ಬೆಂಗಳೂರು (ಅ.24): ಇಂಟರ್ನೆಟ್ ಬಳಕೆದಾರರಿಗೆ ಸದಾ ಕಾಡುವ ಚಿಂತೆ ಒಂದೇ... ಅದು ‘ಸ್ಪೀಡ್’! ಮೊಬೈಲ್ ಇಂಟರ್ನೆಟ್ ಆಗಿರಲಿ ಅಥವಾ ಲ್ಯಾಪ್/ಡೆಸ್ಕ್‌ಟಾಪ್ ಆಗಿರಲಿ, ಇಂಟರ್ನೆಟ್ ವೇಗ ಸಾಲಿಡ್ ಆಗಿರ್ಬೇಕು.

ಯೂಟ್ಯೂಬ್‌ನಲ್ಲಿ ಕಾರ್ಟೂನ್ ನೋಡುವಾಗ ಬಫರ್ ಆದ್ರೆ ಸಾಕು, ಸಣ್ಣ ಮಕ್ಕಳು  ಮತ್ತೆ ಮೊಬೈಲನ್ನು ಮೂಸಿ ನೋಡಲ್ಲ! ಅಂಥಹ ಇಂಟರ್ನೆಟ್ ಯುಗದಲ್ಲಿ ನಾವಿದ್ದೇವೆ.  

ಇಂಟರ್ನೆಟ್ ಆಧುನಿಕ ಜೀವನದ ಅವಿಭಾಜ್ಯ ಅಂಗವಾಗಿದೆ. ಆ ಹಿನ್ನೆಲೆಯಲ್ಲಿ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಕೂಡಾ ಇಂಟರ್ನೆಟ್ ಸೌಲಭ್ಯ ಹಾಗೂ ಅದರ ವೇಗದ ಮೇಲೆ ನಿರಂತರ ಕಣ್ಣಿಟ್ಟಿದೆ. ಹಾಗಾಗಿ ಪ್ರತಿ ತಿಂಗಳು  ಸ್ಪೀಡ್ ಚಾರ್ಟ್ ಬಿಡುಗಡೆ ಮಾಡುತ್ತದೆ.

ಇದನ್ನೂ ಓದಿ | ಕಳೆದ ತಿಂಗಳಿನ ಸ್ಪೀಡ್ ಚಾರ್ಟ್ ಹೀಗಿತ್ತು.... 

ಟ್ರಾಯ್ ಪ್ರಕಟಿಸಿರುವ ಸೆಪ್ಟೆಂಬರ್ ವರದಿಯಂತೆ, 4G ಡೌನ್‌ಲೋಡ್ ವಿಭಾಗದಲ್ಲಿ ರಿಲಯನ್ಸ್ ಜಿಯೋ ಅಗ್ರಸ್ಥಾನವನ್ನು ಕಾಪಾಡಿಕೊಂಡಿದೆ. ಜಿಯೋ ಪ್ರತಿ ಸೆಕೆಂಡಿಗೆ ಸರಾಸರಿ 21 ಮೆಗಾಬಿಟ್ 4G ಡೌನ್‌ಲೋಡ್ ವೇಗ ಹೊಂದಿದೆ. 

ಏರ್ಟೆಲ್ ಎರಡನೇ ಸ್ಥಾನದಲ್ಲಿದ್ದು, 8.3 mbps ಡೌನ್‌ಲೋಡ್ ಸ್ಪೀಡ್ ಹೊಂದಿದೆ. ವೊಡಾಫೋನ್ ಮತ್ತು ಐಡಿಯಾ ಸೆಲ್ಯುಲರ್ ಕ್ರಮವಾಗಿ 6.9 mbps ಮತ್ತು 6.4mbps ಸ್ಪೀಡ್ ಹೊಂದಿವೆ.

ವೊಡಾಫೋನ್ ಮತ್ತು ಐಡಿಯಾ ಕಂಪನಿಗಳು ವಿಲೀನವಾಗಿವೆಯಾದರೂ, ನೆಟ್ವರ್ಕ್ ಸಂಯೋಜನೆ ಇನ್ನೂ ಪ್ರಗತಿಯಲ್ಲಿದೆ. ಹಾಗಾಗಿ TRAI ಅವುಗಳನ್ನು ಪ್ರತ್ಯೇಕವಾಗಿಯೇ ಪರಿಗಣಿಸುತ್ತಿದೆ.

ಅಪ್ಲೋಡ್ ಸ್ಪೀಡ್ ನೋಡೋದಾದ್ರೆ, 5.4 mbps ಹೊಂದಿರುವ ಐಡಿಯಾ ಮೊದಲ ಸ್ಥಾನದಲ್ಲಿದೆ. 5.2mbps ಸ್ಪೀಡ್ ಹೊಂದಿರುವ ವೊಡಾಫೋನ್ ಎರಡನೇ ಸ್ಥಾನದಲ್ಲಿದೆ. ಜಿಯೋ ನಂತರದ ಸ್ಥಾನದಲ್ಲಿದ್ದು 4.2mbps ವೇಗ ಹೊಂದಿದೆ. ಏರ್ಟೆಲ್ 3.1mbps ಸ್ಪೀಡ್ ಹೊಂದಿರುವ ಮೂಲಕ ಕೊನೆ ಸ್ಥಾನದಲ್ಲಿದೆ.

ಮೈಸ್ಪೀಡ್ ಅಪ್ಲಿಕೇಶನ್‌ನ ಸಹಾಯದಿಂದ ಭಾರತದಾದ್ಯಂತ ಸಂಗ್ರಹಿಸುವ ಮಾಹಿತಿಯನ್ನು ಆಧರಿಸಿ TRAI ಸರಾಸರಿ ವೇಗವನ್ನು ಲೆಕ್ಕ ಹಾಕುತ್ತದೆ.

ಸರ್ಕಾರಿ ಸ್ವಾಮ್ಯದ BSNL ಕೇವಲ 3G ನೆಟ್ವರ್ಕ್ ಹೊಂದಿದೆ. 3G ವಿಭಾಗದಲ್ಲಿ, 2.6mbps ಡೌನ್ ಲೋಡ್ ಸ್ಪೀಡ್ ಮತ್ತು 1.3mbps ಅಪ್ಲೋಡ್ ಸ್ಪೀಡ್ ಹೊಂದಿರುವ ಮೂಲಕ ಖಾಸಗಿ ಆಪರೇಟರ್ ಗಳನ್ನು ಹಿಂದಿಕ್ಕಿದೆ.