ಬೆಂಗಳೂರು, (ನ.04): ಕೋವಿಡ್-19 ಸಂಕಷ್ಟದ ನಡುವೆ ಇದೇ ಮೊದಲ ಬಾರಿಗೆ ವರ್ಚ್ಯುಯಲ್ (ಆನ್ ಲೈನ್) ಆಗಿ ನಡೆಯಲಿರುವ ಪ್ರತಿಷ್ಠಿತ “ಬೆಂಗಳೂರು ತಂತ್ರಜ್ಞಾನ ಮೇಳ-2020’ (ಬಿಟಿಎಸ್) ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇದೇ 19ರಂದು ಉದ್ಘಾಟಿಸಲಿದ್ದಾರೆ ಎಂದು ಐಟಿ- ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. 

ಬಿಟಿಎಸ್ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನ.19ರಿಂದ 21ರವರೆಗೆ ನಡೆಯಲಿರುವ  ಮೇಳವು ಕೊರೋನಾ ಭೀತಿಯನ್ನು ಹಿಮ್ಮೆಟ್ಟಿಸಿದೆ.  ಜಗತ್ತಿನೆಲ್ಲೆಡೆಯ ಉದ್ಯಮ ವಲಯದಿಂದ ಹಿಂದೆಂದಿಗಿಂತ ಹೆಚ್ಚಿನ ಸ್ಪಂದನೆ ವ್ಯಕ್ತವಾಗಿದೆ ಎಂದು ಅವರು ಹೇಳಿದರು.

ಮಾಹಿತಿ ತಂತ್ರಜ್ಞಾನ, ಜ್ಞಾನಾಧಾರಿತ ಆರ್ಥಿಕತೆ ಉತ್ತೇಜನಕ್ಕೆ ಚಿಂತನೆ: ಸಿಎಂ

ಜಗತ್ತಿನೆಲ್ಲೆಡೆ ಗಮನ ಸೆಳೆದಿರುವ “ಬೆಂಗಳೂರು ತಂತ್ರಜ್ಞಾನ ಮೇಳ”ದ 23ನೇ ಆವೃತ್ತಿ ಇದಾಗಿದೆ. 2019ರ ನವೆಂಬರ್ ನಲ್ಲಿ ನಡೆದ ಮೇಳದ 22ನೇ ಆವೃತ್ತಿಯು 21 ದೇಶಗಳು, 253 ಅಂತರರಾಷ್ಟ್ರೀಯ ನಿಯೋಗಗಳು, 44 ವಿಚಾರ ಗೋಷ್ಠಿಗಳು ಮತ್ತು 262 ವಿಚಾರ ಪ್ರತಿಪಾದಕರಿಗೆ ಹಾಗೂ 12,350 ಸಂದರ್ಶಕರಿಗೆ ಸಾಕ್ಷಿಯಾಗಿತ್ತು. ಇದೀಗ ವರ್ಚ್ಯುಯಲ್ ಆಗಿ ನಡೆಯಲಿರುವ ಈ ಮೇಳಕ್ಕೆ ಅದಕ್ಕೂ ಹೆಚ್ಚಿನ ಸ್ಪಂದನೆ ವ್ಯಕ್ತವಾಗಿದೆ ಎಂದು ಬುಧವಾರ  ಮೇಳದ ಪೂರ್ವಭಾವಿ ಉದ್ಘಾಟನೆ ನೆರವೇರಿಸಿದ ಅಶ್ವತ್ಥ ನಾರಾಯಣ ಅವರು ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಜ್ಞಾನ ಹಾಗೂ ತಾಂತ್ರಿಕತೆ ಬಳಕೆಗೆ ಹೆಚ್ಚು ಒತ್ತು ನೀಡುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೇಳದ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದರು.

ರಾಜ್ಯ ಸರ್ಕಾರವು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಸಹಭಾಗಿತ್ವದಲ್ಲಿ “ಕೃತಕ ಬುದ್ಧಿಮತ್ತೆ ಸಂಶೋಧನಾ ಕೇಂದ್ರ”ವನ್ನು ಸ್ಥಾಪಿಸಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.

 ಮುಂಬರುವ ಸವಾಲುಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ಕೃತಕ ಬುದ್ಧಿಮತ್ತೆ ತಾಂತ್ರಿಕತೆಯು ಮುಖ್ಯ ಪಾತ್ರ ವಹಿಸಲಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.

