ಲಾಸ್‌ ಏಂಜಲೀಸ್‌[ಜ.20]: ವಿಶ್ವದ ಹಲವು ನಗರಗಳಲ್ಲಿ ಟ್ಯಾಕ್ಸಿ ಸೇವೆ ನೀಡುತ್ತಿರುವ ಅಮೆರಿಕ ಮೂಲದ ಉಬರ್‌ ಕಂಪನಿ, ಮುಂದಿನ 4 ವರ್ಷಗಳಲ್ಲಿ ‘ಹಾರುವ ಟ್ಯಾಕ್ಸಿ’ ಸೇವೆ ಆರಂಭಿಸಲು ಉದ್ದೇಶಿಸಿದೆ.

ವಿದ್ಯುತ್‌ ಚಾಲಿತ ವಿಮಾನಗಳನ್ನು ಬಳಸಿಕೊಂಡು, ಪ್ರಯಾಣಿಕರನ್ನು ಶೀಘ್ರವಾಗಿ ತಲುಪಿಸುವ ಯೋಜನೆ ಇದಾಗಿದೆ. ಮೊಬೈಲ್‌ ಮೂಲಕ ಉಬರ್‌ ಆ್ಯಪ್‌ನಲ್ಲಿ ಕೋರಿಕೆ ಇಡುತ್ತಿದ್ದಂತೆ ಪ್ರಯಾಣಿಕರು ಇರುವ ಎತ್ತರದ ಕಟ್ಟಡ, ಬಹುಮಹಡಿ ವಾಹನ ನಿಲುಗಡೆ ತಾಣ ಅಥವಾ ಶಾಪಿಂಗ್‌ ಕೇಂದ್ರದಿಂದಲೇ ಪಿಕಪ್‌ ಮಾಡಲಾಗುತ್ತದೆ. 4 ಆಸನಗಳನ್ನು ಹೊಂದಿರುವ ವಿಮಾನಗಳು ಇವಾಗಿದ್ದು, ನೆಲಮಟ್ಟದಿಂದ 1000ರಿಂದ 2000 ಅಡಿ ಎತ್ತರದಲ್ಲಿ ಹಾರಾಡುತ್ತವೆ. ಪ್ರಯಾಣ ದರ ಈಗ ಇರುವ ಟ್ಯಾಕ್ಸಿ ದರಕ್ಕಿಂತ ಕೇವಲ ಮೂರನೇ ಒಂದರಷ್ಟುಅಧಿಕವಾಗಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಉದಾಹರಣೆಗೆ, 40 ಕಿ.ಮೀ. ದೂರದ ಟ್ಯಾಕ್ಸಿ ಪ್ರಯಾಣಕ್ಕೆ ಉಬರ್‌ನಲ್ಲಿ 4200 ರು. ಆಗುತ್ತಿದೆ ಎಂದಾದಲ್ಲಿ ‘ಹಾರುವ ಟ್ಯಾಕ್ಸಿ’ಯಲ್ಲಿ 6400 ರು. ಪಾವತಿಸಬೇಕಾಗುತ್ತದೆ. ಶ್ರೀಮಂತರು ಮಾತ್ರವೇ ಅಲ್ಲದೇ ಎಲ್ಲರೂ ಪ್ರಯಾಣಿಸುವಂತೆ ಮಾಡಲು ಉಬರ್‌ ಪ್ರಯತ್ನಿಸುತ್ತಿದೆ. ಬುಕ್‌ ಮಾಡಿದ, ಐದೇ ನಿಮಿಷದಲ್ಲಿ ಉಬರ್‌ ಟ್ಯಾಕ್ಸಿ ಹತ್ತಬಹುದಾಗಿರುತ್ತದೆ.

ಗಂಟೆಗೆ 240ರಿಂದ 320 ಕಿ.ಮೀ. ವೇಗದಲ್ಲಿ ಈ ವಿಮಾನಗಳು ಸಂಚರಿಸುತ್ತವೆ. ಒಮ್ಮೆ ಚಾಜ್‌ರ್‍ ಮಾಡಿದರೆ ಸುಮಾರು 100 ಕಿ.ಮೀ. ದೂರ ಕ್ರಮಿಸಬಹುದು. ಆ ಬಳಿಕ ಬೇರೆ ಬ್ಯಾಟರಿ ಬಳಸಿ ಪ್ರಯಾಣ ಮುಂದುವರಿಸಬಹುದು. 2023ಕ್ಕೆ ಅಮೆರಿಕದ ಲಾಸ್‌ ಏಂಜಲೀಸ್‌ ಹಾಗೂ ಡಲ್ಲಾಸ್‌ನಲ್ಲಿ ಈ ಸೇವೆ ಆರಂಭವಾಗಲಿದೆ. ಆನಂತರ ಇತರೆಡೆಗೆ ವಿಸ್ತರಿಸಲಾಗುತ್ತದೆ. ಹಾರುವ ಟ್ಯಾಕ್ಸಿಗಳ ವಿನ್ಯಾಸ ಕುರಿತಂತೆ ಐದು ಕಂಪನಿಗಳ ಜತೆ ಈಗಾಗಲೇ ಉಬರ್‌ ಕಾರ್ಯನಿರ್ವಹಿಸುತ್ತಿದೆ.