ಟೋಕಿಯೋ 2020: ಗೆದ್ದು ಸೋತ ಫೆನ್ಸಿಂಗ್ ಪಟು ಭವಾನಿ ದೇವಿ
* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಫೆನ್ಸರ್ ಭವಾನಿ ದೇವಿ ಹೋರಾಟ ಅಂತ್ಯ
* ಮೊದಲ ಪಂದ್ಯ ಗೆದ್ದು ದಾಖಲೆ ನಿರ್ಮಿಸಿದ್ದ ಭಾರತ ಫೆನ್ಸರ್ ಭವಾನಿ
* 32ನೇ ಸುತ್ತಿನಲ್ಲಿ ಬಲಿಷ್ಠ ಫ್ರಾನ್ಸ್ ಆಟಗಾರ್ತಿಗೆ ಶರಣಾದ ಭವಾನಿ
ಟೋಕಿಯೋ(ಜು.26): ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಫೆನ್ಸಿಂಗ್‌ನಲ್ಲಿ ಇದೇ ಮೊದಲ ಬಾರಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದ ಸಿ.ಎ. ಭವಾನಿ ದೇವಿ ಮೊದಲ ಪಂದ್ಯವನ್ನು ಗೆದ್ದು ಇತಿಹಾಸ ನಿರ್ಮಿಸಿದ್ದರು. ಆದರೆ 32ನೇ ಸುತ್ತಿನಲ್ಲಿ ಫ್ರಾನ್ಸ್‌ನ ಮನೊನ್ ಬೆರ್ನೊಟ್ ಎದುರು ಮುಗ್ಗರಿಸುವ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ.
27 ವರ್ಷದ ಭವಾನಿ ದೇವಿ ಸೋಮವಾರ ಮುಂಜಾನೆ ನಡೆದ ಮೊದಲ ಪಂದ್ಯದಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದರು. 64ನೇ ಸುತ್ತಿನ ಪಂದ್ಯದಲ್ಲಿ ತ್ಸುಸಿಯಾದ ನಾಡಿಯಾ ಬೆನ್ ಅಜಿಜಿ ಎದುರು 15-3 ಅಂಕಗಳಿಂದ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದರು. ಇದರೊಂದಿಗೆ ಒಲಿಂಪಿಕ್ಸ್‌ನ ಫೆನ್ಸಿಂಗ್‌ನಲ್ಲಿ ಗೆಲುವು ದಾಖಲಿಸಿದ ಭಾರತದ ಮೊದಲ ಸ್ಪರ್ಧಿ ಎನ್ನುವ ದಾಖಲೆಗೆ ಭವಾನಿ ದೇವಿ ಪಾತ್ರರಾಗಿದ್ದರು.
ಟೋಕಿಯೋ 2020 : ಫೈನಲ್ಸ್‌ಗೇರಲು ವಿಫಲರಾದ ಜಿಮ್ನಾಸ್ಟಿಕ್ಸ್ ಪಟು ಪ್ರಣತಿ ನಾಯಕ್
ಆದರೆ 32 ಸುತ್ತಿನ ಸ್ಫರ್ಧೆಯಲ್ಲಿ ವಿಶ್ವದ ಮೂರನೇ ಶ್ರೇಯಾಂಕಿನ ಫೆನ್ಸರ್ ಫ್ರಾನ್ಸ್‌ನ ಮನೊನ್ ಬೆರ್ನೊಟ್ ಎದುರು 15-7 ಅಂಕಗಳ ಅಂತರದ ಹಿನ್ನಡೆ ಅನುಭವಿಸುವ ಮೂಲಕ ಭವಾನಿ ಸೋಲು ಕಂಡರು. ಚೊಚ್ಚಲ ಒಲಿಂಪಿಕ್ಸ್‌ನಲ್ಲೇ ಅತ್ಯುತ್ತಮ ಪ್ರದರ್ಶನ ತೋರಿದ ಭವಾನಿ ದೇವಿ ಇಡೀ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ಭವಾನಿ ಪದಕ ಗೆಲ್ಲದಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಪ್ರದರ್ಶನ ತೋರುವ ಮೂಲಕ ಭಾರತೀಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.