ಬೆರ್ಲಿನ್‌[ಮಾ.14]: ದಿನನಿತ್ಯ ಜೀವನದ ಭಾಗವೇ ಆಗಿ ಹೋಗಿರುವ ಫೇಸ್ಬುಕ್‌ ಬಳಕೆಯ ನಿಯಂತ್ರಣದಿಂದ ಆರೋಗ್ಯಕರ ಜೀವನ ಶೈಲಿ ಸಾಧ್ಯ ಎಂದು ಸಂಶೋಧನೆಯೊಂದು ಹೇಳಿದೆ. ಫೇಸ್ಬುಕ್‌ ಬಳಕೆ ಕಡಿಮೆ ಮಾಡುವುದರಿಂದ ಧೂಮಪಾನ ಕಡಿಮೆಯಾಗುತ್ತದೆ, ಉತ್ತಮ ದೈಹಿಕ ಆರೋಗ್ಯ ಪ್ರಾಪ್ತಿಯಾಗುತ್ತದೆ ಹಾಗೂ ಖಿನ್ನತೆ ಪ್ರಮಾಣ ಕಡಿಮೆಯಾಗುತ್ತದೆ ಎಂದು ಜರ್ನಲ್‌ ಕಂಪ್ಯೂಟರ್ಸ್‌ ಇನ್‌ ಹ್ಯೂಮನ್‌ ಬಿಹೇಏವಿಯರ್‌ ಸಂಶೋಧನೆಯ ವರದಿಯಲ್ಲಿ ಹೇಳಲಾಗಿದೆ.

ಎಂದಿನಂತೆ ಫೇಸ್ಬುಕ್‌ ಬಳಕೆ ಮಾಡುವ 146 ಮಂದಿ ಹಾಗೂ ಫೇಸ್ಬುಕ್‌ ಬಳಕೆ ಕಡಿಮೆ ಮಾಡಿರುವ 140 ಮಂದಿಯನ್ನು ಪ್ರಶ್ನಿಸಿ ಈ ವರದಿ ತಯಾರಿಸಲಾಗಿದೆ. ಇದರಲ್ಲಿ ಫೇಸ್ಬುಕ್‌ ಬಳಕೆ ಕಡಿಮೆ ಮಾಡಿದವರು, ತಮ್ಮನ್ನು ಇತರರೊಂದಿಗೆ ಹೋಲಿಕೆ ಮಾಡಲು ಪ್ರಾರಂಭಿಸಿದ್ದಾರೆ. ಇದರಿಂದ ಅಸೂಯೆ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಿದೆ. ಅಲ್ಲದೇ ಫೇಸ್ಬುಕ್‌ ಬಳಕೆಯ ಸಮಯವನ್ನು ಕಡಿಮೆಗೊಳಿಸಿದರು, ಮೊದಲಿಗಿಂತ ಕಡಿಮೆ ಸಿಗರೇಟು ಸೇದಿದ್ದಾರೆ.

ದೈಹಿಕವಾಗಿ ಹೆಚ್ಚು ಸಕ್ರಿಯರಾಗಿದ್ದಾರೆ ಮತ್ತು ಕಡಿಮೆ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಸಂಶೋಧನೆ ಹೇಳಿದೆ. ಒಟ್ಟು ಮೂರು ತಿಂಗಳ ಕಾಲ ಸಂಶೋಧನೆ ನಡೆಸಿ, ಈ ಫಲಿತಾಂಶ ಪ್ರಕಟಿಸಲಾಗಿದೆ.

ಹಾಗಾಗಿ ಆರೋಗ್ಯ ಹೆಚ್ಚಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಹೊಂದಲು ಪ್ರತಿದಿನ ಫೇಸ್‌ಬುಕ್‌ನಲ್ಲಿ ಕಳೆಯುವ ಸಮಯವನ್ನು ಕಡಿಮೆ ಮಾಡಿ ಎಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ.