Asianet Suvarna News Asianet Suvarna News

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸೆಕ್ಸ್‌ಗೆ ನಿಷೇಧ..!

* ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಕೋವಿಡ್ ಭೀತಿ

* ಒಲಿಂಪಿಕ್ಸ್‌ಗೆ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡ ಜಪಾನ್ ಸರ್ಕಾರ

* ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ ಜುಲೈ 23ರಿಂದ ಆರಂಭ

Japan Takes All Precautionary measures to fight against COVID 19 ahead of Tokyo Olympics kvn
Author
Tokyo, First Published Jul 20, 2021, 3:27 PM IST

ಟೋಕಿಯೋ(ಜು.20): ಜಪಾನ್‌ ಸರ್ಕಾರ ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ) ಸುರಕ್ಷಿತವಾಗಿ ಟೋಕಿಯೋ ಒಲಿಂಪಿಕ್ಸ್‌ ಆಯೋಜಿಸಲು ಹಗಲು-ರಾತ್ರಿ ಕಾರ್ಯನಿರ್ವಹಿಸುತ್ತಿದೆ. ಕೋವಿಡ್‌ ಆತಂಕವನ್ನು ದೂರಾಗಿಸಿ ಯಶಸ್ವಿಯಾಗಿ ಕ್ರೀಡಾಕೂಟ ನಡೆಸುವುದು ಜಪಾನ್‌ ಹಾಗೂ ಐಒಸಿಯ ಗುರಿಯಾಗಿದೆ. ಇದಕ್ಕಾಗಿ ಪರಿಸ್ಥಿತಿಗೆ ತಕ್ಕಂತೆ ನಿಯಮಗಳನ್ನು ಬದಲಿಸುತ್ತ, ಹೊಸ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.

ವಿದೇಶಿ ಪ್ರೇಕ್ಷಕರಿಗೆ ನಿಷೇಧ

2021ರ ಮಾರ್ಚ್‌ನಲ್ಲೇ  ಐಒಸಿ, ಕ್ರೀಡಾಕೂಟಕ್ಕೆ ವಿದೇಶಿ ಪ್ರೇಕ್ಷಕರಿಗೆ ನಿಷೇಧ ಹೇರಿತು. ಅಲ್ಲದೇ ಆಗಸ್ಟ್‌ ವರೆಗೂ ವಿದೇಶಿ ಪ್ರಯಾಣಿಕರಿಗೆ ಜಪಾನ್‌ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಕೇವಲ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವವರಿಗೆ ಮಾತ್ರ ಪ್ರವೇಶ ನೀಡಲಾಗಿದೆ. ವಿಮಾನ, ಹೋಟೆಲ್‌, ಪ್ರವಾಸೋದ್ಯಮ ಹೀಗೆ ಹಲವು ಕ್ಷೇತ್ರಗಳಿಗೆ ನೂರಾರು ಕೋಟಿ ನಷ್ಟಎದುರಾಗುತ್ತದೆಯಾದರೂ, ಕ್ರೀಡಾಪಟುಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಯಿತು. ಜೂನ್‌ನಲ್ಲಿ ಜಪಾನ್‌ನ ದೈನಂದಿನ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆಯಾದ ಕಾರಣ, ಸ್ಥಳೀಯ ಪ್ರೇಕ್ಷಕರಿಗೆ ಕ್ರೀಡಾಂಗಣಗಳಿಗೆ ಪ್ರವೇಶ ನೀಡಲು ನಿರ್ಧರಿಸಲಾಯಿತು.

ಪ್ರತಿ ಕ್ರೀಡಾಂಗಣಕ್ಕೆ ಸುಮಾರು 10,000 ಪ್ರೇಕ್ಷಕರಿಗೆ ಪ್ರವೇಶ ಸಿಗಲಿದೆ ಎಂದು ಐಒಸಿ ಘೋಷಿಸಿತು. ಜೊತೆಗೆ ಟಿಕೆಟ್‌ ಮಾರಾಟವೂ ಶುರುವಾಯಿತು. ಆದರೆ ಜಪಾನ್‌ ಹಾಗೂ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಕೋವಿಡ್‌ ಪರಿಸ್ಥಿತಿ ಮತ್ತೆ ನಿಯಂತ್ರಣ ತಪ್ಪಿದ ಕಾರಣ ಜು.8ರಂದು ಸ್ಥಳೀಯ ಪ್ರೇಕ್ಷಕರಿಗೂ ಪ್ರವೇಶ ನೀಡುವುದಿಲ್ಲ ಎಂದು ಘೋಷಿಸಿತು. ಕೇವಲ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಅಥ್ಲೀಟ್‌ಗಳು, ಸಿಬ್ಬಂದಿ ಹಾಗೂ ಆಯ್ದ ಮಾಧ್ಯಮಗಳಿಗೆ ಮಾತ್ರ ಪ್ರವೇಶ ದೊರೆಯಲಿದೆ.

