Asianet Suvarna News Asianet Suvarna News

ಶೀಘ್ರವೇ ಭಾರತಕ್ಕೆ ವೊಡಾಫೋನ್‌ ಗುಡ್‌ಬೈ? ವರದಿ ಬಗ್ಗೆ ಕಂಪನಿ ಹೇಳಿದ್ದಿಷ್ಟು....

  • ವೊಡಾಫೋನ್‌-ಐಡಿಯಾ ಸಂಯೋಜನೆ ಬಳಿಕವೂ ಕಂಪನಿಗೆ ಲಾಭವಿಲ್ಲ
  • ಜಿಯೋ ಸೇವೆ ಆರಂಭವಾದ ಬಳಿಕ ಕಂಪನಿಗೆ ಭಾರೀ ಹೊಡೆತ
  • ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸಿದ ಸುಪ್ರೀಂ ಕೋರ್ಟ್ ಆದೇಶ
Vodafone To Shut Down Services in India Company Denies Reports
Author
Bengaluru, First Published Nov 1, 2019, 12:00 PM IST

ನವದೆಹಲಿ (ನ.01): ತೀವ್ರ ಆರ್ಥಿಕ ನಷ್ಟದ ಸುಳಿಗೆ ಸಿಲುಕಿರುವ ಭಾರತದ ಅತಿದೊಡ್ಡ ಟೆಲಿಕಾಂ ಸಂಸ್ಥೆ ವೊಡಾಫೋನ್‌, ಭಾರತದ ಟೆಲಿಕಾಂ ಮಾರುಕಟ್ಟೆಯಿಂದ ಯಾವುದೇ ಸಂದರ್ಭದಲ್ಲೂ ಹಿಂದೆ ಸರಿಯಬಹುದು ಎಂದು ವರದಿಗಳು ತಿಳಿಸಿವೆ.

ವೊಡಾಫೋನ್‌-ಐಡಿಯಾ ಸಂಯೋಜನೆ ಬಳಿಕವೂ ಕಂಪನಿ ಲಾಭದ ಹಾದಿಗೆ ಮರಳಿಲ್ಲ. ಜಿಯೋ ಸೇವೆ ಆರಂಭವಾದ ಬಳಿಕ ಕಂಪನಿಗೆ ಭಾರೀ ಹೊಡೆತ ಬಿದ್ದಿದೆ. ಜೊತೆಗೆ ಇತ್ತೀಚೆಗೆ ವೊಡಾಫೋನ್‌ ಸೇರಿದಂತೆ 3 ಟೆಲಿಕಾಂ ಕಂಪನಿಗಳು ಕೇಂದ್ರ ಸರ್ಕಾರಕ್ಕೆ 1.40 ಲಕ್ಷ ಕೋಟಿ ರು. ಹಣ ಕಟ್ಟಬೇಕು ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿರುವುದು ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸಿದೆ. 

ವೋಡಾಫೋನ್ ಹಾಗೂ ಐಡಿಯಾ ಜೊತೆಯಾಗಿ ಹೆಜ್ಜೆ ಹಾಕಿದಾಗಲೇ ಹಿನ್ನಡೆಯಾಗಿತ್ತು. ಹೊಂದಾಣಿಕೆಯ ಒಟ್ಟು ಆದಾಯ ನಿಯಮದ(AGR) ಪ್ರಕಾರ ವೋಡಾಫೋನ್ ಹಾಗೂ ಐಡಿಯಾ ಕಂಪನಿ 3 ತಿಂಗಳಲ್ಲಿ 28,309  ಕೋಟಿ ರೂಪಾಯಿ ಪಾವತಿಸುವಂತೆ  ಸುಪ್ರೀಂ ಕೋರ್ಟ್ ಸೂಚಿಸಿತ್ತು.

ಇದನ್ನೂ ಓದಿ | ಮೊಬೈಲ್ ಇಂಟರ್ನೆಟ್ ಸ್ಪೀಡ್ ಚಾರ್ಟ್ ಪ್ರಕಟ; ಬಳಕೆದಾರನ ಪ್ರೀತಿಗೆ ಯಾರು ಪಾತ್ರ?...

ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ವೋಡಾಫೋನ್ ಐಡಿಯಾ ಶೇರು ಕುಸಿತ ಕಂಡಿದೆ. ಸತತ 52 ವಾರದಿಂದ ವೋಡಾಫೋನ್ ಐಡಿಯಾ ಶೇರು ಏರಿಕೆ ಕಂಡಿಲ್ಲ. ಬುಧವಾರ(ಅ.30)ರಂದು 3.86 ರೂಪಾಯಿಂದ ಆರಂಭಗೊಂಡು 3.62 ರೂಪಾಯಿಯಲ್ಲಿ ದಿನದ ವಹಿವಾಟು ಅಂತ್ಯವಾಯಿತು. ಇದರಿಂದ ಬರೋಬ್ಬರಿ 11,091 ರೂಪಾಯಿ ನಷ್ಟ ಅನುಭವಿಸಿದೆ.

