ಸೋಮವಾರ ರಾತ್ರಿ, ವಾಟ್ಸಾಪ್ ಯಾವುದೇ ಮುನ್ಸೂಚನೆ ಇಲ್ಲದೆ ಭಾರತ ಸೇರಿದಂತೆ ವಿಶ್ವಾದ್ಯಂತ ಲಕ್ಷಾಂತರ ಬಳಕೆದಾರರ ಖಾತೆಗಳನ್ನು 'ಪರಿಶೀಲನೆ'ಗೆ ಒಳಪಡಿಸಿ ನಿರ್ಬಂಧಿಸಿದೆ. ಈ ದಿಢೀರ್ ಕ್ರಮದಿಂದಾಗಿ ತೀವ್ರ ತೊಂದರೆಗೊಳಗಾದ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ವಾಟ್ಸಾಪ್ ಸ್ಪಷ್ಟನೆ ನೀಡಿದೆ.
ಬೆಂಗಳೂರು: ಜನಪ್ರಿಯ ಇನ್‌ಸ್ಟಂಟ್ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp) ಸೋಮವಾರ (ಆಗಸ್ಟ್ 3) ಭಾರತ ಸೇರಿದಂತೆ ಜಗತ್ತಿನಾದ್ಯಂತ ಲಕ್ಷಾಂತರ ಬಳಕೆದಾರರಿಗೆ ಭಾರೀ ಶಾಕ್ ನೀಡಿದೆ. ಯಾವುದೇ ಮುನ್ಸೂಚನೆ ನೀಡದೆ ಹಲವು ಬಳಕೆದಾರರ ಖಾತೆಗಳನ್ನು 24 ಗಂಟೆಗಳ ಕಾಲ 'ರಿವ್ಯೂ' (ಪರಿಶೀಲನೆ) ಅಡಿಯಲ್ಲಿ ಇರಿಸಲಾಗಿದ್ದು, ಎಲ್ಲಾ ಸೌಲಭ್ಯಗಳನ್ನು ಬ್ಲಾಕ್ ಮಾಡಲಾಗಿದೆ. ಇದರಿಂದಾಗಿ ತೀವ್ರ ತೊಂದರೆ ಅನುಭವಿಸಿದ ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ರಾತ್ರಿ 8 ಗಂಟೆಗೆ ಆರಂಭವಾದ ಸಮಸ್ಯೆ
ಸೋಮವಾರ ರಾತ್ರಿ ಸುಮಾರು 8 ಗಂಟೆಯ (IST) ಸುಮಾರಿಗೆ ಈ ಸಮಸ್ಯೆ ಕಾಣಿಸಿಕೊಂಡಿದೆ. ಮೆಟಾ (Meta) ಒಡೆತನದ ವಾಟ್ಸಾಪ್ ಯಾವುದೇ ಮುನ್ನೆಚ್ಚರಿಕೆ ನೀಡದೆ ಖಾತೆಗಳನ್ನು ನಿರ್ಬಂಧಿಸಿದೆ. ಬಳಕೆದಾರರು ಆ್ಯಪ್ ಓಪನ್ ಮಾಡಿದಾಗ ಅವರ ಮೊಬೈಲ್ ಪರದೆಯ ಮೇಲೆ ಈ ಕೆಳಗಿನ ಸಂದೇಶ ಕಾಣಿಸಿಕೊಂಡಿದೆ.
ಖಾತೆ ಪರಿಶೀಲನೆಯಲ್ಲಿದೆ. ವಿನಂತಿಸಿದ ದಿನಾಂಕ: 3 ಆಗಸ್ಟ್ 2026. ನಮ್ಮ ಸೇವಾ ನಿಯಮಗಳನ್ನು ಅನುಸರಿಸಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಖಾತೆಯ ಚಟುವಟಿಕೆ ಮತ್ತು ಸಾಧನದ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ. ನಾವು ಸಾಮಾನ್ಯವಾಗಿ 24 ಗಂಟೆಗಳ ಒಳಗೆ ಫಲಿತಾಂಶವನ್ನು ನಿಮಗೆ ತಿಳಿಸುತ್ತೇವೆ ಎಂದು ವಾಟ್ಸಪ್ ಹೇಳಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಬಳಕೆದಾರರ ಅಸಮಾಧಾನ
ಯಾವುದೇ ತಪ್ಪು ಮಾಡದಿದ್ದರೂ ಖಾತೆಗಳನ್ನು ಬ್ಲಾಕ್ ಮಾಡಿರುವುದಕ್ಕೆ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟರ್ (X) ನಲ್ಲಿ ಬಳಕೆದಾರರೊಬ್ಬರು ಯಾವುದೇ ವಿವರಣೆ ನೀಡದೆ ನನ್ನ ವಾಟ್ಸಾಪ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. ನಾನು ಈಗಾಗಲೇ ಅಪೀಲ್ ಸಲ್ಲಿಕೆ ಮಾಡಿದ್ದೇನೆ. ಆದರೆ ಕೇವಲ 24 ಗಂಟೆಗಳಲ್ಲಿ ಪರಿಶೀಲಿಸಲಾಗುವುದು ಎಂಬ ಸಾಮಾನ್ಯ ಸಂದೇಶ ಮಾತ್ರ ಬರುತ್ತಿದೆ. ದಯವಿಟ್ಟು ತುರ್ತಾಗಿ ಸಹಾಯ ಮಾಡಿ ಎಂದು ಬರೆದುಕೊಂಡಿದ್ದಾರೆ.