ಲಸಿಕೆಗೆ ಮೊದಲ ಆದ್ಯತೆ

ಮೇ 2021ರಲ್ಲಿ ಐಒಸಿ ಅಧ್ಯಕ್ಷ ಥಾಮಸ್‌ ಬಾಚ್‌, ಒಲಿಂಪಿಕ್ಸ್‌ ಗ್ರಾಮದಲ್ಲಿ ಉಳಿಯಲಿರುವ ಶೇ.75ಕ್ಕೂ ಹೆಚ್ಚು ಮಂದಿ ಲಸಿಕೆ ಪಡೆದವರಾಗಿರಲಿದ್ದಾರೆ ಎಂದು ಘೋಷಿಸಿದರು. ಅಲ್ಲದೇ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ರಾಷ್ಟ್ರಗಳ ಕ್ರೀಡಾಪಟುಗಳಿಗೆ ಲಸಿಕೆ ಒದಗಿಸುವಂತೆ ಐಒಸಿ, ಅಮೆರಿಕದ ಫೈಝರ್‌ ಸಂಸ್ಥೆ ಜೊತೆ ಒಪ್ಪಂದಕ್ಕೆ ಸಹಿ ಹಾಕಿತು. ಇದರಿಂದ ಲಸಿಕೆ ಪಡೆದ ಕ್ರೀಡಾಪಟುಗಳ ಸಂಖ್ಯೆ ಏರಿಕೆಯಾಯಿತು.

ಮಾಸ್ಕ್‌ ಕಡ್ಡಾಯ, ನಿತ್ಯ ಕೋವಿಡ್‌ ಪರೀಕ್ಷೆ

ಜಪಾನ್‌ ಪ್ರವೇಶಿಸುವ ಕೆಲ ದಿನ ಮೊದಲಿನಿಂದ ಕ್ರೀಡಾಕೂಟ ಮುಗಿಸಿ ತಮ್ಮ ತಮ್ಮ ದೇಶಗಳಿಗೆ ವಾಪಸಾಗುವ ವರೆಗೂ ಏನೆಲ್ಲಾ ನಿಯಮಗಳನ್ನು ಪಾಲಿಸಬೇಕು ಎನ್ನುವುದನ್ನು ಐಒಸಿ ‘ದಿ ಪ್ಲೇಬುಕ್‌’ ಎನ್ನುವ ಹೆಸರಿನಲ್ಲಿ ಪ್ರಕಟಗೊಳಿಸಿತು. ಐಒಸಿಯ ಮಾರ್ಗಸೂಚಿ ಪ್ರಕಾರ ಕ್ರೀಡಾಪಟುಗಳು ಜಪಾನ್‌ಗೆ ಹೊರಡುವ ಕೆಲ ದಿನಗಳ ಮೊದಲು ಹಾಗೂ ಟೋಕಿಯೋ ತಲುಪಿದ ಬಳಿಕ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕು.

ಸ್ಪರ್ಧೆಯ ಸಮಯದಲ್ಲಿ ಹೊರತುಪಡಿಸಿ ಉಳಿದೆಲ್ಲಾ ಸಮಯದಲ್ಲಿ ಮಾಸ್ಕ್‌ ಧರಿಸಿರಬೇಕು. ಸಾಧ್ಯವಾದಷ್ಟು ದೈಹಿಕ ಅಂತರ ಕಾಯ್ದುಕೊಳ್ಳಬೇಕು ಎನ್ನುವ ನಿಯಮ ಜಾರಿ ಮಾಡಲಾಗಿದೆ. ಕ್ರೀಡಾಪಟುಗಳಿಗೆ ನಿತ್ಯ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತದೆ. ಅಲ್ಲದೇ ಎಲ್ಲೇ ಓಡಾಡುವುದಾದರೂ ಆಯೋಜಕರು ವ್ಯವಸ್ಥೆ ಮಾಡಿರುವ ವಾಹನಗಳನ್ನೇ ಬಳಸಬೇಕು. ಸಾರ್ವಜನಿಕ ಸಾರಿಗೆ ಬಳಕೆ ನಿಷೇಧಿಸಲಾಗಿದೆ.

ಟೋಕಿಯೋ ಒಲಿಂಪಿಕ್ಸ್‌: ಸುರಕ್ಷತೆಗೆ ಭಾರತ ಕೈಗೊಂಡ ಕ್ರಮಗಳೇನು?

ಲಸಿಕೆ ಹಾಕಿಸಿಕೊಂಡಿರುವ ಕ್ರೀಡಾಪಟುಗಳು ಮಾತ್ರ ಕ್ರೀಡಾ ಗ್ರಾಮದಲ್ಲಿ ಕೊಠಡಿಗಳನ್ನು ಹಂಚಿಕೊಳ್ಳಲಿದ್ದಾರೆ. ಉಳಿದವರು, ಹೋಟೆಲ್‌ ಇಲ್ಲವೇ ಕ್ರೀಡಾ ಗ್ರಾಮದಿಂದ ಹೊರಗೆ ವ್ಯವಸ್ಥೆ ಮಾಡಿರುವ ಸ್ಥಳಗಳಲ್ಲಿ ಉಳಿಯಲಿದ್ದಾರೆ. ಕ್ರೀಡಾ ಗ್ರಾಮದ ಊಟದ ಕೋಣೆಯಲ್ಲಿ ಟೇಬಲ್‌ಗಳ ಮಧ್ಯೆ ಗಾಜಿನ ಪಟ್ಟಿಗಳನ್ನು ಅಳವಡಿಸಲಾಗಿದೆ.