ಜೊತೆಗೆ ಮುಂದಿನ ದಿನಗಳಲ್ಲೂ ಟೆಲಿಕಾಂ ಆದಾಯ ಹೆಚ್ಚಾಗುವ ಯಾವುದೇ ಸುಳಿವು ಸಿಗುತ್ತಿಲ್ಲ. ಹೀಗಾಗಿ ಭಾರತೀಯ ಮಾರುಕಟ್ಟೆಯಿಂದ ಹೊರನಡೆಯುವ ಬಗ್ಗೆ ಕಂಪನಿ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಆಂಗ್ಲ ವೆಬ್‌ಸೈಟೊಂದು ವರದಿ ಮಾಡಿದೆ.

ಇದನ್ನೂ ಓದಿ | ವಾಟ್ಸಪ್‌ ಬಳಸಿ ಮೊಬೈಲ್‌ಗೆ ಕನ್ನ! 'ನಿಗೂಢ’ ಬೇಹುಗಾರಿಕೆಗೆ ಬೆಚ್ಚಿಬಿದ್ರು ಜನ...

AGR ನಿಯಮದ ಕುರಿತು ಘನವೆತ್ತ ಸುಪ್ರೀಂ ಕೋರ್ಟ್ ತೀರ್ಪು ವೋಡಾಫೋನ್ ಐಡಿಯಾಗೆ ತೀವ್ರ ಬೇಸರ ತಂದಿದೆ ಎಂದು ಕಂಪನಿ  ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದೆ.  

ಟಿಲಿಕಾಂ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳಿಗೆ ಕಾರಣವೂ ಇದೆ. ವೋಡಾಫೋನ್ ಹಾಗೂ ಐಡಿಯಾ ಜಂಟಿ ಉದ್ಯಮ ಪ್ರತಿ ದಿನ ಲಕ್ಷ ಲಕ್ಷ ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ. ಇದರಿಂದ ಕೋಟಿ ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ. ಇಷ್ಟೇ ಅಲ್ಲ ಹಾಕಿದ ಬಂಡವಾಳವೂ ಕೊಚ್ಚಿಹೋಗುತ್ತಿದೆ.

ಕಳೆದ ವರ್ಷ ವೊಡಾಫೋನ್‌ - ಐಡಿಯಾ ಶೇ.32.1ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದರೆ ಪ್ರಸಕ್ತ ವರ್ಷ ಅದು ಶೇ.27.8ಕ್ಕೆ ಕುಸಿದಿದೆ. ಕಂಪನಿ ಸದ್ಯ 37 ಕೋಟಿ ಚಂದಾದಾರರನ್ನು ಹೊಂದಿದೆ.

ಕೆಲ ದಿನಗಳಿಂದ ಟೆಲಿಕಾಂ ಕ್ಷೇತ್ರದಲ್ಲಿ ವೋಡಾಫೋನ್ ಭಾರತಕ್ಕೆ ಗುಡ್‌ಬೈ  ಹೇಳಲು ಸಜ್ಜಾಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಯಾವುದೇ ಕ್ಷಣದಲ್ಲೂ ವೋಡಾಫೋನ್ ಭಾರತದಲ್ಲಿ ಸಂರ್ಕದ ಕಡಿದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಇಲ್ಲ, ವದಂತಿಯಷ್ಟೇ...: ಕಂಪನಿ

ಆದರೆ ಈ ವರದಿಗಳಿಗೆ ಪ್ರತಿಕ್ರಿಯಿಸಿರುವ ಕಂಪನಿ, ಇದು ವಾಸ್ತವಕ್ಕೆ ದೂರವಾದ ವಿಚಾರ, ವದಂತಿಯಷ್ಟೇ ಎಂದು ಹೇಳಿದೆ.  ನಾವು ಎಲ್ಲಾ ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಿದ್ದೇವೆ, ಎಂದು ಹೇಳಿದೆ.

2016ರಲ್ಲಿ ಟೆಲಿಕಾಂ ಮಾರುಕಟ್ಟೆಗೆ ರಿಲಯನ್ಸ್ ಜಿಯೋ ಕಾಲಿಟ್ಟ ಬೆನ್ನಲ್ಲಿ, 2017ರಲ್ಲಿ ವೊಡಾಫೋನ್ ಮತ್ತು ಐಡಿಯಾ ಕಂಪನಿಗಳು ವಿಲೀನಗೊಂಡಿದ್ದವು. 

Follow Us:
Download App:
  • android
  • ios