ವ್ಯವಸಾಯ ಕ್ಷೇತ್ರದ ಸುಧಾರಣೆಗೆ ತಾಂತ್ರಿಕತೆಯನ್ನು ಪರಿಣಾಮಕಾರಿಯಾಗಿ ಬಳಸಲು ಒತ್ತು ನೀಡಲೇಬೇಕು. ರಾಜ್ಯದ ಸುಮಾರು 60ರಷ್ಟು ಜನ ಬದುಕಿಗಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಒಂದೆಡೆ ಆರ್ಥಿಕತೆ ಬೆಳೆಯುತ್ತಿದ್ದರೆ, ಮತ್ತೊಂದೆಡೆ ಕೃಷಿ ಕ್ಷೇತ್ರದ ಕೊಡುಗೆ ಕಡಿಮೆಯಾಗುತ್ತಿರುವುದು ಆಲೋಚನೆಗೀಡು ಮಾಡುವ ಅಂಶವಾಗಿದೆ. ರಾಜ್ಯದ ಜಿಡಿಪಿಗೆ ಕೃಷಿ ವಲಯದ ಕೊಡುಗೆ ಈಗ ಕೇವಲ 16ರಷ್ಟಿದೆ. ಇದು ಇನ್ನು ಐದು ವರ್ಷಗಳಲ್ಲಿ ಕನಿಷ್ಠ ಶೇ 30ರಷ್ಟವರೆಗಾದರೂ ಬೆಳೆಯಲೇಬೇಕು. ಆಗ ಮಾತ್ರ ಹಳ್ಳಿಗರ ವಲಸೆ ತಪ್ಪುವ ಜೊತೆಗೆ ಬೆಂಗಳೂರಿಗೆ ಹೊರತಾದ ಪ್ರದೇಶಗಳೂ ಬೆಳವಣಿಗೆ ಕಾಣುತ್ತವೆ ಎಂದು ಅಶ್ವತ್ಥ ನಾರಾಯಣ ವಿವರಿಸಿದರು.

ಜೈವಿಕ ತಂತ್ರಜ್ಞಾನದ ಬೆಳವಣಿಗೆಯು ಕೃಷಿ ಹಾಗೂ ಆರೋಗ್ಯ ಸೇವೆಗಳಲ್ಲಿ ಹೆಚ್ಚಿನ ಬದಲಾವಣೆಗಳನ್ನು ಉಂಟು ಮಾಡಲಿದೆ. ಇದನ್ನು ಬಳಸಿಕೊಂಡು ಆಹಾರೋತ್ಪನ್ನಗಳ ಮೌಲ್ಯವರ್ಧನೆ, ಸಂಸ್ಕರಣೆ ಮತ್ತಿತರ ವಿಧಾನಗಳ ಮೂಲಕ ವ್ಯವಸಾಯ ಕ್ಷೇತ್ರ ಅವಲಂಬಿಸಿರುವವರಿಗೆ ಬಲ ತುಂಬುವ ಅಗತ್ಯವಿದೆ. ಹಾಗೆಯೇ ವೈದ್ಯಕೀಯ ತಂತ್ರಜ್ಞಾನ ಬಳಸಿಕೊಂಡು ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಬೇಕಾಗಿದೆ ಎಂದರು.

ಇದೇ ವೇಳೆ ಅವರು ಶಿಕ್ಷಣ ಕ್ಷೇತ್ರದ ಮಹತ್ವದ ಬಗ್ಗೆ ಹೇಳಿದರು. ಶಿಕ್ಷಣದಿಂದ ಮಾತ್ರ ಸುಸ್ಥಿರ ಬೆಳವಣಿಗೆ ಸಾಧ್ಯ. ಪೌಷ್ಟಿಕತೆ, ಪರಿಸರ, ನೈರ್ಮಲ್ಯ ಸೇರಿದಂತೆ ಯಾವುದೇ ವಿಷಯದ ಬಗ್ಗೆ ಶಿಕ್ಷಣದ ಹಂತದಿಂದಲೇ ಅರಿವು ಮೂಡಿಸಬೇಕು. ಹಾಗೆಯೇ, ಉದ್ಯಮಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ಶಿಕ್ಷಣದ ಹಂತದಲ್ಲೇ ಸಜ್ಜು ಮಾಡಬೇಕು. ಇದಕ್ಕಾಗಿ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯಮದ ನಡುವೆ ಹೆಚ್ಚಿನ ಸಹಭಾಗಿತ್ವ ಬೆಳೆಯಲೇಬೇಕು. ಈಗ ನಮ್ಮದು ಉದ್ಯಮ ಆಧಾರಿತ ಆರ್ಥಿಕತೆಯಾಗಿದೆ. ಮುಂಬರುವ ದಿನಗಳಲ್ಲಿ ಇದು ಸಾಂಸ್ಥಿಕ ಆಧಾರಿತ ಆರ್ಥಿಕತೆಯಾಗಿ ಬದಲಾಗಬೇಕಿದೆ ಎಂದು ತಿಳಿಸಿದರು.

