ಮಾರುಕಟ್ಟೆಗೆ ಬರಲಿದೆ 48 MP, 4 ಕ್ಯಾಮೆರಾ ಸೆಟಪ್ ಇರುವ ಅಗ್ಗದ Realme ಮೊಬೈಲ್!
ಮೊಬೈಲ್ ಕಂಪನಿಗಳು ಹೆಚ್ಚಾದಂತೆ ಮಾರುಕಟ್ಟೆಯಲ್ಲಿ ಪೈಪೋಟಿಯೂ ಹೆಚ್ಚಾಗಿದೆ. ನವನವೀನ ಫೀಚರ್‌ಗಳು, ಆಧುನಿಕ ತಂತ್ರಜ್ಞಾನ ಬಳಸುವ ಜೊತೆಗೆ, ದರವೂ ಕೂಡಾ ಕೈಗೆಟಕುವಂತಿರುತ್ತವೆ. Realme ಕಂಪನಿಯು 2 ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಇಲ್ಲಿದೆ ಹೆಚ್ಚಿನ ವಿವರ...
ಬೆಂಗಳೂರು (ಆ.16): ಅಷಾಡ ಮುಗಿಯುತ್ತಿದ್ದಂತೆ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಹೊಸ ಮೊಬೈಲ್ ಫೋನ್‌ಗಳು ರಿಂಗಣಿಸಲು ಆರಂಭಿಸಿವೆ. ಮತ್ತೆರಡು ಮೊಬೈಲ್ ಫೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಬಿಡಲು ಚೀನಾದ ಮೊಬೈಲ್ ದೈತ್ಯ Realmeಯು ಸಿದ್ಧತೆ ನಡೆಸಿದೆ.
Realme 5 ಮತ್ತು Realme 5 Pro ಎಂಬ ಎರಡು ಹೊಸ ಮಾಡೆಲ್ಗಳು ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ಆಗಸ್ಟ್ 20ರಂದು ಅನಾವರಣಗೊಳ್ಳಲಿವೆ.
ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾ ಹೊಂದಿರುವ ಈ ಫೋನ್, ಸಹಜವಾಗಿ ಮೊಬೈಲ್ ಹಾಗೂ ಸೆಲ್ಫೀ ಪ್ರಿಯರಲ್ಲಿ ಕುತೂಹಲ ಹುಟ್ಟಿಸಿದೆ. ಜೊತೆಗೆ, 5000 mAh ಬ್ಯಾಟರಿ ಕೂಡಾ ಇದೆ ಎಂದು ಕಂಪನಿಯು ಟೀಸರ್ ಮೂಲಕ ಬಹಿರಂಗಪಡಿಸಿದ್ದು, ಇನ್ನಷ್ಟು ಕೌತುಕಕ್ಕೆ ಕಾರಣವಾಗಿದೆ.
ಆದರೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇದೆಯೋ ಇಲ್ಲವೋ ಅದಿನ್ನೂ ಖಚಿತವಾಗಿಲ್ಲ. ಕಂಪನಿಯು ಹೆಚ್ಚು ಮಾಹಿತಿಯನ್ನು ಬಹಿರಂಗ ಪಡಿಸಿಲ್ಲವಾದರೂ, ಸೋರಿಕೆಯಾಗಿರುವ ಅಲ್ಪ ಸ್ವಲ್ಪ ಮಾಹಿತಿಗಳ ಆಧಾರದಲ್ಲಿ ಕೆಲವು ವಿಷಯಗಳನ್ನು ಇಲ್ಲಿ ನೀಡಲಾಗಿದೆ. ಬಿಡುಗಡೆಯಾದ ಬಳಿಕ ಫೋನ್‌ನ ಫೀಚರ್- ಬೆಲೆ ಎಲ್ಲವೂ ಸ್ಪಷ್ಟವಾಗಲಿದೆ.
