Asianet Suvarna News Asianet Suvarna News

ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ ಪ್ರಮುಖ 12 ಒಪ್ಪಂದಗಳಿಗೆ ಅಂಕಿತ

ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ ಪ್ರಮುಖ 12 ಒಪ್ಪಂದಗಳಿಗೆ ಅಂಕಿತ ಹಾಕಲಿದ್ದು, ತಂತ್ರಜ್ಞಾನ, ನವೋದ್ಯಮ, ಸಂಶೋಧನೆ, ಕೃಷಿ ಕ್ಷೇತ್ರಗಳಲ್ಲಿ ಹೆಚ್ಚು ಒಡಂಬಡಿಕೆ ಎಂದ ಡಿಸಿಎಂ

sign to 12 agreements In Bengaluru Tech Summit 2020 from Nov 19 rbj
Author
Bengaluru, First Published Nov 9, 2020, 7:34 PM IST

ಬೆಂಗಳೂರು, (ನ.09): ಇದೇ ನವೆಂಬರ್‌ 19ರಿಂದ ನಡೆಯಲಿರುವ ಮೂರು ದಿನಗಳ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ (ಬಿಟಿಎಸ್)ಯಲ್ಲಿ ಮಹತ್ವದ 12 ಒಪ್ಪಂದಗಳಿಗೆ ಜಾಗತಿಕ ಆವಿಷ್ಕಾರ ಮೈತ್ರಿಕೂಟದ (GIA) ಪಾಲುದಾರ ದೇಶಗಳ ಜತೆ ಸಹಿ ಹಾಕಲಾಗುವುದು ಎಂದು ಐಟಿ-ಬಿಟಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಕಟಿಸಿದರು.

ತಂತ್ರಜ್ಞಾನ ಶೃಂಗಸಭೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸೋಮವಾರ ವಿವಿಧ ದೇಶಗಳ ಉನ್ನತ ರಾಜತಾಂತ್ರಿಕ ಅಧಿಕಾರಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ನಡುವೆಯೂ ನಡೆಯುತ್ತಿರುವ ಅತಿದೊಡ್ಡ ಪ್ರಮಾಣದ ಈ ಶೃಂಗದಲ್ಲಿ ಸುಮಾರು 25ಕ್ಕೂ ಹೆಚ್ಚು ದೇಶಗಳು ಭಾಗಿಯಾಗುತ್ತಿದ್ದು, ತಂತ್ರಜ್ಞಾನದ ಅನೇಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಪ್ಪಂದಗಳು ಆಗಲಿವೆ. ಈ ಪೈಕಿ 7 ಒಪ್ಪಂದಗಳು ಸಹಿಗೂ ಸಿದ್ಧವಾಗಿವೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ತಂತ್ರಜ್ಞಾನ ಮೇಳ-2020ಕ್ಕೆ ನ.19ರಂದು ಪ್ರಧಾನಿ ಮೋದಿ ಚಾಲನೆ: ಡಿಸಿಎಂ

ಈ ಹಿಂದೆ ಮಾಡಿಕೊಂಡಿರುವ ಒಪ್ಪಂದಗಳ ಅನುಷ್ಠಾನಕ್ಕೆ ಇನ್ನಷ್ಟು ವೇಗ ನೀಡಲಾಗುವುದು. ಜತೆಗೆ, ಹೊಸ ಒಪ್ಪಂದಗಳನ್ನು ಕಾಲಮಿತಿಯೊಳಗೆ, ಪೂರ್ವ ನಿಗದಿಯಂತೆ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುವುದು. ಒಪ್ಪಂದಗಳ ಫಲಶ್ರುತಿ ಬೇಗ ಸಿಗುವ ಗುರಿಯೊಂದಿಗೆ ಪಾಲುದಾರ ದೇಶಗಳ ಜತೆ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಕೃಷಿ, ಸಂಶೋಧನೆ, ಅಭಿವೃದ್ಧಿ, ಸ್ಟಾರ್ಟ್ ಅಪ್‌ʼಗಳ ಸ್ಥಾಪನೆ ಪಾಲುದಾರಿಕೆ ಸೇರಿದಂತೆ ಏಳು ಮಹತ್ವದ ಹೊಸ ಒಪ್ಪಂದಗಳಿಗೆ ಶೃಂಗಸಭೆಯಲ್ಲಿ ಸಹಿ ಬೀಳಲಿದೆ ಎಂದ ಅವರು, ಜಾಗತಿಕ ಮಟ್ಟದ ಆವಿಷ್ಕಾರ ಮೈತ್ರಿ (GIA)ಗೆ ಸಂಬಂಧಿಸಿದ ವಿಚಾರ ವಿನಿಮಯ- ಚರ್ಚೆಯ ಜತೆಗೆ 15 ಅಧಿವೇಶನಗಳು ನಡೆಯುತ್ತಿವೆ. 60ಕ್ಕೂ ಹೆಚ್ಚು ಜನ ಈ ಬಗ್ಗೆ ತಮ್ಮ ಆಭಿಪ್ರಾಯವನ್ನು ಮಂಡಿಸಲಿದ್ದಾರೆ. ವಿವಿಧ ದೇಶಗಳ ಸಚಿವರ ಮಟ್ಟದ ಹತ್ತು ನಿಯೋಗಗಳು ಭಾಗಿಯಾಗಲಿ. ಇದರ ಜತೆಗೆ 500ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಮಟ್ಟದ ನಿಯೋಗಗಳು ಭೇಟಿ ನೀಡುತ್ತಿವೆ ಎಂದು ತಿಳಿಸಿದರು.

