ಇಸ್ಲಾಮಾಬಾದ್‌[ಆ.30]: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ಭಾರತ ರದ್ದುಗೊಳಿಸಿದ್ದರಿಂದ ಯುದ್ಧದ ಮಾತುಗಳನ್ನು ಆಡುತ್ತಿರುವ ಪಾಕಿಸ್ತಾನ ಇದೀಗ 290 ಕಿ.ಮೀ. ದೂರದಲ್ಲಿರುವ ಶತ್ರುಗಳ ಮೇಲೂ ದಾಳಿ ನಡೆಸಬಲ್ಲ, ಭೂಮಿಯಿಂದ ಭೂಮಿಗೆ ಹಾರುವ ‘ಘಜ್‌ನವಿ’ ಎಂಬ ಬ್ಯಾಲಿಸ್ಟಿಕ್‌ (ಗುರುತ್ವ ಬಲ ಆಧರಿಸಿ ಗುರಿ ತಲುಪುವ) ಅಣ್ವಸ್ತ್ರ ಕ್ಷಿಪಣಿಯನ್ನು ಗುರುವಾರ ಪರೀಕ್ಷೆಗೆ ಒಳಪಡಿಸಿದೆ.

ರಾತ್ರಿ ವೇಳೆ ಕ್ಷಿಪಣಿ ಪರೀಕ್ಷೆ ನಡೆದಿದ್ದು, ಇದರ ವಿಡಿಯೋವನ್ನು ಪಾಕಿಸ್ತಾನ ಸೇನೆಯ ಮಾಧ್ಯಮ ವಕ್ತಾರ ಮೇಜರ್‌ ಜನರಲ್‌ ಆಸಿಫ್‌ ಗಫäರ್‌ ಅವರು ಹಂಚಿಕೊಂಡಿದ್ದಾರೆ. ಕಾಶ್ಮೀರ ವಿಚಾರದ ಕುರಿತು ವಿಶ್ವದ ಗಮನಸೆಳೆಯಲು ಅಣ್ವಸ್ತ್ರ ಕ್ಷಿಪಣಿಯನ್ನು ಪಾಕಿಸ್ತಾನ ಪ್ರಯೋಗಿಸಿದೆ ಎಂದು ಹೇಳಲಾಗಿದೆ.

ಪಾಕಿಸ್ತಾನದ ಈ ಕ್ಷಿಪಣಿ ದೆಹಲಿ ಹಾಗೂ ಮುಂಬೈನಂತಹ ನಗರಗಳನ್ನು ತಲುಪುವ ಸಾಧ್ಯತೆ ಕಡಿಮೆ. ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದ ಬಳಿ ಇರುವ ಅಗ್ನಿ-5 ಕ್ಷಿಪಣಿ 5000 ಕಿ.ಮೀ. ದೂರದಲ್ಲಿರುವ ಗುರಿಯನ್ನೂ ತಲುಪುತ್ತದೆ.