ಮೊಬೈಲ್ ಫೋನ್ ಬಳಕೆದಾರರ ಆದ್ಯತೆ ಕಾಲಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ.  20 ವರ್ಷಗಳ ಹಿಂದೆ ಕೈಗೆ ಬಂದ ಮೊಬೈಲ್ ಹೇಗಿತ್ತು? ಎಂಬುವುದನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಬಳಿಕ ಅದು ತೆಳ್ಳಗಾಗುತ್ತಾ ಹೋಯ್ತು, ಮತ್ತೆ ದಪ್ಪವಾಯಿತು, ಫೋಲ್ಡ್ ಮಾಡೋದು, ಸ್ಲೈಡ್ ಮಾಡೋದು.. ಹೀಗೆ ಬೇರೆ ಬೇರೆ ರೂಪಗಳಲ್ಲಿ ಫೋನ್‌ಗಳು ಬಂದು ಹೋದುವು.

ಬಟನ್‌ಗಳು ಹೋಗಿ ಟಚ್ ಸ್ಕ್ರೀನ್ ಬಂತು, ಒಂದು ಕಾಲದಲ್ಲಿ ಮೊಬೈಲ್ ಕ್ಯಾಮೆರಾ ಊಹಿಸುವುದು ಕಷ್ಟವಾಗಿತ್ತು, ಈಗ ಐದೈದು ಕ್ಯಾಮೆರಾಗಳಿವೆ! ಈಗಿನ ಸ್ಮಾರ್ಟ್‌ಫೋನುಗಳಲ್ಲಿ ಏನಿದೆ? ಏನಿಲ್ಲ? ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಫೋನ್ ಗಾತ್ರ ಕಿಸೆಯಲ್ಲಿ ಇಡುವಷ್ಟು ಸಣ್ಣದಿರಬೇಕು, ಅಥವಾ ಕೈಯಲ್ಲಿ ಸುಲಭವಾಗಿ ಹಿಡಿಯುವಂತಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದ್ರೆ ವಿಡಿಯೋ ವಿಚಾರ ಬಂದ್ರೆ, ಫೋನ್ ಪರದೆ ಟ್ಯಾಬ್‌ನಷ್ಟು ದೊಡ್ಡದಿರಬೇಕು, ಎಂದು ಎಲ್ಲರ ಆಸೆ. ಈಗ ತಂತ್ರಜ್ಞಾನ ಅದಕ್ಕೂ ಪರಿಹಾರ ನೀಡಿದೆ. ಟಚ್ ಸ್ಕ್ರೀನ್ ಫೋನಿನಲ್ಲಿ ಫೋಲ್ಡೇಬಲ್ [ಮಡಚುವ] ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿ ನಡೆಸಿವೆ.

ಇದನ್ನೂ ಓದಿ: ನಂಬ್ತೀರೋ ಇಲ್ವೋ ಸಾರ್... 2019ರಲ್ಲಿ ಮಡಚಿ ಕಿಸೆಗಿಡುವ ಫೋನ್‌ಗಳದ್ದೇ ಕಾರುಬಾರ್!

ಮೊಬೈಲ್ ದಿಗ್ಗಜ ಸ್ಯಾಮ್ಸಂಗ್ ಇದರಲ್ಲೂ ಮುಂದಡಿಯಿಟ್ಟಿದೆ. ನೋಡಲು ಐದು ಇಂಚಿನ ಸಾಮಾನ್ಯ ಫೋನುಗಳಂತೆಯೆ ಕಾಣಿಸುವ,  ಮೊಬೈಲನ್ನು ಕೈಯಲ್ಲಿ ಹಿಡಿದು ಮಧ್ಯದಲ್ಲಿ ತೆರೆದರೆ ಟ್ಯಾಬ್‌ನಂತೆ ಬದಲಾಗುವ ಫೋನ್‌ಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಕಾಲಿಡಲಿವೆ. 