ಪಾಲುದಾರಿಕೆ ದೇಶಗಳು:
ಆಸ್ಟ್ರೇಲಿಯಾ, ಫ್ರಾನ್ಸ್‌, ಜರ್ಮನಿ, ಇಸ್ರೇಲ್‌, ನೆದರ್‌ಲ್ಯಾಂಡ್‌, ಸ್ವಿಡ್ಜರ್‌ಲೆಂಡ್‌, ಇಂಗ್ಲೆಂಡ್‌ ತಂತ್ರಜ್ಞಾನ ಶೃಂಗಸಭೆಯ ಪಾಲುದಾರ ದೇಶಗಳಾಗಿದ್ದು, ಮುಖ್ಯವಾಗಿ ಈ ರಾಷ್ಟ್ರಗಳಿಂದ ಕರ್ನಾಟಕ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆಯನ್ನು ನಿರೀಕ್ಷೆ ಮಾಡುತ್ತಿದೆ. ಈಗಾಗಲೇ ಕರ್ನಾಟಕ ಕೋವಿಡ್‌ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಿ ಉದ್ಯಮಕ್ಕೆ ಪೂರಕವಾದ ಕಾರ್ಮಿಕ ಕಾಯ್ದೆಗಳ ಸುಧಾರಣೆ, ತರಬೇತಿ, ಕುಶಲತೆಯುಳ್ಳ ಶಿಕ್ಷಣಕ್ಕೆ ಒತ್ತು ನೀಡಿದೆ. ಹೀಗಾಗಿ ರಾಜ್ಯದಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರಿಗೆ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದು, ಉತ್ತಮ ಮಾನವ ಸಂಪನ್ಮೂಲವನ್ನು ನೇಮಿಸಿಕೊಳ್ಳುವುದು ಸುಲಭ ಎಂದರು.

ಹೂಡಿಗೆಗೆ ವಿವಿಧ ದೇಶಗಳ ಉತ್ಸುಕತೆ:
ಇದೇ ಮಾಧ್ಯಮಗೋಷ್ಠಿಯಲ್ಲಿ ಬ್ರಿಟನ್‌, ಆಸ್ಟ್ರೇಲಿಯಾ, ನೆದರ್‌ಲ್ಯಾಂಡ್‌, ಸ್ವೀಡನ್‌, ಫ್ರಾನ್ಸ್‌, ಇಸ್ರೇಲ್‌, ಜಪಾನ್‌, ಜರ್ಮನಿ ದೇಶಗಳ ಉನ್ನತ ರಾಜತಾಂತ್ರಿಕ ಅಧಿಕಾರಿಗಳು ಮಾತನಾಡಿದರು.

ವರ್ಚುವಲ್‌ ಮೂಲಕ ಮಾತನಾಡಿದ ಭಾರತದಲ್ಲಿನ ಆಸ್ಟ್ರೇಲಿಯಾ‌ ಹೈಕಮೀಷನರ್ ಹಾನ್‌ಬೆರಿ ಓ ಫರೇಲ್;‌ "ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳು ಹಲವಾರು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿವೆ. ಈ ಪೈಕಿ ಸೈಬರ್‌ ಸೆಕ್ಯೂರಿಟಿಯಲ್ಲಿ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಲಾಗುತ್ತಿದೆ. ಕರ್ನಾಟಕದ ಜತೆ ತಂತ್ರಜ್ಞಾನ, ಬಾಹ್ಯಾಕಾಶ, ಸೈಬರ್‌ ಭದ್ರತೆ, ಖನಿಜ ಮುಂತಾದ ಕ್ಷೇತ್ರಗಳಲ್ಲಿ ಮತ್ತಷ್ಟು ವಿಸ್ತೃತವಾಗಿ ಕೆಲಸ ಮಾಡಲು ಸಿದ್ಧವಿದೆ" ಎಂದರು.

