ಟೋಕಿಯೋ 2020: ಆರ್ಚರಿ ಪಟು ದೀಪಿಕಾ ಕುಮಾರಿ ಒಲಿಂಪಿಕ್ಸ್ ಪದಕ ಕನಸು ಭಗ್ನ..!
* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ದೀಪಿಕಾ ಕುಮಾರಿ ಹೋರಾಟ ಅಂತ್ಯ
* ಕ್ವಾರ್ಟರ್ ಫೈನಲ್‌ನಲ್ಲಿ ಕೊರಿಯ ಆಟಗಾರ್ತಿಗೆ ಶರಣಾದ ದೀಪಿಕಾ ಕುಮಾರಿ
* ಚೊಚ್ಚಲ ಒಲಿಂಪಿಕ್ಸ್ ಪದಕ ಗೆಲ್ಲುವ ದೀಪಿಕಾ ಕುಮಾರಿ ಕನಸು ಭಗ್ನ
ಟೋಕಿಯೋ(ಜು.30): ವಿಶ್ವದ ನಂ.1 ಆರ್ಚರಿ ಪಟು, ಭಾರತದ ತಾರಾ ಬಿಲ್ಲುಗಾರ್ತಿ ದೀಪಿಕಾ ಕುಮಾರಿಯ ಹೋರಾಟ ಟೋಕಿಯೋ ಒಲಿಂಪಿಕ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಅಂತ್ಯವಾಗಿದೆ. ಇದರೊಂದಿಗೆ ಚೊಚ್ಚಲ ಒಲಿಂಪಿಕ್ಸ್ ಪದಕ ಗೆಲ್ಲುವ ದೀಪಿಕಾ ಕುಮಾರಿ ಕನಸು ಮತ್ತೊಮ್ಮೆ ಭಗ್ನವಾಗಿದೆ.
ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ರ‍್ಯಾಂಕಿಂಗ್ ಸುತ್ತಿನಲ್ಲಿ ಭರ್ಜರಿ ಪ್ರದರ್ಶನ ತೋರುವ ಮೂಲಕ ನಂ.1 ಸ್ಥಾನ ಪಡೆದಿದ್ದ ಕೊರಿಯಾದ ಆನ್ ಸಾನ್ ಮತ್ತೊಮ್ಮೆ ಕರಾಕುವಕ್ಕಾದ ಬಾಣಗಳನ್ನು ಪ್ರಯೋಗಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ದೀಪಿಕಾ ಕುಮಾರಿ ಎದುರು 6-0 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಆನ್ ಸಾನ್ ಅಂತಿಮ ನಾಲ್ಕರಘಟ್ಟ ಪ್ರವೇಶಿಸಿದ್ದಾರೆ.
ಟೋಕಿಯೋ 2020: ರಿಯೋ ಪದಕ ವಿಜೇತೆಗೆ ಸೋಲುಣಿಸಿ ಶುಭಾರಂಭ ಮಾಡಿದ ದೀಪಿಕಾ
ಮೊದಲ ಸೆಟ್‌ನಲ್ಲೇ ಹ್ಯಾಟ್ರಿಕ್ 10 ಗಳಿಸಿದರೆ ದೀಪಿಕಾ 27 ಅಂಕ ಪಡೆದರು. ಈ ಮೂಲಕ ಕೊರಿಯ ಆಟಗಾರ್ತಿ 2-0 ಅಂತರದ ಮುನ್ನಡೆ ಪಡೆದರು. ಇನ್ನು ಎರಡನೇ ಸೆಟ್‌ನಲ್ಲಿ ದೀಪಿಕಾ ಮೊದಲ ಗುರಿ 10 ಅಂಕ ಪಡೆದಾದರೂ ಆ ಬಳಿಕ ಸತತ ಎರಡು ಗುರಿಗಳಲ್ಲಿ ತಲಾ 7ರಂತೆ 14 ಅಂಕ ಪಡೆದರು. ಇನ್ನು ಕೊರಿಯಾ ಆಟಗಾರ್ತಿ 26 ಅಂಕಗಳಿಸುವ ಮೂಲಕ ಎರಡನೇ ಸೆಟ್ ಅನ್ನು ಕೂಡಾ ತಮ್ಮದಾಗಿಸಿಕೊಂಡರು. ಇನ್ನು ಮೂರನೇ ಸೆಟ್‌ನಲ್ಲೂ ಕೊರಿಯ ಆಟಗಾರ್ತಿ 26-24ರಿಂದ ಮುನ್ನಡೆ ಸಾಧಿಸುವುದರೊಂದಿಗೆ 6-0 ಅಂತರದಲ್ಲಿ ಗೆದ್ದು ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ದಕ್ಷಿಣ ಕೊರಿಯಾದ ಆನ್ ಸಾನ್ ಈಗಾಗಲೇ ಮಹಿಳಾ ಆರ್ಚರಿ ತಂಡ ಹಾಗೂ ಮಿಶ್ರ ಆರ್ಚರಿ ತಂಡ ವಿಭಾದಲ್ಲಿ ಎರಡು ಚಿನ್ನದ ಪದಕಗಳಿಗೆ ಕೊರಳೊಡ್ದಿದ್ದು, ಇದೀಗ ವೈಯುಕ್ತಿಕ ವಿಭಾಗದಲ್ಲೂ ಚಿನ್ನದ ಪದಕ ಗೆಲ್ಲುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ.