ಟೋಕಿಯೋ ಒಲಿಂಪಿಕ್ಸ್: ಮೇರಿ ಕೋಮ್, ಮನ್‌ಪ್ರೀತ್ ಧ್ವಜಧಾರಿಗಳು
* ಟೋಕಿಯೋ ಒಲಿಂಪಿಕ್ಸ್‌ಗೆ ಎಂ.ಸಿ.ಮೇರಿ ಕೋಮ್ & ಮನ್‌ಪ್ರೀತ್ ಸಿಂಗ್ ಭಾರತದ ಧ್ವಜಧಾರಿಗಳು
* ಸಮಾರೋಪ ಸಮಾರಂಭದ ಧ್ವಜಧಾರಿಯಾಗಿ ಭಜರಂಗ್ ಪುನಿಯಾ ಆಯ್ಕೆ
* ಇದೇ ಮೊದಲ ಬಾರಿಗೆ ಪುರುಷ ಹಾಗೂ ಮಹಿಳಾ ಅಥ್ಲೀಟ್ ಭಾರತದ ತ್ರಿವರ್ಣ ಧ್ವಜ ಮುನ್ನಡೆಸಲಿದ್ದಾರೆ.
ನವದೆಹಲಿ(ಜು.06): ಖ್ಯಾತ ಬಾಕ್ಸರ್ ಎಂ.ಸಿ.ಮೇರಿ ಕೋಮ್ ಹಾಗೂ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಟೋಕಿಯೋ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಇನ್ನು ಪದಕದ ಭರವಸೆ ಮೂಡಿಸಿರುವ ತಾರಾ ಕುಸ್ತಿಪಟು ಭಜರಂಗ್ ಪುನಿಯಾ ಆಗಸ್ಟ್ 8ರಂದು ನಡೆಯುವ ಸಮಾರೋಪ ಸಮಾರಂಭದ ಧ್ವಜಧಾರಕರಾಗಲಿದ್ದಾರೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ(ಐಒಎ) ಸೋಮವಾರ ಪ್ರಕಟಿಸಿದೆ. ತನ್ನ ನಿರ್ಧಾರವನ್ನು ಕ್ರೀಡಾಕೂಟದ ಆಯೋಜಕರಿಗೆ ತಲುಪಿಸಿದೆ.
ಜುಲೈ 23ರಿಂದ ಆರಂಭಗೊಳ್ಳಲಿರುವ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಮುನ್ನಡೆಸಲಿದ್ದಾರೆ ಎಂದು ಇತ್ತೀಚೆಗೆ ಸುದ್ದಿಯಾಗಿತ್ತು. ಆದರೆ, ಇದೀಗ ಭಾರತ ತಂಡವನ್ನು ಮೇರಿ ಕೋಮ್ ಹಾಗೂ ಮನ್‌ಪ್ರೀತ್ ಮುನ್ನಡೆಸಲಿದ್ದಾರೆ ಎಂದು ಐಒಸಿ ಅಧಿಕೃತವಾಗಿ ತಿಳಿಸಿದೆ.
ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು ಇತಿಹಾಸ ನಿರ್ಮಿಸಿದ ಮಾನಾ ಪಟೇಲ್
ಓರ್ವ ಮಹಿಳಾ ಹಾಗೂ ಪುರುಷ ಕ್ರೀಡಾಪಟು ತ್ರಿವರ್ಣ ಧ್ವಜ ಭಾರತದ ಕ್ರೀಡಾಪಟುಗಳನ್ನು ಒಲಿಂಪಿಕ್ಸ್‌ನಲ್ಲಿ ಮುನ್ನಡೆಸುತ್ತಿರುವುದು ಇದೇ ಮೊದಲ ಬಾರಿ ಆಗಿದೆ. ‘ಒಲಿಂಪಿಕ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಓರ್ವ ಪುರುಷ ಹಾಗೂ ಮಹಿಳಾ ಕ್ರೀಡಾಪಟು ಸೇರಿದಂತೆ ಇಬ್ಬರು ಧ್ವಜಧಾರಿಗಳು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ‘ಲಿಂಗ ಸಮಾನತೆ’ ಸಾರಲು ಇಬ್ಬರಿಗೂ ಅವಕಾಶ ಮಾಡಿಕೊಡಲಾಗುವುದು’ ಎಂದು ಇತ್ತೀಚೆಗಷ್ಟೇ ಐಒಎ ಮುಖ್ಯ ನರೇಂದ್ರ ಬಾತ್ರಾ ತಿಳಿಸಿದ್ದರು.