ಬೆಂಗಳೂರಿನಲ್ಲಿರುವ ಸ್ವಿಡ್ಜರ್‌ಲೆಂಡ್‌ ಕಾನ್ಸುಲೇಟ್‌ ಜನರಲ್‌ ಸೆಬಾಸ್ಟಿಯನ್‌ ಹಗ್‌ ಅವರು ವರ್ಚುಯಲ್‌ ಮೂಲಕ ಮಾತನಾಡಿ; "ಜಗತ್ತಿನ ಶ್ರೇಷ್ಟ ನಾವಿನ್ಯತಾ ಕೇಂದ್ರಗಳು ಹಾಗೂ ಕರ್ನಾಟಕದ ನಡುವೆ ಸಂಪರ್ಕ ಏರ್ಪಡಲು ಈ ಶೃಂಗಸಭೆ ಹೆಚ್ಚು ಸಹಕಾರಿ ಆಗುತ್ತದೆ. ಕರ್ನಾಟಕದಲ್ಲಿ ಹೂಡಿಕೆ ಮಾಡಲು ನಮ್ಮ ದೇಶದ ಉದ್ದಿಮೆದಾರರು ಉತ್ಸುಕರಾಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಗೋಷ್ಠಿಯಲ್ಲಿ ಉಪಸ್ಥಿತರಿದ್ದ ನೆದರ್‌ಲ್ಯಾಂಡ್‌ನ ದಕ್ಷಿಣ ಭಾರತದ ಕಾನ್ಸುಲೇಟ್‌ ಜನರಲ್‌ ಗೆರ್ಟ್‌ ಹೆಜ್‌ಕೂಪ್‌ ಮಾತನಾಡಿ, "ಆಧುನಿಕ ತಂತ್ರಜ್ಞಾನದ ಹಲವಾರು ಕ್ಷೇತ್ರದಲ್ಲಿ ಕರ್ನಾಟಕದ ಜತೆ ನೆದರ್‌ಲ್ಯಾಂಡ್‌ ಅತ್ಯುತ್ತಮ ಪಾಲುದಾರಿಕೆಯನ್ನು ಹೊಂದಿದೆ. ಈ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಈ ಶೃಂಗಸಭೆ ಸಹಕಾರಿಯಾಗಲಿದೆ. ಈ ಶೃಂಗದಲ್ಲಿ ಹೇಗ್‌ ಬಿಸಿನೆಸ್‌ ಏಜೆನ್ಸಿಯೂ ಭಾರತದ ಸ್ಟಾರ್ಟಪ್‌ಗಳ ಅನುಕೂಲನಕ್ಕೆ ಡಿಜಿಟಲ್‌ ಲ್ಯಾಂಡಿಂಗ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದೆ. ಭಾರತದ ಸುಮಾರು 50ಕ್ಕೂ ಹೆಚ್ಚು ತಂತ್ರಜ್ಞಾನ ಸ್ಟಾರ್ಟಪ್‌ಗಳು ತಾವು ಆವಿಷ್ಕಾರ ಮಾಡಿದ ತಂತ್ರಜ್ಞಾನವನ್ನು ಯುರೋಪ್‌ಗೆ ಕೊಂಡೊಯ್ಯಲು ಈ ಶೃಂಗವು ನೆರವಾಗಲಿದೆ. ತಂತ್ರಜ್ಞಾನದ ಜತೆಗೆ ಸರಕು ಮತ್ತು ಸೇವೆಗಳನ್ನು ಯುರೋಪ್‌ ಮಾರುಕಟ್ಟೆಗೆ ತಲುಪಿಸಲು ಭಾರತೀಯ ಸ್ಟಾರ್ಟಪ್‌ಗಳಿಗೆ ನೆದರ್‌ಲ್ಯಾಂಡ್‌ ಮಹಾದ್ವಾರವಾಗಿದೆ. ಇದಕ್ಕೆ ಪೂರಕವಾಗಿ ಸುರಕ್ಷತೆ, ಕೃಷಿ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕದ ಜತೆ ಎರಡು ಮಹತ್ವದ ಒಪ್ಪಂದಗಳಿಗೆ ನೆದರ್‌ಲ್ಯಾಂಡ್‌ ಸಹಿ ಹಾಕಲಿದೆ" ಎಂದರು.