ಮತ್ತೊಬ್ಬ ಬಳಕೆದಾರರಾದ ಸಲೋನಿ ಎಂಬುವವರು ಯಾವುದೇ ಎಚ್ಚರಿಕೆ ಇಲ್ಲದೆ ನನ್ನ ವಾಟ್ಸಾಪ್ ಖಾತೆಯನ್ನು ದಿಢೀರ್ ನಿಷ್ಕ್ರಿಯಗೊಳಿಸಲಾಗಿದೆ. ನಾನು ಕೇವಲ ಅಧಿಕೃತ ಆ್ಯಪ್ ಮಾತ್ರ ಬಳಸುತ್ತೇನೆ ಮತ್ತು ನನ್ನ ದೈನಂದಿನ ಕೆಲಸಗಳು ವಾಟ್ಸಾಪ್ ಮೇಲೆಯೇ ಅವಲಂಬಿತವಾಗಿವೆ. ದಯವಿಟ್ಟು ಸಹಾಯ ಮಾಡಿ. ಇದು ನಿಜಕ್ಕೂ ಅನಗತ್ಯವಾದ ಗೊಂದಲ ಎಂದು ಆತಂಕ ಹಂಚಿಕೊಂಡಿದ್ದಾರೆ.
ವಾಟ್ಸಾಪ್ ಸಂಸ್ಥೆ ನೀಡಿದ ಸ್ಪಷ್ಟನೆ ಏನು?
ಈ ಗೊಂದಲದ ಕುರಿತು ಪ್ರತಿಕ್ರಿಯಿಸಿರುವ ವಾಟ್ಸಾಪ್ ವಕ್ತಾರರು, ತಾಂತ್ರಿಕ ದೋಷ ಅಥವಾ ಪರಿಶೀಲನಾ ಪ್ರಕ್ರಿಯೆಯಲ್ಲಿನ ವ್ಯತ್ಯಾಸವನ್ನು ಒಪ್ಪಿಕೊಂಡಿದ್ದಾರೆ. ನಮ್ಮ ಸೇವೆಯನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುವವರಿಂದ ಬಳಕೆದಾರರನ್ನು ಸುರಕ್ಷಿತವಾಗಿಡಲು ನಾವು ಯಾವಾಗಲೂ ಶ್ರಮಿಸುತ್ತಿದ್ದೇವೆ ಮತ್ತು ಅಂತಹ ಖಾತೆಗಳನ್ನು ನಿಷೇಧಿಸುತ್ತಿದ್ದೇವೆ. ಆದರೆ ಕೆಲವೊಮ್ಮೆ ನಮ್ಮಿಂದಲೂ ತಪ್ಪಾಗಬಹುದು. ಅಂತಹ ಸಂದರ್ಭಗಳಲ್ಲಿ ನಾವು ಅದನ್ನು ಸಾಧ್ಯವಾದಷ್ಟು ಬೇಗ ಸರಿಪಡಿಸಲು ಮತ್ತು ಜನರು ಮತ್ತೆ ಚಾಟ್ ಮಾಡಲು ಅನುಕೂಲ ಮಾಡಿಕೊಡಲು ಪ್ರಯತ್ನಿಸುತ್ತೇವೆ ಎಂದು ವಾಟ್ಸಾಪ್ ವಕ್ತಾರರು ತಿಳಿಸಿದ್ದಾರೆ. ಖಾತೆಗಳು ಶೀಘ್ರದಲ್ಲೇ ಮರುಸ್ಥಾಪನೆಯಾಗಲಿವೆ ಎಂದು ಸಂಸ್ಥೆ ತಿಳಿಸಿದ್ದರೂ, ಕಚೇರಿ ಮತ್ತು ವೈಯಕ್ತಿಕ ಕೆಲಸಗಳಿಗಾಗಿ ಸಂಪೂರ್ಣವಾಗಿ ವಾಟ್ಸಾಪ್ ನಂಬಿಕೊಂಡಿದ್ದ ಜನರಿಗೆ ಸೋಮವಾರ ರಾತ್ರಿ ಮಾತ್ರ ತೀವ್ರ ತಲೆನೋವಾಗಿ ಪರಿಣಮಿಸಿತು.


