗಾಲ್ಫರ್‌ಗಳಿಗೆ ಭರ್ಜರಿ ಪೈಪೋಟಿ ನೀಡಿ ಬಹುತೇಕ ಪದಕ ಗೆಲ್ಲುವ ಹಂತಕ್ಕೆ ಬಂದಿದ್ದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ ಅದಿತಿ 200ನೇ ಸ್ಥಾನದಲಿದ್ದಾರೆ. ಚಿನ್ನ ಗೆದ್ದ ನೆಲ್ಲಿ ಕೊಡಾ ವಿಶ್ವ ನಂ.1 ಸ್ಥಾನದಲ್ಲಿದ್ದಾರೆ. ಬೆಳ್ಳಿ ಗೆದ್ದ ಇನಾಮಿ ಮೊನೆ ವಿಶ್ವ ನಂ.28, ಕಂಚು ಗೆದ್ದ ಲೈಡಿಯಾ ಕೊ ವಿಶ್ವ ನಂ.11. ಇಂಥ ಬಲಿಷ್ಠ ಆಟಗಾರ್ತಿರಿಗೆ ಅದಿತಿ ಪ್ರದರ್ಶನ ಸಹಜವಾಗಿಯೇ ಅಚ್ಚರಿ ಮೂಡಿಸಿತು.