ಪ್ರಧಾನಿ ಮೋದಿ ಸ್ಪೂರ್ತಿಯ ಮಾತಿಗೆ ಭಾವನಾತ್ಮಕ ಪ್ರತಿಕ್ರಿಯಿ ಕೊಟ್ಟ ಭವಾನಿ ದೇವಿ
* ಟೋಕಿಯೋ ಒಲಿಂಪಿಕ್ಸ್‌ನ ಫೆನ್ಸಿಂಗ್ ಸ್ಪರ್ಧೆಯಲ್ಲಿ ಮೊದಲ ಪಂದ್ಯ ಗೆದ್ದಿದ್ದ ಭವಾನಿ ದೇವಿ
* 32ನೇ ಸುತ್ತಿನಲ್ಲಿ ಫ್ರಾನ್ಸ್ ಫೆನ್ಸರ್‌ಗೆ ಶರಣಾಗಿದ್ದ ಭವಾನಿ
* ಭವಾನಿ ದೇವಿಗೆ ಸ್ಪೂರ್ತಿಯ ಮಾತುಗಳನ್ನಾಡಿ ಹುರಿದುಂಬಿಸಿದ ಪ್ರಧಾನಿ ಮೋದಿ
ನವದೆಹಲಿ(ಜು.27): ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದು ಮಾತ್ರವಲ್ಲದೇ ಮೊದಲ ಪಂದ್ಯದಲ್ಲೇ ಮಿಂಚಿನ ಪ್ರದರ್ಶನ ತೋರಿ ಗೆಲುವು ದಾಖಲಿಸಿದ್ದ ಫೆನ್ಸಿಂಗ್ ಪಟು ಭವಾನಿ ದೇವಿ ಸದ್ಯ ಟಾಕ್ ಆಫ್ ದಿ ಟೌನ್ ಎನಿಸಿದ್ದಾರೆ. 64ನೇ ಸುತ್ತಿನ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದ ಭವಾನಿ ದೇವಿ, 32ನೇ ಸುತ್ತಿನಲ್ಲಿ ಬಲಿಷ್ಠ ಫ್ರಾನ್ಸ್ ಆಟಗಾರ್ತಿ ಎದುರು ಶರಣಾಗಿದ್ದರು.
ವಿಶ್ವದ ಮೂರನೇ ಶ್ರೇಯಾಂಕಿತ ಫೆನ್ಸರ್ ಫ್ರಾನ್ಸ್‌ನ ಮೆನೊನ್ ಬ್ರುನೆಟ್ ಎದರು ಭವಾನಿ 15-7 ಅಂಕಗಳಿಂದ ಸೋಲನ್ನನುಭವಿಸಿದ್ದರು. ಮೊದಲಾರ್ಧದಲ್ಲೇ ಫ್ರಾನ್ಸ್ ಆಟಗಾರ್ತಿ 8-2 ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು. ದ್ವಿತಿಯಾರ್ಧದಲ್ಲಿ ಭವಾನಿ ಕಮ್‌ಬ್ಯಾಕ್ ಮಾಡಲು ಪ್ರಯತ್ನಿಸಿದರಾದರೂ ಅನುಭವಿ ಫ್ರಾನ್ಸ್ ಆಟಗಾರ್ತಿ ಎದುರು ಪ್ರಾಬಲ್ಯ ಮೆರೆಯಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಭವಾನಿ ದೇವಿಯ ಟೋಕಿಯೋ ಒಲಿಂಪಿಕ್ಸ್ ಪಯಣ ಅಂತ್ಯವಾಗಿದೆ.
ಟೋಕಿಯೋ 2020: ಗೆದ್ದು ಸೋತ ಫೆನ್ಸಿಂಗ್ ಪಟು ಭವಾನಿ ದೇವಿ
42ನೇ ಶ್ರೇಯಾಂಕಿತ ಫೆನ್ಸರ್ ಭವಾನಿ ದೇವಿ ತಮ್ಮ ಸೋಲಿನ ಬಳಿಕ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದರು. ನನ್ನ ಪಾಲಿಗಿಂದು ದೊಡ್ಡ ದಿನ. ಇದೊಂದು ರೀತಿ ಉತ್ಸಾಹ ಹಾಗೂ ಭಾವನಾತ್ಮಕತೆಯಿಂದ ಕೂಡಿದ ದಿನ. ಮೊದಲ ಪಂದ್ಯದಲ್ಲಿ ನಾಡಿಯಾ ಅಜಿಜಿ ವಿರುದ್ದ 15-3 ಅಂತರದಲ್ಲಿ ಜಯಿಸುವ ಮೂಲಕ ಫೆನ್ಸಿಂಗ್‌ನಲ್ಲಿ ಒಲಿಂಪಿಕ್ಸ್‌ನಲ್ಲಿ ಮೊದಲ ಪಂದ್ಯ ಗೆದ್ದ ಭಾರತೀಯಳು ಎನಿಸಿಕೊಂಡೆ. ಆದರೆ ಎರಡನೇ ಪಂದ್ಯದಲ್ಲಿ ವಿಶ್ವದ ಮೂರನೇ ಶ್ರೇಯಾಂಕಿತೆ ಮೆನೊನ್ ಬ್ರುನೆಟ್ ಎದುರು 7/15 ಅಂತರದಲ್ಲಿ ಸೋಲನ್ನು ಅನುಭವಿಸಿದೆ. ಗೆಲ್ಲಲು ಶಕ್ತಿಮೀರಿ ಪ್ರಯತ್ನಿಸಿದೆ, ಆದರೆ ಯಶಸ್ವಿಯಾಗಲಿಲ್ಲ. ಕ್ಷಮೆಯಿರಲಿ ಎಂದು ಭವಾನಿ ಟ್ವೀಟ್ ಮಾಡಿದ್ದರು.