ಮೇಳದ ಬಗ್ಗೆ ಮುಂಚೂಣಿ ಉದ್ಯಮಿಗಳ ನಿರೀಕ್ಷೆಗಳೇನು?
ಮೂರು ದಿನಗಳ ಕಾಲ ನಡೆಯಲಿರುವ “ಬೆಂಗಳೂರು ತಂತ್ರಜ್ಞಾನ ಮೇಳ-2020”ದಲ್ಲಿ ಯಾವ ವಿಷಯಗಳ ಕುರಿತು ಹೆಚ್ಚಿನ ಚರ್ಚೆ ನಡೆಯಬಹದು ಎಂಬುದರ ಬಗ್ಗೆ ಹೆಸರಾಂತ ಮೂವರು ಉದ್ಯಮಿಗಳು ಹಂಚಿಕೊಂಡ ಅಭಿಪ್ರಾಯಗಳು ಹೀಗಿವೆ:

ಕ್ರಿಸ್ ಗೋಪಾಲಕೃಷ್ಣ ಸಹ-ಸಂಸ್ಥಾಪಕ, ಇನ್ಫೋಸಿಸ್ ಛೇರ್ ಮ್ಯಾನ್, ಮಾಹಿತಿ ತಂತ್ರಜ್ಞಾನ ದೂರದರ್ಶಿತ್ವ ತಂಡ
• ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ತಂತ್ರಜ್ಞಾನ ಬಳಸಿ ದೂರದಲ್ಲಿದ್ದುಕೊಂಡೇ ಹೇಗೆ ಕೆಲಸ ಮಾಡಬಹುದು ಎಂಬುದನ್ನು ಭಾರತವು ಇಡೀ ಜಗತ್ತಿಗೇ ತೋರಿಸಿದೆ. ಹೀಗಾಗಿ ಭವಿಷ್ಯದಲ್ಲಿ ಯಾವೆಲ್ಲಾ ಕೆಲಸಗಳನ್ನು ದೂರದಲ್ಲಿದ್ದುಕೊಂಡೇ ಕೆಲಸ ಮಾಡಬಹುದು ಎಂಬುದು ಮುಖ್ಯವಾಗಿ ಚರ್ಚೆಯಾಗಬಹುದು. ಅಂದರೆ, ಇದು ಶ್ರೇಣಿ 2 ಮತ್ತು ಶ್ರೇಣಿ 3 ಗೆ ಸೇರಿದ ಪ್ರದೇಶಗಳಲ್ಲಿ ಮಾಹಿತಿ ತಂತಜ್ಞಾನ ಉದ್ಯಮದ ಬೆಳವಣಿಗೆ ಕುರಿತೇ ಆಗಿರುತ್ತದೆ.

* ಮೈಸೂರು, ಮಂಗಳೂರು, ಧಾರವಾಡ-ಹುಬ್ಬಳ್ಳಿಯಂತಹ ನಗರಗಳಿಗೆ ಮಾಹಿತಿ ತಂತ್ರಜ್ಞಾನ ಉದ್ಯಮ ಈಗಾಗಲೇ ಇದೆ. ಇದು ಇನ್ನಷ್ಟು ವಿಸ್ತರಣೆಗೊಳ್ಳಬಹುದೇ ಎಂಬ ನೆಲೆಯಲ್ಲಿ ಹೆಚ್ಚಿನ ಚರ್ಚೆಯಾಗಬಹುದು.

* ಈಗ ದತ್ತಾಂಶ ಎರಡು ವರ್ಷಗಳಿಗೊಮ್ಮೆ ದುಪ್ಪಟ್ಟಾಗುತ್ತಿದ್ದು ಬೃಹತ್ತಾಗಿ ಬೆಳೆಯುತ್ತಿದೆ. ಇದನ್ನು ಆರ್ಥಿಕ ಲಾಭವಾಗಿ ಪರಿವರ್ತಿಸಿಕೊಳ್ಳುವುದು ಹೇಗೆ? ಇದಕ್ಕೆ ಬೇಕಾದ ನಿಯಂತ್ರಣ ಕ್ರಮಗಳೇನು? ಖಾಸಗಿತನದ ರಕ್ಷಣೆ- ಸುರಕ್ಷತೆ ಖಾತ್ರಿ ಪಡಿಸುವುದು ಹೇಗೆ?- ಇವುಗಳ ಬಗ್ಗೆ ಹೆಚ್ಚಿನ ಚಿಂತನ-ಮಂಥನ ನಡೆಯುವ ಸಾಧ್ಯತೆ ಇದೆ.