Samsung ಮೊಬೈಲ್‌ ಮುಖ್ಯಸ್ಥ ಡಿ.ಜೆ. ಕುಓ, ಭಾರತದಲ್ಲಿ ಈ ಮೊಬೈಲ್ ಬಿಡುಗಡೆ ಬಗ್ಗೆ ಸುಳಿವು ನೀಡಿದ್ದಾರೆ. ಆದ್ರೆ ‘ಯಾವಾಗ’ ಎಂಬುವುದನ್ನು ಅವರು ತಿಳಿಸಿಲ್ಲ. 5G ಫೋನ್ ಬಿಡುಗಡೆ ಮಾಡೋ ಸಮಯದಲ್ಲಿ ಈ ಫೋನನ್ನೂ ಮಾರುಕಟ್ಟೆಗೆ ಬಿಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Samsung Galaxy Fold ವಿಶೇಷತೆ:

ಈ ಫೋನಿನ ಸೈಜು ಮೊದಲು 4.6 ಇಂಚು ಇರುತ್ತದೆ. ಅದೇ ಫೋನನ್ನು ತೆರೆದರೆ 7.3 ಇಂಚಿನಷ್ಟು ಡಿಸ್‌ಪ್ಲೇ ಕಾಣಿಸುತ್ತದೆ. ಒಂದು ಟ್ಯಾಬ್‌ನಷ್ಟು. ಅಥವಾ ಅದಕ್ಕಿಂತ ದೊಡ್ಡದು. ನೀವು ಫೋನ್‌ ಬಂದರೆ ತೆರೆಯಬೇಕಿಲ್ಲ. ಹಾಗೆಯೇ ರಿಸೀವ್‌ ಮಾಡಿ ಮಾತನಾಡಬಹುದು. ಆದರೆ ಇಂಟರ್‌ನೆಟ್‌ ಬಳಸುವಾಗ ಈ ಫೋನನ್ನು ತೆರೆದರೆ ಕೆಲಸವಿನ್ನೂ ಸುಲಭ.

ಇಂಟರೆಸ್ಟಿಂಗ್‌ ಅಂದ್ರೆ ಮೂರು ಪೇಜನ್ನು ಒಮ್ಮೆಲೇ ತೆರೆಯಬಹುದು. ಉದಾಹರಣೆಗೆ Youtubeನಲ್ಲಿ ಏನೋ ವಿಡಿಯೋ ನೋಡುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಈ ವಿಡಿಯೋ ಕುರಿತ ಮಾಹಿತಿಯನ್ನು Googleನಲ್ಲಿ ಬ್ರೌಸ್‌ ಮಾಡಬಹುದು. ಅದೇ ವೇಳೆಯಲ್ಲಿ ವಾಟ್ಸಪ್‌ ಓಪನ್‌ ಮಾಡಿ ಚಾಟ್‌ ಕೂಡ ಮಾಡಬಹುದು. ಈ ಮೂರೂ ಆ್ಯಪ್‌ಗಳೂ ತೆರೆದಿರುತ್ತವೆ. ಮಿನಿಮೈಸ್‌ ಮಾಡುವ ಅವಶ್ಯಕತೆಯೇ ಇಲ್ಲ.

ಇನ್‌ಫಿನಿಟಿ ಫ್ಲೆಕ್ಸ್‌ ಡಿಸ್‌ಪ್ಲೇ ಹೊಂದಿರುವ ಮೊಬೈಲ್‌ ಇದು. ಮಡಚುವ ಮೊಬೈಲ್‌ ಆಗಿದ್ದರೂ ಮಧ್ಯದಲ್ಲಿ ಒಂದು ಸಣ್ಣ ಗೆರೆ ಇರುವಂತೆಯೂ ಕಾಣಿಸುವುದಿಲ್ಲ. ಎರಡು ಬ್ಯಾಟರಿ ಇದೆ. 4380 mAh ಸಾಮರ್ಥ್ಯದ್ದು. ಇನ್ನು ಆರು ಕ್ಯಾಮೆರಾಗಳಿವೆ. ಮೂರು ಹಿಂದೆ, ಎರಡು ಪಕ್ಕದಲ್ಲಿ, ಒಂದು ಮುಂದೆ. ಹೀಗೆಲ್ಲಾ ಸಾಮರ್ಥ್ಯ ಇರುವ ಈ ಮೊಬೈಲ್‌ ಬಳಸುವುದೇ ಹಬ್ಬ. ಅದಕ್ಕೆ ತಕ್ಕಂತೆ ಇದರ ಬೆಲೆಯೂ ಇದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಯಾರಿಸುವುದರಿಂದ ಇದರ ಬೆಲೆಯೂ ಅಷ್ಟೇ ದುಬಾರಿಯಾಗಿರಲಿದೆ. ಒಂದು ಅಂದಾಜಿನ ಪ್ರಕಾರ 1.4 ಲಕ್ಷ ರೂ. ಬೆಳೆಬಾಳಬಹುದು!