ಬೆಂಗಳೂರು(ನ.20): ಭಾರತ ಅತ್ಯಂತ ಬೃಹತ್‌ ದತ್ತಾಂಶ ಆರ್ಥಿಕತೆಯಾಗಿ ಹೊರ ಹೊಮ್ಮಲಿದ್ದು, ಈ ನಿಟ್ಟಿನಲ್ಲಿ ಶೀಘ್ರದಲ್ಲಿ ದತ್ತಾಂಶ ರಕ್ಷಣೆ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಐಟಿ, ಸಂವಹನ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ. 

ಗುರುವಾರದಿಂದ ಇಲ್ಲಿ ಆರಂಭವಾದ ಮೂರು ದಿನಗಳ ‘ಬೆಂಗಳೂರು ಟೆಕ್‌ ಶೃಂಗಸಭೆ-2020’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ದತ್ತಾಂಶಗಳು ಡಿಜಿಟಲ್‌ ಆರ್ಥಿಕತೆಯ ಜೊತೆಗೆ ವಿಶ್ವದ ವಾಣಿಜ್ಯವನ್ನು ಮುನ್ನಡೆಸಿಕೊಂಡು ಹೋಗಲಿದೆ. ಹೀಗಾಗಿ ಭಾರತವನ್ನು ಬೃಹತ್‌ ದತ್ತಾಂಶ ಕೇಂದ್ರವನ್ನಾಗಿ ರೂಪಿಸಬೇಕಾಗಿದೆ. ಮೊಬೈಲ್‌ ಫೋನ್‌ ಹಾಗೂ ಆಧಾರ್‌ ಮಾದರಿಯಲ್ಲಿ ಭಾರತ ದೊಡ್ಡ ಪ್ರಮಾಣದ ದತ್ತಾಂಶ ಹಾಗೂ ಡಿಜಿಟಲ್‌ ಪರಿಸರ ವ್ಯವಸ್ಥೆ ಇದೆ. ಶೀಘ್ರದಲ್ಲಿ ದತ್ತಾಂಶ ರಕ್ಷಣೆ ಕಾನೂನು ಜಾರಿಗೆ ತರಲಾಗುವುದು ಎಂದರು.

ಶೇ.100ರಷ್ಟು ವಿದ್ಯುತ್‌ ಚಾಲಿತ ವಾಹನಕ್ಕೆ ಗುರಿ: ಸಚಿವ ಅಶ್ವತ್ಥನಾರಾಯಣ

ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಈ ನಿಟ್ಟಿನಲ್ಲಿ ಕರ್ನಾಟಕದ ದೇಶದ ದೊಡ್ಡ ದತ್ತಾಂಶ ಆರ್ಥಿಕತೆಯಾಗಿ ಹೊರ ಹೊಮ್ಮುವಂತೆ ಮಾಡಲಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದರು. ಕೋವಿಡ್‌ ವೇಳೆಯಲ್ಲಿ ಸಹ ಸಂವಹನ ಕ್ಷೇತ್ರದಲ್ಲಿ ಶೇ. 7 ರಷ್ಟು ಬೆಳವಣಿಗೆಯಾಗಿದ್ದು. ವಿಶ್ವದ ಬೃಹತ್‌ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿವೆ. ಪ್ರಸ್ತುತ ಸಂದರ್ಭದಲ್ಲಿ ಎದುರಾಗಿರುವ ಸವಾಲುಗಳನ್ನು ಅವಕಾಶವಾಗಿ ಪರಿವರ್ತನೆ ಮಾಡಿಕೊಳ್ಳಬೇಕಾಗಿದೆ ಎಂದ ಅವರು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಮೊಬೈಲ್‌ ತಯಾರಿಕೆ ಹಾಗೂ ಬಿಡಿ ಭಾಗಗಳ ಕಂಪನಿಗಳು 11 ಲಕ್ಷ ಕೋಟಿ ರು. ಬಂಡವಾಳ ಹೂಡಲಿವೆ. ಈ ಪೈಕಿ ಏಳು ಲಕ್ಷ ಕೋಟಿ ರು. ರಫ್ತು ಆಗಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.