*“ಆತ್ಮನಿರ್ಭರ ಭಾರತ”ಕ್ಕೆ ಪೂರಕವಾಗಿ ನಮ್ಮದೇ ಉತ್ಪನ್ನಗಳನ್ನು ರೂಪಿಸಲು ಹೇಗೆ ಮುಂದುವರಿಯಬೇಕು? ಇದಕ್ಕಾಗಿ ವಿವಿಧ ಉದ್ಯಮಗಳ ಸಂಯೋಜನೆಯ ಮಹತ್ವ ಎಷ್ಟು?- ಈ ಕುರಿತು ಚರ್ಚೆಗಳಲ್ಲಿ ಒತ್ತು ಕಂಡುಬರಬಹುದು.

* ಬಾಹ್ಯಾಕಾಶ, ರಕ್ಷಣೆ, ವಿದ್ಯುತ್, ಆರೋಗ್ಯಸೇವೆ ಉದ್ಯಮಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿವೆ. ಹೀಗಾಗಿ ಇವುಗಳ ಬಗ್ಗೆ ಸಹಜವಾಗಿಯೇ ಹೆಚ್ಚಿನ ಚರ್ಚೆ ನಡೆಯಲಿದೆ.

ಕಿರಣ್ ಮಜುಂದಾರ್ ಷಾ ಕಾರ್ಯನಿರ್ವಾಹಕ ಅಧ್ಯಕ್ಷರು, ಬಯೋಕಾನ್ ಲಿಮಿಟೆಡ್ ಅಧ್ಯಕ್ಷರು, ಜೈವಿಕ ತಂತ್ರಜ್ಞಾನ ದೂರದರ್ಶಿತ್ವ ತಂಡ
* ಜೈವಿಕ ವಿಜ್ಞಾನಗಳ ದತ್ತಾಂಶ, ಕೃಷಿ ಜೈವಿಕ ತಾಂತ್ರಿಕತೆ, ಟೆಲಿ ಹೆಲ್ತ್, ಟೆಲಿ ಮೆಡಿಸಿನ್, ಲಸಿಕೆಗಳು, ಔಷಧ ಉತ್ಪಾದನೆ. ಬಿಗ್ ಡ್ಯಾಟಾ ಅನಲಿಟಿಕ್ಸ್, ಕೋವಿಡ್-19 ದಿಂದಾಗಿ ಸೃಷ್ಟಿಯಾಗಿರುವ “ನ್ಯೂ ನಾರ್ಮಲ್”, ಭವಿಷ್ಯದಲ್ಲಿ ಹೆಬ್ರಿಡ್ ಗೋಷ್ಠಿಗಳ ಪ್ರಾಮುಖ್ಯ ಇವುಗಳ ಬಗ್ಗೆ ಆಲೋಚಿಸುವ ಅಗತ್ಯವಿದೆ.

ಪ್ರಶಾಂತ್ ಪ್ರಕಾಶ್  ಪಾಲುದಾರರು, ಆಕ್ಸೆಲ್ ಪಾರ್ಟ್ನರ್ಸ್ ಛೇರ್ ಮ್ಯಾನ್, ,ಕರ್ನಾಟಕ ನವೋದ್ಯಮ ದೂರದರ್ಶಿತ್ವ ತಂಡ
•ಡಿಜಿಟಲ್ ಆರ್ಥಿಕತೆಯನ್ನು ಇನ್ನಷ್ಟು ತ್ವರಿತಗೊಳಿಸುವ ಬಗ್ಗೆ ಆಲೋಚಿಸಬೇಕಾಗಿದೆ.
• ಆರೋಗ್ಯಸೇವೆ, ಶಿಕ್ಷಣ, ಸಂಚಾರ, ಕೃಷಿ ತಾಂತ್ರಿಕತೆಯಲ್ಲಿ ಉಂಟಾಗಲಿರುವ ಹೊಸ ವಿಧಾನಗಳ ಕುರಿತು ಕೂಡ ಹೆಚ್ಚಿನ ಸಮಾಲೋಚನೆ ನಡೆಯಬಹುದು.
• ಭಾರತದಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಜೊತೆಗೆ ಬೇರೆ ದೇಶಗಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಾವೇನು ಕೊಡುಗೆ ನೀಡಬಹುದು ಎಂಬುದು ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶ.