ಭಾರತೀಯರ ಮಾಹಿತಿ ಕದಿಯಲು ಪಾಕ್‌ನಿಂದ ನಕಲಿ ಆರೋಗ್ಯ ಸೇತು!
ಭಾರತೀಯರ ಮಾಹಿತಿ ಕದಿಯಲು ಪಾಕ್‌ನಿಂದ ನಕಲಿ ಆರೋಗ್ಯ ಸೇತು!| ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಕಣ್ಣು
ನವದೆಹಲಿ(ಜೂ.10): ದೇಶದಲ್ಲಿ ಕೊರೋನಾ ಸೋಂಕಿತರ ಪತ್ತೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿ ಭಾರೀ ಜನಪ್ರಿಯತೆ ಪಡೆದಿರುವ ಆರೋಗ್ಯ ಸೇತು ಆ್ಯಪ್ ಮೇಲೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಕಣ್ಣು ಬಿದ್ದಿದೆ. ಅದು ಅಸಲಿ ಹೋಲುವ ನಕಲಿ ಆ್ಯಪ್ ತಯಾರಿಸಿದ್ದು, ಅದರ ಮೂಲಕ ಗೌಪ್ಯ ಮಾಹಿತಿ ಕದಿಯುವ ಸಂಚು ರೂಪಿಸಿದೆ.
ಸೋಂಕಿತ ಪಕ್ಕಕ್ಕೆ ಬಂದರೆ ಅಲರ್ಟ್ ಮಾಡುತ್ತೆ ಈ ಆ್ಯಪ್!
ಆರೋಗ್ಯ ಸೇತು ಹೆಸರಿನಲ್ಲೇ ಅಸಲಿ ಆ್ಯಪ್ ಅನ್ನೇ ಹೋಲುವ ನಕಲಿ ಆ್ಯಪ್ ತಯಾರಿದ್ದು, ಅದರ ಲಿಂಕ್‌ಗಳನ್ನು ಹರಿ ಬಿಟ್ಟು ಆ್ಯಪ್ ಡೌನ್ ಮಾಡಿಕೊಳ್ಳುವಂತೆ ಮಾಡಲಾಗುತ್ತಿದೆ. ಆ ಮೂಲಕ ಬಳಕೆದಾರರ ವೈಯಕ್ತಿಕ ಮಾಹಿತಿಗೆ ಕನ್ನ ಹಾಕಲಾಗುತ್ತಿದೆ. ಅಧಿಕಾರಿಗಳು ಹಾಗೂ ರಕ್ಷಣಾ ಸಿಬ್ಬಂದಿಗಳಿಗೆ ಲಿಂಕ್ ಕಳುಹಿಸಿ, ಆ ಮೂಲಕ ಗೌಪ್ಯ ಭದ್ರತಾ ಮಾಹಿತಿಹಳನ್ನು ಕದಿಯಲು ಪಾಕಿಸ್ತಾನ ಹವಣಿಸುತ್ತಿದೆ. ಸರ್ಕಾರಿ ಹಾಗೂ ರಕ್ಷಣಾ ಸಿಬ್ಬಂದಿಗಳಿಗೆ ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯವಾಗಿದ್ದು, ಹಾಗಾಗಿ ಐಎಸ್‌ಐ ಈ ಕುತಂತ್ರದ ಮೊರೆ ಹೋಗಿದೆ ಎಂದು ಮುಂಬೈ ಸೈಬರ್ ಅಪರಾಧ ವಿಭಾಗದ ಪೊಲೀಸರು ಹೇಳಿದ್ದಾರೆ.
ಏಪ್ರಿಲ್‌ನಲ್ಲಿ ಬಿಡುಗಡೆಯಾದ ಅಸಲಿ ಆರೋಗ್ಯ ಸೇತು ಆ್ಯಪ್ ಭಾರೀ ಜನಪ್ರಿಯವಾಗಿದ್ದು, ಈಗಾಗಲೇ 10 ಕೋಟಿ ಮಂದಿ ಬಳಕೆದಾರರಿದ್ದಾರೆ.