ಇದನ್ನೂ ಓದಿ | ಸ್ವತಂತ್ರ ಭಾರತದ 20 ಅತೀ ದೊಡ್ಡ ತಂತ್ರಜ್ಞಾನ ಸಾಧನೆಗಳು!
Realme 5 ಫೀಚರ್ಸ್:
HD ಡಿಸ್ಪ್ಲೇ, ವಾಟರ್‌ಡ್ರಾಪ್ ಶೈಲಿಯ ನಾಚ್, ಸ್ನ್ಯಾಪ್‌ಡ್ರಾಗನ್ 600 ಸೀರಿಸ್ ಚಿಪ್‌ಸೆಟ್ ಇರಲಿದೆ ಎಂದು ಹೇಳಲಾಗುತ್ತಿದೆ. ನಾಲ್ಕು ಕ್ಯಾಮೆರಾ ಸೆಟಪ್ ಈ ಹೊಸ ಫೋನ್ ಹೊಂದಿದೆ. ಹೊಸ ಫೋನ್ 64 ಮೆಗಾ ಪಿಕ್ಸೆಲ್ ಕ್ಯಾಮೆರಾ ಒಳಗೊಂಡಿರಲಿದೆ ಎಂದು ಈ ಹಿಂದೆ ಹೇಳಲಾಗುತ್ತಿದ್ದರೂ, ಅದರ ಯಾವುದೇ ಸುಳಿವೂ ಇಲ್ಲ, ಲಕ್ಷಣಗಳು ಕಾಣಿಸುತ್ತಿಲ್ಲ. ಕ್ಯಾಮೆರಾ ಸಾಮರ್ಥ್ಯದ ಬಗ್ಗೆ ಕಂಪನಿಯು ಯಾವುದೇ ಗುಟ್ಟು ಬಿಟ್ಟು ಕೊಟ್ಟಿಲ್ಲ. ಪ್ರೈಮರಿ ಲೆನ್ಸ್ ಹೊರತು ಪಡಿಸಿ, ಮಂದ ಬೆಳಕಿನಲ್ಲೂ ಫೋಟೋ ಕ್ಲಿಕ್ಕಿಸಲು ವಿಶೇಷ ಲೆನ್ಸ್ , ಅಲ್ಟ್ರಾ- ವೈಡ್ ಲೆನ್ಸ್, ಸೂಪರ್ ಮ್ಯಾಕ್ರೋ ಲೆನ್ಸ್ ಮತ್ತು ಡೆಪ್ತ್ ಸೆನ್ಸರ್ ಲೆನ್ಸ್‌ಗಳನ್ನು ಈ ಫೋನ್ ಹೊಂದಿದೆ.
Realme 5 Pro ಹೇಗಿರಲಿದೆ?
ಸೋರಿಕೆಯಾಗಿರುವ ಮಾಹಿತಿ ಪ್ರಕಾರ Realme 5 Pro ಫೋನ್ AMOLED ಡಿಸ್ಪ್ಲೇ ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಹೊಂದಿರಲಿದೆ. ಇದರಲ್ಲೂ ನಾಲ್ಕು ಕ್ಯಾಮೆರಾ ಸೆಟಪ್ ಇರಲಿದ್ದು, 48 ಮೆಗಾಪಿಕ್ಸೆಲ್ ಸಾಮರ್ಥ್ಯ ಪ್ರೈಮರಿ ಕ್ಯಾಮೆರಾ ಹೊಂದಿದೆ. 10nm Qualcomm Snapdragon 712 ಚಿಪ್‌ಸೆಟ್ ಇದರ ಇನ್ನೊಂದು ವಿಶೇಷತೆ.
ಅಂದ ಹಾಗೇ, ಈ ಫೋನ್‌ಗಳು ಪ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ಲಭ್ಯವಿರಲಿವೆ. Realme 3 ರೀತಿಯಲ್ಲೇ, ಭಾರತದಲ್ಲಿ ಈ ಫೋನ್ ಬೆಲೆಯೂ ಕೂಡಾ 8999 ರೂಪಾಯಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.