* ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮಾನಾ ಪಟೇಲ್‌* ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ದೇಶದ ಮೊದಲ ಮಹಿಳಾ ಈಜುಪಟು ಮಾನಾ* ಮಾನಾ ಪಟೇಲ್‌ಗೆ ಅಭಿನಂದನೆ ಸಲ್ಲಿಸಿದ ಕಿರಣ್ ರಿಜಿಜು

ನವದೆಹಲಿ(ಜು.02): ಭಾರತದ ಮಹಿಳಾ ಈಜುಪಟು ಮಾನಾ ಪಟೇಲ್‌ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಈಜುಗಾರ್ತಿ ಎನ್ನುವ ಇತಿಹಾಸ ನಿರ್ಮಿಸಿದ್ದಾರೆ.

ಮಾನಾ ಪಟೇಲ್‌ 100 ಮೀಟರ್‌ ಬ್ಯಾಕ್‌ಸ್ಟ್ರೋಕ್‌ ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಯೂನಿವರ್ಸಾಲಿಟಿ ಕೋಟಾದಡಿ ಮಾನಾ ಪಟೇಲ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ ಎಂದು ಭಾರತೀಯ ಈಜು ಸಂಸ್ಥೆ ತಿಳಿಸಿದೆ. ಇದರೊಂದಿಗೆ ಈ ಬಾರಿಯ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಮೂವರು ಈಜುಪಟುಗಳು ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಬೆಂಗಳೂರು ಮೂಲದ ಶ್ರೀಹರಿ ನಟರಾಜ್‌ ಹಾಗೂ ಸಾಜನ್‌ ಪ್ರಕಾಶ್ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ರಾಜ್ಯದ ಈಜುಪಟು ಶ್ರೀಹರಿ

21 ವರ್ಷದ ಮಾನಾ 2019ರಲ್ಲಿ ಪಾದದ ಗಾಯಕ್ಕೆ ಒಳಗಾಗಿದ್ದರು. ಇದಾದ ಬಳಿಕ ಈ ವರ್ಷದ ಆರಂಭದಲ್ಲೇ ಈಜಿಗೆ ಕಮ್‌ಬ್ಯಾಕ್‌ ಮಾಡಿದ್ದರು. ಕಳೆದ ಏಪ್ರಿಲ್‌ನಲ್ಲಿ ಉಜ್ಬೇಕಿಸ್ತಾನದಲ್ಲಿ ನಡೆದ ಮುಕ್ತ ಈಜು ಸ್ಪರ್ಧೆಯ 100 ಮೀಟರ್‌ ಬ್ಯಾಕ್‌ಸ್ಟ್ರೋಕ್‌ ವಿಭಾಗದ ಸ್ಪರ್ಧೆಯಲ್ಲಿ 1:04:47 ಸೆಕೆಂಡ್‌ಗಳಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

Scroll to load tweet…

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ ಮಾನಾ ಪಟೇಲ್‌ಗೆ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವೀಟ್‌ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಬ್ಯಾಕ್‌ಸ್ಟ್ರೋಕ್‌ ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ ಮೊದಲ ಭಾರತೀಯ ಮಹಿಳಾ ಹಾಗೂ ಒಟ್ಟಾರೆ ಮೂರನೇ ಸ್ವಿಮ್ಮರ್ ಎನಿಸಿಕೊಂಡ ಮಾನಾ ಪಟೇಲ್‌ಗೆ ಅಭಿನಂದನೆಗಳು ಎಂದು ಟ್ವೀಟ್‌ ಮಾಡಿದ್ದಾರೆ.

ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟವು ಜುಲೈ 23ರಿಂದ ಆರಂಭವಾಗಿ ಆಗಸ್ಟ್‌ 08ರವರೆಗೆ ನಡೆಯಲಿದೆ.