ಟೋಕಿಯೋದಲ್ಲಿ ತುರ್ತು ಪರಿಸ್ಥಿತಿ: ಖಾಲಿ ಕ್ರೀಡಾಂಗಣದಲ್ಲಿ ಒಲಿಂಪಿಕ್ಸ್..!
* ಟೋಕಿಯೋ ಒಲಿಂಪಿಕ್ಸ್ ಪ್ರೇಕ್ಷಕರಿಗೆ ಶಾಕ್ ಕೊಟ್ಟ ಕೋವಿಡ್ 19
* ಟೋಕಿಯೋ ನಗರದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ.
* ಖಾಲಿ ಸ್ಟೇಡಿಯಂನಲ್ಲಿ ನಡೆಯಲಿದೆ ಟೋಕಿಯೋ ಒಲಿಂಪಿಕ್ಸ್
ಟೋಕಿಯೋ(ಜು.09): ದಿನದಿಂದ ದಿನಕ್ಕೆ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಪಾನ್‌ನ ರಾಜಧಾನಿ ಟೋಕಿಯೊದಲ್ಲಿ ಕೊರೋನಾ ತುರ್ತು ಪರಿಸ್ಥಿತಿ ಘೋಷಿಸದ ಬೆನ್ನಲ್ಲೇ ಟೋಕಿಯೋ ಒಲಿಂಪಿಕ್ಸ್ ವೀಕ್ಷಣೆಗೆ ಕ್ರೀಡಾಂಗಣಕ್ಕೆ ಪ್ರೇಕ್ಷಕರ ಪ್ರವೇಶವನ್ನು ನಿಷೇಧಿಸಲಾಗಿದೆ.
ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಹಾಗೂ ಕ್ರೀಡಾ ಕೂಟದ ಆಯೋಜಕರು ಗುರುವಾರ ಅಧಿಕೃತವಾಗಿ ಪ್ರೇಕ್ಷಕರ ಪ್ರವೇಶ ನಿಷೇಧ ಸಂಬಂಧ ಮಾಹಿತಿ ನೀಡಿದ್ದು, ಇದರೊಂದಿಗೆ ಜಗತ್ತಿನ ಅತಿದೊಡ್ಡ ಕ್ರೀಡಾಕೂಟ ಖಾಲಿ ಕ್ರೀಡಾಂಗಣದಲ್ಲಿ ನಡೆಯುವುದು ಖಚಿತಗೊಂಡಿದೆ. ಈ ಮೊದಲು ವಿದೇಶಿ ಪ್ರಜೆಗಳಿಗೆ ಪ್ರವೇಶ ನಿರಾಕರಿಸಿದ್ದ ಆಯೋಜಕರು, ಬಳಿಕ ಸ್ಥಳೀಯರಿಗೆ ಪ್ರವೇಶ ನೀಡಲು ನಿರ್ಧರಿಸಿದ್ದರು. ಆದರೂ ಈ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸಿರಲಿಲ್ಲ. ಇದೀಗ ಈ ಎಲ್ಲಾ ಗೊಂದಲಗಳಿಗೂ ತೆರೆ ಬಿದ್ದಿದೆ.
ಟೋಕಿಯೋ ಒಲಿಂಪಿಕ್ಸ್‌ಗೆ ಪ್ರೇಕ್ಷಕರು ಅನುಮಾನ..?
ಆಗಸ್ಟ್ 22ರ ತನಕ ತುರ್ತು ಪರಿಸ್ಥಿತಿ: ಹೆಚ್ಚುತ್ತಿರುವ ಡೆಲ್ಟಾ ಹಾಗೂ ಮತ್ತೆ ಕಾಣಿಸಿಕೊಳ್ಳುತ್ತಿರುವ ಕೋವಿಡ್-19 ಸೋಂಕು ದೇಶಾದ್ಯಂತ ಹಬ್ಬುವುದನ್ನು ನಿಯಂತ್ರಿಸುವ ಸಲುವಾಗಿ ಟೋಕಿಯೊದಲ್ಲಿ ಜುಲೈ 12ರಿಂದ ಆ.22ರ ತನಕ ಕೊರೋನಾ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕೆಲವೊಂದು ನಿರ್ಬಂಧಗಳನ್ನು ಹೇರಲಾಗಿದೆ ಎಂದು ಜಪಾನ್ ಪ್ರಧಾನಿ ತಿಳಿಸಿದ್ದರು. ಜುಲೈ 23ರಿಂದ ಆಗಸ್ಟ್ 8ರ ತನಕ ಟೋಕಿಯೊ ಒಲಿಂಪಿಕ್‌ಸ್ ನಡೆಯಲಿದ್ದು, ತುರ್ತು ಪರಿಸ್ಥಿತಿ ಸಂದರ್ಭದಲ್ಲೇ ಕ್ರೀಡಾಕೂಟ ನಡೆಯಲಿದೆ. ಇನ್ನು ಆಗಸ್ಟ್ 24ರಿಂದ ಪ್ಯಾರಾ ಒಲಿಂಪಿಕ್ಸ್‌ಗೆ ಚಾಲನೆ ದೊರೆಯಲಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
"