* ಒಲಿಂಪಿಕ್ಸ್‌ಗೆ ರೆಡಿಯಾದ ಅಥ್ಲೀಟ್‌ಗಳ ಜತೆ ಮೋದಿ ಮಾತು.* ಜುಲೈ 13ರಂದು ಅಥ್ಲೀಟ್‌ಗಳಿಗೆ ಹುರುಪು ತುಂಬಲಿರುವ ಮೋದಿ* ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ ಜುಲೈ 23ರಿಂದ ಆರಂಭ

ನವದೆಹಲಿ(ಜು.09): ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಸಜ್ಜಾಗಿರುವ ಭಾರತದ ಕ್ರೀಡಾಪಟುಗಳೊಂದಿಗೆ ಜುಲೈ 13ರಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್‌ ವೇದಿಕೆ ಮೂಲಕ ಮಾತುಕತೆ ನಡೆಸಲಿದ್ದಾರೆ. ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಜುಲೈ 23ರಿಂದ ಆಗಸ್ಟ್ 08ರ ವರೆಗೆ ಜಪಾನಿನ ಟೋಕಿಯೋ ನಗರದಲ್ಲಿ ನಡೆಯಲಿದೆ.

ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು ಮುಂಬರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಸಜ್ಜಾಗಿ ನಿಂತಿರುವ ಅಥ್ಲೀಟ್‌ಗಳ ಜತೆ ಜುಲೈ 13ರಂದು ಸ್ಪೂರ್ತಿದಾಯಕ ಮಾತುಗಳನ್ನು ಆಡಲಿದ್ದಾರೆ ಎಂದು MyGovIndia ತನ್ನ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದೆ. ಜುಲೈ 17ರಂದು ಮೊದಲ ಹಂತದ ಅಥ್ಲೀಟ್‌ಗಳು ಏರ್ ಇಂಡಿಯಾ ವಿಮಾನದ ಮೂಲಕ ಟೋಕಿಯೋಗೆ ಪ್ರಯಾಣ ಬೆಳೆಸಲಿದ್ದಾರೆ.

Scroll to load tweet…

ದೇಶದ 130 ಕೋಟಿ ಜನರ ಪರವಾಗಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಅಥ್ಲೀಟ್‌ಗಳ ಜತೆ ಜುಲೈ 13ರಂದು ಮಾತುಕತೆ ನಡೆಸಿ ಶುಭ ಹಾರೈಸಲಿದ್ದೇನೆ. ನಾವೆಲ್ಲರೂ ನಮ್ಮ ಅಥ್ಲೀಟ್‌ಗಳಿಗೆ ಹುರುಪು ತುಂಬೋಣ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ. 

Scroll to load tweet…

ಇದಷ್ಟೇ ಒಲಿಂಪಿಕ್ಸ್‌ ಪೂರ್ವ ತಯಾರಿ, ವ್ಯವಸ್ಥೆ ಹಾಗೂ ಲಸಿಕೆ ಹೀಗೆ ಹಲವು ವಿಚಾರಗಳ ಕುರಿತಂತೆ ಪ್ರಧಾನಿ ಮೋದಿ ಹಿರಿಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದಾರೆ.

Scroll to load tweet…

ಈಗಾಗಲೇ 18 ವಿವಿಧ ಕ್ರೀಡೆಗಳಿಂದ ದೇಶದ 120 ಅಥ್ಲೀಟ್‌ಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಹಿಂದೆಂದಿಗಿಂತಲೂ ಈ ಬಾರಿ ಭಾರತದಿಂದ ಅತಿಹೆಚ್ಚಿನ ಸಂಖ್ಯೆಯ ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ 117 ಭಾರತೀಯ ಅಥ್ಲೀಟ್‌ಗಳು ಪಾಲ್ಗೊಂಡಿದ್ದರು. ಆದರೆ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿರಲಿಲ್ಲ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ 6 ಪದಕ ಗೆದ್ದಿರುವುದೇ ಇಲ್ಲಿಯವರೆಗೂ ಭಾರತದಿಂದ ಮೂಡಿ ಬಂದ ಶ್ರೇಷ್ಠ ಪ್ರದರ್ಶನವೆನಿಸಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳು ಹೆಚ್ಚಿನ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದ್ದಾರೆ.

ಟೋಕಿಯೋದಲ್ಲಿ ತುರ್ತು ಪರಿಸ್ಥಿತಿ: ಖಾಲಿ ಕ್ರೀಡಾಂಗಣದಲ್ಲಿ ಒಲಿಂಪಿಕ್ಸ್..!

ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಈ ಬಾರಿ ಖಾಲಿ ಸ್ಟೇಡಿಯಂನಲ್ಲಿ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ ಜರುಗಲಿದೆ. ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಪಾನ್‌ನ ರಾಜಧಾನಿ ಟೋಕಿಯೊದಲ್ಲಿ ಕೊರೋನಾ ತುರ್ತು ಪರಿಸ್ಥಿತಿ ಘೋಷಿಸದ ಬೆನ್ನಲ್ಲೇ ಒಲಿಂಪಿಕ್‌ಸ್ ವೀಕ್ಷಣೆಗೆ ಕ್ರೀಡಾಂಗಣಕ್ಕೆ ಪ್ರೇಕ್ಷಕರ ಪ್ರವೇಶವನ್ನು ನಿಷೇಧಿಸಲಾಗಿದೆ.