Asianet Suvarna News Asianet Suvarna News

ಟೋಕಿಯೋ 2020: ರಿಯೋ ಪದಕ ವಿಜೇತೆಗೆ ಸೋಲುಣಿಸಿ ಶುಭಾರಂಭ ಮಾಡಿದ ದೀಪಿಕಾ

* ಆರ್ಚರಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿ ದಾಖಲೆ ಬರೆದ ದೀಪಿಕಾ ಕುಮಾರಿ

* ಚೊಚ್ಚಲ ಒಲಿಂಪಿಕ್ಸ್‌ ಪದಕದ ಸನಿಹದಲ್ಲಿ ದೀಪಿಕಾ ಕುಮಾರಿ

* ವಿಶ್ವದ ನಂ.1 ಆಟಗಾರ್ತಿ ಮೇಲೆ ಎಲ್ಲರ ಚಿತ್ತ

Tokyo Olympics 2020 India Deepika Kumari enters quarters in Archery beats Ksenia Perova in Nail baiting finish kvn
Author
Tokyo, First Published Jul 30, 2021, 7:59 AM IST

ಟೋಕಿಯೋ(ಜು.30): ವಿಶ್ವದ ನಂ.1 ಶ್ರೇಯಾಂಕಿತೆ ಆರ್ಚರಿ ಪಟು ದೀಪಿಕಾ ಕುಮಾರಿ ಮಹಿಳಾ ಸಿಂಗಲ್ಸ್‌ ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ರಷ್ಯಾ ಒಲಿಂಪಿಕ್‌ ಕಮಿಟಿಯ ಕ್ಸಿನಿಯಾ ಪೆರೊವಾ ಎದುರು 6-5ರಿಂದ ರೋಚಕ ಗೆಲುವು ಸಾಧಿಸುವ ಮೂಲಕ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ಆರ್ಚರಿ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಮೊದಲ ಭಾರತೀಯ ಆರ್ಚರಿ ಪಟು ಎನ್ನುವ ಗೌರವಕ್ಕೆ ದೀಪಿಕಾ ಪಾತ್ರರಾಗಿದ್ದಾರೆ. 

2016ರ ರಿಯೋ ಒಲಿಂಪಿಕ್ಸ್‌ ರಷ್ಯಾ ತಂಡ ವಿಭಾಗದಲ್ಲಿ ಬೆಳ್ಳಿ ಪದಕ ವಿಜೇತೆ ಕ್ಸಿನಿಯಾ ಪೆರೊವಾ ಹಾಗೂ ದೀಪಿಕಾ ಕುಮಾರಿ ನಡುವಿನ 5 ಪಂದ್ಯಗಳ ಸೆಟ್‌ ಟೈ ಆಗಿದ್ದರಿಂದ ಕೊನೆಯ ಶೂಟ್‌ ಆಫ್‌ನಲ್ಲಿ ದೀಪಿಕಾ ಭರ್ಜರಿ 10 ಅಂಕ ಗಳಿಸುವ ಮೂಲಕ ರಷ್ಯಾ ಆಟಗಾರ್ತಿಯನ್ನು ಟೋಕಿಯೋ ಒಲಿಂಪಿಕ್ಸ್‌ನಿಂದ ಹೊರದಬ್ಬುವಲ್ಲಿ ಯಶಸ್ವಿಯಾದರು.

ಮೊದಲ ಸೆಟ್‌ನಲ್ಲಿ ದೀಪಿಕಾ 28-25 ಪಾಯಿಂಟ್‌ಗಳ ಮುನ್ನಡೆ ಸಾಧಿಸುವ ಮೂಲಕ 2 ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಎರಡನೇ ಸೆಟ್‌ನಲ್ಲಿ ಕ್ಸಿನಿಯಾ ಪೆರೊವಾ27-26ರಿಂದ ಮುನ್ನಡೆ ಸಾಧಿಸಿ 2 ಅಂಕ ಪಡೆಯುವಲ್ಲಿ ಯಶಸ್ವಿಯಾದರು. ಮತ್ತೆ ಮೂರನೇ ಸೆಟ್‌ನಲ್ಲಿ ದೀಪಿಕಾ 28-27 ಅಂಕಗಳಿಂದ ಮುನ್ನಡೆ ಸಾಧಿಸಿ ಮತ್ತೆರಡು ಅಂಕ ಕೈವಶ ಮಾಡಿಕೊಂಡರು. ಇನ್ನು ನಾಲ್ಕನೇ ಸೆಟ್‌ 26-26 ಪಾಯಿಂಟ್‌ಗಳ ಟೈ ಆಯಿತು. ಹೀಗಾಗಿ ಉಭಯ ಆರ್ಚರಿ ಪಟುಗಳು ತಲಾ ಒಂದೊಂದು ಅಂಕ ಹಂಚಿಕೊಂಡರು. ನಾಲ್ಕನೇ ಸೆಟ್‌ ಮುಕ್ತಾಯದ ವೇಳೆಗೆ ದೀಪಿಕಾ 5 ಹಾಗೂ ಕ್ಸಿನಿಯಾ ಪೆರೊವಾ 3 ಅಂಕ ಪಡೆದಿದ್ದರು. ಇನ್ನು ಕೊನೆಯ ಸೆಟ್‌ನಲ್ಲಿ ಕ್ಸಿನಿಯಾ ಪೆರೊವಾ 28-25 ಅಂಕಗಳಿಂದ ಮುನ್ನಡೆ ಸಾಧಿಸುವ ಮೂಲಕ 5-5ರ ಸಮಬಲ ಸಾಧಿಸಿದರು.

ಟೋಕಿಯೋ 2020: ಇಂದು ಭಾರತಕ್ಕೆ 3 ಒಲಿಂಪಿಕ್ಸ್ ಪದಕ ನಿರೀಕ್ಷೆ

ಕುತೂಹಲ ಹೆಚ್ಚಿಸಿದ ಶೂಟ್‌ ಆಫ್‌ ಕ್ಷಣ: ಫಲಿತಾಂಶಕ್ಕಾಗಿ ಶೂಟ್‌ ಆಫ್‌ ಮೊರೆ ಹೋಗಲಾಯಿತು. ಈ ವೇಳೆ ಮೊದಲು ಬಾಣ ಪ್ರಯೋಗಿಸಿದ ಕ್ಸಿನಿಯಾ ಪೆರೊವಾ 7 ಅಂಕ ಪಡೆದರು. ನಂತರ ವಿಶ್ವ ನಂ.1 ಆರ್ಚರಿ ಪಟು ದೀಪಿಕಾ 10 ಅಂಕಗಳನ್ನು ಗಳಿಸುವ ಮೂಲಕ ಚೊಚ್ಚಲ ಒಲಿಂಪಿಕ್ಸ್‌ ಪದಕ ಗೆಲ್ಲುವ ಗುರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಇಂದು ಬೆಳಗ್ಗೆ 11.30ರಿಂದ ಕ್ವಾರ್ಟರ್‌ ಫೈನಲ್‌, ಸೆಮಿಫೈನಲ್ ಹಾಗೂ ಫೈನಲ್‌ ಪಂದ್ಯಗಳು ನಡೆಯಲಿದ್ದು ದೀಪಿಕಾ ಮೇಲೆ ಭಾರತೀಯರು ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟಿದ್ದಾರೆ.

Follow Us:
Download App:
  • android
  • ios