ಸೆಕ್ಸ್‌ಗೆ ನಿಷೇಧ!

ಕ್ರೀಡಾಪಟುಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗದಂತೆ ಸೂಚಿಸಲಾಗಿದೆ. ಪ್ರತಿ ಬಾರಿ ಕ್ರೀಡಾಪಟುಗಳಿಗೆ ಕಾಂಡೋಮ್‌ಗಳನ್ನು ನೀಡಲಾಗುತ್ತಿತ್ತು. ಆದರೆ ಈ ಬಾರಿ ಕ್ರೀಡಾಕೂಟ ಮುಕ್ತಾಯಗೊಂಡು ವಾಪಸಾಗುವಾಗ ಕಾಂಡೋಮ್‌ಗಳನ್ನು ಏಡ್ಸ್‌ ವಿರುದ್ಧ ಜಾಗೃತಿಗಾಗಿ ಸ್ಮರಣಿಕೆಯ ರೀತಿಯಲ್ಲಿ ನೀಡಲಾಗುತ್ತದೆ.

ವಿದೇಶಿ ವೈದ್ಯಕೀಯ ಸಿಬ್ಬಂದಿ ನೆರವು

ಸಾವಿರಾರು ಸ್ಥಳೀಯ ವೈದ್ಯಕೀಯ ಸಿಬ್ಬಂದಿ ಜೊತೆಗೆ ಐಒಸಿ ಹಲವು ದೇಶಗಳ ವೈದ್ಯಕೀಯ ಸಿಬ್ಬಂದಿಯನ್ನು ಜಪಾನ್‌ಗೆ ಕರೆಸಿಕೊಂಡಿದೆ. ಕ್ರೀಡಾಪಟುಗಳು, ಸಿಬ್ಬಂದಿ, ಅಧಿಕಾರಿಗಳು ಯಾರೇ ಸೋಂಕಿತರಾದರು ಅವರ ಐಸೋಲೇಷನ್‌, ಚಿಕಿತ್ಸೆ ವ್ಯವಸ್ಥೆಯನ್ನು ವಿದೇಶಿ ವೈದ್ಯಕೀಯ ಸಿಬ್ಬಂದಿ ನೋಡಿಕೊಳ್ಳಲಿದ್ದಾರೆ. ಕ್ರೀಡಾ ಗ್ರಾಮದಲ್ಲೂ ತುರ್ತು ಚಿಕಿತ್ಸೆಗೆ ಬೇಕಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ.

ತಾವೇ ಪದಕ ಹಾಕಿಕೊಳ್ಳಲಿರುವ ಅಥ್ಲೀಟ್ಸ್‌

ಈ ಬಾರಿ ಪದಕ ಗೆಲ್ಲುವ ಕ್ರೀಡಾಪಟುಗಳು ತಮಗೆ ತಾವೇ ಪದಕ ಹಾಕಿಕೊಳ್ಳಲಿದ್ದಾರೆ. ಕೋವಿಡ್‌ ಆತಂಕದಿಂದಾಗಿ ಈ ಕ್ರಮಕ್ಕೆ ಆಯೋಜಕರು ಮುಂದಾಗಿದ್ದಾರೆ. ಈ ಹಿಂದಿನ ಕ್ರೀಡಾಕೂಟಗಳಲ್ಲಿ ಪದಕ ವಿತರಣೆ ಸಮಾರಂಭದ ವೇಳೆ ಗಣ್ಯರು, ಕ್ರೀಡಾಪಟುಗಳ ಕೊರಳಿಗೆ ಪದಕ ಹಾಕುತ್ತಿದ್ದರು. ಆದರೆ ಈ ಬಾರಿ, ಸ್ಯಾನಿಟೈಸ್‌ ಮಾಡಿದ ಟ್ರೇನಲ್ಲಿ ಪದಕಗಳನ್ನು ಇಡಲಾಗುತ್ತದೆ. ಕ್ರೀಡಾಪಟುಗಳು ಅದನ್ನು ತೆಗೆದುಕೊಂಡು ಕೊರಳಿಗೆ ಹಾಕಿಕೊಳ್ಳಲಿದ್ದಾರೆ. ಕ್ರೀಡಾಪಟುಗಳಲ್ಲಿ ಕೊರೋನಾ ಭೀತಿ ಎದುರಾಗದಿರಲಿ ಎನ್ನುವ ಕಾರಣಕ್ಕೆ ಈ ಕ್ರಮ ಜಾರಿ ಮಾಡಲಾಗಿದೆ.

Follow Us:
Download App:
  • android
  • ios