ಟೋಕಿಯೋ 2020: ಬೆಳ್ಳಿಯೊಂದಿಗೆ ಆರಂಭ, ಚಿನ್ನದೊಂದಿಗೆ ಮುಕ್ತಾಯ!

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕೊನೆಗೂ ಬಂಗಾರದ ಬೇಟೆಯಾಡಿದ ಭಾರತ

* ಮೊದಲ ದಿನ ಬೆಳ್ಳಿ ಕೊನೆಯ ದಿನ ದೇಶಕ್ಕೆ ಒಲಿದ ಚಿನ್ನ

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ 7 ಪದಕ ಗೆದ್ದ ಭಾರತ

Tokyo Olympics Mirabai Chanu to Neeraj Chopra India Starts with Silver ends with Gold Medal kvn

ಬೆಂಗಳೂರು(ಆ.08) ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಪರ್ಧೆಗಳು ಮುಕ್ತಾಯಗೊಂಡಿವೆ. ಬೆಳ್ಳಿಯೊಂದಿಗೆ ಆರಂಭಗೊಂಡಿದ್ದ ಭಾರತದ ಅಭಿಯಾನ, ಚಿನ್ನದ ಪದಕದೊಂದಿಗೆ ಮುಕ್ತಾಯಗೊಂಡಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ 7 ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಗರಿಷ್ಠ ಪದಕ ಜಯಿಸಿದ ಸಾಧನೆ ಮಾಡಿದೆ. ಈ ಹಿಂದೆ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ 6 ಪದಕ ಜಯಿಸಿತ್ತು.

ಕ್ರೀಡಾಕೂಟದ ಅಂತಿಮ ದಿನವಾದ ಭಾನುವಾರ ಭಾರತದ ಯಾವ ಸ್ಪರ್ಧೆಗಳು ಇಲ್ಲ. ಈ ಒಲಿಂಪಿಕ್ಸ್‌ ಹಲವು ವಿಷಯಗಳಿಂದ ವಿಶೇಷ ಎನಿಸುತ್ತದೆ. ಕ್ರೀಡಾಕೂಟದ ಮೊದಲ ದಿನವೇ ಭಾರತವೇ ಪದಕ ಖಾತೆ ತೆರೆದಿತ್ತು. ಮಹಿಳೆಯರ 49 ಕೆ.ಜಿ. ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದು ಮೀರಾಬಾಯಿ ಚಾನು ಇತಿಹಾಸ ಬರೆದಿದ್ದರು. ಭಾರತದ ಸ್ಪರ್ಧೆಯ ಅಂತಿಮ ದಿನ ನೀರಜ್‌ ಚೋಪ್ರಾ ಚಿನ್ನ ಜಯಿಸಿ, ಅದ್ಧೂರಿ ‘ಕ್ಲೈಮ್ಯಾಕ್ಸ್‌’ ನೀಡಿದ್ದಾರೆ.

ಶತಮಾನದ ಕಾಯುವಿಕೆಗೆ ಕೊನೆಗೂ ದೊರೆಯಿತು ಫಲ!

ಭಾರತಕ್ಕಿದು ಒಲಿಂಪಿಕ್ಸ್‌ ಅಥ್ಲೆಟಿಕ್ಸ್‌ನಲ್ಲಿ ಮೊದಲ ಚಿನ್ನದ ಪದಕ. ಒಟ್ಟಾರೆ ಅಥ್ಲೆಟಿಕ್ಸ್‌ನಲ್ಲಿ ಪದಕ ಗೆದ್ದ 2ನೇ ಕ್ರೀಡಾಪಟು ನೀರಜ್‌ ಚೋಪ್ರಾ. 1900ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನಾರ್ಮನ್‌ ಪ್ರಿಟ್‌ಚಾರ್ಡ್‌ 200 ಮೀ. ಓಟ ಹಾಗೂ 200 ಮೀ. ಹರ್ಡಲ್ಸ್‌ನಲ್ಲಿ ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ(ಐಒಸಿ) ಆ ಪದಕಗಳನ್ನು ಇನ್ನೂ ಭಾರತದ ಹೆಸರಿನಲ್ಲೇ ಗುರುತಿಸುತ್ತಿದೆ. ಆದರೆ ಈ ಬಗ್ಗೆ ಹಲವು ಸಂಶೋಧನೆಗಳು ನಡೆದಿದ್ದು, ನಾರ್ಮನ್‌ ಆ ಒಲಿಂಪಿಕ್ಸ್‌ನಲ್ಲಿ ಗ್ರೇಟ್‌ ಬ್ರಿಟನ್‌ ಪರ ಸ್ಪರ್ಧಿಸಿದ್ದರು ಎನ್ನಲಾಗಿದೆ.

ಒಲಿಂಪಿಕ್ಸ್‌ ಪದಕ ಗೆದ್ದವರಿಗೆ ಬಿಸಿಸಿಐ ಬಂಪರ್ ಬಹುಮಾನ..!

ಬಿಂದ್ರಾ ಬಳಿಕ ವೈಯಕ್ತಿಕ ಚಿನ್ನ ಗೆದ್ದ ಕ್ರೀಡಾಪಟು ನೀರಜ್‌

ಒಲಿಂಪಿಕ್ಸ್‌ನ ವೈಯಕ್ತಿಕ ಸ್ಪರ್ಧೆಗಳಲ್ಲಿ ಚಿನ್ನ ಗೆದ್ದ ಭಾರತದ 2ನೇ ಕ್ರೀಡಾಪಟು ನೀರಜ್‌ ಚೋಪ್ರಾ. 2008ರ ಬೀಜಿಂಗ್‌ ಒಲಿಂಪಿಕ್ಸ್‌ನ 10 ಮೀ. ಏರ್‌ ರೈಫಲ್‌ ಶೂಟಿಂಗ್‌ನಲ್ಲಿ ಅಭಿನವ್‌ ಬಿಂದ್ರಾ ಚಿನ್ನ ಗೆದ್ದಿದ್ದರು. 13 ವರ್ಷಗಳ ಬಳಿಕ ಭಾರತಕ್ಕೆ ಒಲಿಂಪಿಕ್ಸ್‌ ಚಿನ್ನ ದೊರೆತಿದೆ. ಭಾರತ ಪುರುಷರ ಹಾಕಿ ತಂಡ 8 ಚಿನ್ನದ ಪದಕಗಳನ್ನು ಜಯಿಸಿದೆ. ಒಟ್ಟಾರೆ ಒಲಿಂಪಿಕ್ಸ್‌ನಲ್ಲಿದು ಭಾರತಕ್ಕೆ 10ನೇ ಚಿನ್ನದ ಪದಕ.
 

Latest Videos
Follow Us:
Download App:
  • android
  • ios