ಶುಕ್ರಯಾನದಲ್ಲಿ ಪಾಲುದಾರಿಕೆ:
ವರ್ಚುವಲ್‌ ವೇದಿಕೆ ಮೂಲಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಭಾರತದಲ್ಲಿನ ಸ್ವೀಡನ್‌ ದೇಶದ ಹೈಕಮೀಷನರ್‌ ಡಾ.ಫ್ಯಾನಿ ವಾನ್‌ ಹೆಲ್ಯಾಂಡ್‌, "ಭಾರತದಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿ ಸ್ವೀಡನ್‌ ಹಿಂದಿನಿಂದಲೂ ಕೆಲಸ ಮಾಡುತ್ತಿದೆ. ಮುಖ್ಯವಾಗಿ ಚಂದ್ರಯಾನ-1ರಲ್ಲಿ ತಂತ್ರಜ್ಞಾನ ನೀಡಿಕೆ ವಿಚಾರದಲ್ಲಿ ಸ್ವೀಡನ್‌, ಭಾರತದ ಜತೆ ಕೈಜೋಡಿಸಿತ್ತು. ಇದೀಗ ʼಶುಕ್ರಯಾನʼ ಯೋಜನೆಯಲ್ಲೂ ಭಾರತಕ್ಕೆ ನಮ್ಮ ದೇಶವೂ ನೆರವಾಗಲಿದೆ ಅಭಿಪ್ರಾಯ ತಿಳಿಸಿದರು.

ಇವರ ಜತೆಗೆ, ಇಸ್ರೇಲ್‌ನ ದಕ್ಷಿಣ ಭಾರತದ ಕಾನ್ಸುಲ್‌ ಜನರಲ್‌ ಜೋನಾಥನ್‌ ಝಕಾಡ, ಬೆಂಗಳೂರಿನಲ್ಲಿರುವ ಫ್ರಾನ್ಸ್‌ನ ಕಾನ್ಸುಲ್‌ ಜನರಲ್‌ ಡಾ.ಮಾರಜೋರಿ ವಾನ್‌ಬೈಲಿಯೇಮ್‌, ಬೆಂಗಳೂರಿನಲ್ಲಿರುವ ಬ್ರಿಟನ್‌ ಕಾನ್ಸುಲೇಟ್‌ನ ಉಪ ಕಮೀಷನರ್‌ ಜೆರ್ಮಿ ಪಿಲ್ಮೋರೆ ಬೆಡ್‌ಫೋರ್ಡ್‌,  ಬೆಂಗಳೂರಿನ ಡೆನ್ಮಾರ್ಕ್‌ ಕಾನ್ಸುಲ್‌ ಜನರಲ್‌ ಜೆಟೆ ಬೆಜರಮ್‌, ಬೆಂಗಳೂರಿನ ಜರ್ಮನಿ ಕಾನ್ಸುಲ್‌ ಜನರಲ್‌ ಅಶಿಮ್‌ ಬರ್ಕಾಟ್‌ ಮಾತನಾಡಿದರು.

ಕರ್ನಾಟಕ ಜಗತ್ತಿಗೆ ಫೇವರೀಟ್:‌
ಜಾಗತಿಕ ಹೂಡಿಕೆದಾರರಿಗೆ ಕರ್ನಾಟಕ ಅತ್ಯಂತ ಇಷ್ಟದ ತಾಣವಾಗಿದೆ. ಮುಂಬರುವ ಟೆಕ್‌ ಸಮ್ಮಿಟ್‌ ಮೂಲಕ ಅದು ಮತ್ತಷ್ಟು ವಿಸ್ತೃತವಾಗಲಿದೆ. ಇವತ್ತು ಜಗತ್ತನ್ನು ಕಾಡುತ್ತಿರುವ ಕೋವಿಡ್‌ ಪಿಡುಗಿನಿಂದ ಪಾರಾಗಲು ಇಂಥ ಶೃಂಗಸಭೆಗಳು ನಡೆಯಬೇಕು. ಆ ದಿಸೆಯಲ್ಲಿ ನಡೆಯುತ್ತಿರುವ ಈ ಶೃಂಗವೂ ಜಾಗತಿಕ ಹೂಡಿಕೆದಾರರಿಗೆ ಹೊಸ ದಿಕ್ಸೂಚಿಯಾಗಲಿದೆ ಎಂದು ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ ಹೇಳಿದರು.

ಐಟಿ-ಬಿಟಿ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್‌ ಉಪಸ್ಥಿತರಿದ್ದರು.

Follow Us:
Download App:
  • android
  • ios