ಜನಪ್ರಿಯ ಮೆಸೇಜಿಂಗ್ ಸೇವೆ ವಾಟ್ಸಪ್ ತನ್ನ ಬಳಕೆದಾರರ ಅವಶ್ಯಕತೆಗೆ ತಕ್ಕಂತೆ ಬದಲಾವಣೆಗಳನ್ನು ಮಾಡುತ್ತಾ ಬಂದಿದೆ. 10 ವರ್ಷಗಳ ಹಿಂದೆ, ಕೇವಲ ಮೆಸೇಜ್‌ ವಿನಿಮಯ ಮಾಡುವುದರಿಂದ ಆರಂಭವಾದ ವಾಟ್ಸಪ್‌ನಲ್ಲಿ ಇಂದು ಎಂತೆಂಥಾ ಸೌಲಭ್ಯಗಳಿವೆ ಎಂಬುವುದು ಬಳಸುವವರಿಗೆ ಚೆನ್ನಾಗಿ ಗೊತ್ತಿದೆ. ತಂತ್ರಜ್ಞಾನ ಅಭಿವೃದ್ಧಿಯಾದಂತೆ, ಅನುಕೂಲಕ್ಕೆ  ತಕ್ಕಂತೆ  ಹೊಸ ಹೊಸ ಫೀಚರ್‌ಗಳನ್ನು ವಾಟ್ಸಪ್ ನೀಡುತ್ತಾ ಬಂದಿದೆ.

ಆದರೆ ಕೆಲವೊಮ್ಮೆ ಬಳಕೆದಾರರಿಗೆ ಬಗ್ಸ್‌ಗಳದ್ದೇ ಕಾಟ. ಈಗ ಅಂತಹದ್ದೊಂದು ಬೆಳವಣಿಗೆ ಘಟಿಸಿದೆ. ವಾಟ್ಸಪ್ ಪ್ರೊಫೈಲ್‌ನಲ್ಲಿ ತಮ್ಮ ಹೆಸರನ್ನು ಅಪ್ಡೇಟ್ ಮಾಡುವಾಗ ತೊಂದರೆಯಾಗುತ್ತಿದೆ ಎಂದು ಕೆಲವು ಬಳಕೆದಾರರು ಅವಲತ್ತುಕೊಂಡಿದ್ದಾರೆ.

ಇದನ್ನೂ ಓದಿ: ಕೊನೆಗೂ 48 ಮೆಗಾಪಿಕ್ಸೆಲ್ ಕ್ಯಾಮೆರಾದ Redmi Note 7 Pro ಬಿಡುಗಡೆ; ಹೆಂಗೈತೆ? ಎಷ್ಟು ರೊಕ್ಕಾ ?

ಈ ಬಗ್ಗೆ ಟ್ವೀಟ್ ಮಾಡಿರುವ ಬಳಕೆದಾರರು, ಪ್ರೊಫೈಲ್ ಹೆಸರು ಬರೆಯುವಲ್ಲಿ ಕೀಬೋರ್ಡ್ ಚಿಹ್ನೆ ಕಾಣಿಸುತ್ತಿದೆ.  ಈ ಮುಂಚೆ ಅದಿರಲಿಲ್ಲ. ಅಲ್ಲಿ ಇಮೋಜಿಗಳ ಚಿಹ್ನೆಯ ಆಯ್ಕೆ ಇತ್ತು. ಯಾವುದಾದರು ಹೊಸ ಫೀಚರ್ ಪರಿಚಯಿಸಲಾಗಿದೆಯೇ?  ಎಂದು ಬಳಕೆದಾರರು ಕೇಳುತ್ತಿದ್ದಾರೆ.

 

 

ಅದಕ್ಕೆ ಉತ್ತರಿಸಿರುವ WABetaInfo, ಅದೇನು ಹೊಸ ಫೀಚರ್ ಅಲ್ಲ, ಅದೊಂದು ಬಗ್ ಆಗಿದೆ ಎಂದು ಹೇಳಿದೆ. ಅದಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕೆಲ ಆ್ಯಂಡ್ರಾಯಿಡ್ ಫೋನ್ ಮತ್ತು ಆವೃತ್ತಿಗಳಲ್ಲಿ ಮಾತ್ರ ಈ ಸಮಸ್ಯೆ ಉಂಟಾಗಿದೆ ಎಂದು ಹೇಳಿದೆ.

ಈ ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ಸಮಸ್ಯೆ ಏನೆಂಬುವುದನ್ನು ತಿಳಿದುಕೊಳ್ಳಬಹುದಾಗಿದೆ. ಬಲಭಾಗದಲ್ಲಿ ಇಮೋಜಿ ಕಾಣುತ್ತಿರುವ ಚಿತ್ರ, ವಾಟ್ಸಪ್‌ನ ಫೀಚರ್. ಎಡಭಾಗದಲ್ಲಿ ಕೀಬೋರ್ಡ್ ಕಾಣುತ್ತಿರುವುದು ಬಗ್ ಆಗಿದೆ.