ಮುಂದುವರೆದು, ಪ್ರತಿ ಅಂತ್ಯವು ಮತ್ತೊಂದು ಆರಂಭಕ್ಕೆ ದಾರಿ. ಇಲ್ಲಿಗೆ ನನ್ನ ಹೋರಾಟ ಬಿಡುವುದಿಲ್ಲ, ಮತ್ತೆ ಅಭ್ಯಾಸ ಮುಂದುವರೆಸುತ್ತೇನೆ. ಕಠಿಣ ಪರಿಶ್ರಮ ಹಾಕಿ ಮುಂಬರುವ ಫ್ರಾನ್ಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮೂಲಕ ನನ್ನ ದೇಶ ಹೆಮ್ಮೆ ಪಡುವಂತೆ ಮಾಡುತ್ತೇನೆ. ನನ್ನ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ಭವಾನಿ ದೇವಿ ಟ್ವೀಟ್ ಮಾಡಿದ್ದರು.
ಫೆನ್ಸರ್ ಭವಾನಿ ದೇವಿ ಅವರ ಟ್ವೀಟ್‌ಗೆ ತಕ್ಷಣ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ನೀವು ನಿಮ್ಮ ಉತ್ತಮ ಪ್ರದರ್ಶನವನ್ನು ತೋರಿದ್ದೀರ. ಸೋಲು ಗೆಲುವು ಜೀವನದ ಭಾಗಗಳಷ್ಟೇ. ನಿಮ್ಮ ಕೊಡುಗೆಯ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ನಮ್ಮ ಪ್ರಜೆಗಳಿಗೆ ನೀವು ಸ್ಪೂರ್ತಿಯಾಗಿದ್ದೀರ ಎಂದು ಟ್ವೀಟ್ ಮಾಡಿ ಭವಾನಿ ದೇವಿ ಅವರನ್ನು ಹುರಿದುಂಬಿಸಿದ್ದಾರೆ.
ಇದಕ್ಕೆ ಭಾವನಾತ್ಮಕ ಪ್ರತಿಕ್ರಿಯೆ ನೀಡಿದ ಭವಾನಿ ದೇವಿ ಸ್ವತಃ ಸ್ಪೂರ್ತಿಯ ಐಕಾನ್ ಅಗಿರುವ ನೀವೇ ನನಗೆ ದೇಶದ ಸ್ಪೂರ್ತಿಯಾಗಿದ್ದೀರ ಅಂದರೆ ಇದಕ್ಕಿಂತ ಇನ್ನೇನು ಬೇಕು? ನಿಮ್ಮ ಮಾತುಗಳು ನನ್ನನ್ನು ಮತ್ತಷ್ಟು ಹುರಿದುಂಬಿಸಿದೆ ಮೋದಿಯವರೇ. ನಾನು ಪಂದ್ಯ ಸೋತರೂ ನನ್ನ ಜತೆ ನಿಂತಿರಿ. ನಿಮ್ಮ ಈ ಪ್ರತಿಕ್ರಿಯೆ ಮತ್ತು ನಾಯಕತ್ವದ ಗುಣ ನನ್ನಲ್ಲಿ ಮತ್ತಷ್ಟು ಆತ್ಮವಿಶ್ವಾಸ ತುಂಬಿದೆ. ಇದಷ್ಟೇ ಅಲ್ಲದೇ ಮುಂಬರುವ ದಿನಗಳಲ್ಲಿ ಭಾರತ ಪ್ರತಿನಿಧಿಸಿ ಪಂದ್ಯವನ್ನು ಗೆಲ್ಲಲು ಹುರುಪು ಬಂದಿದೆ ಎಂದು ಟ್ವೀಟ್ ಮಾಡಿದ್ದಾರೆ.