ವಾಷಿಂಗ್ಟನ್(ಡಿ.05): ಸೂರ್ಯನ ಅಧ್ಯಯನದಲ್ಲಿ ನಿರತವಾಗಿರುವ ಪಾರ್ಕರ್ ಪ್ರೋಬ್, ಸೂರ್ಯನ ಕುರಿತು ಸಂಗ್ರಹಿಸಿದ ಮಹತ್ವದ ಮಾಹಿತಿಗಳನ್ನು ನಾಸಾ ಬಿಡುಗಡೆ ಮಾಡಿದೆ.

ಈ ಹಿಂದೆ ಸೂರ್ಯನಿಗೆ ಯಾವುದೇ ಮಾನವ ನಿರ್ಮಿತ ನೌಕೆ ತಲುಪಲಾರದಷ್ಟು ಹತ್ತಿರ ತಲುಪಿರುವ ಪಾರ್ಕರ್ ಪ್ರೋಬ್, ಅತ್ಯಂತ ಮಹತ್ವದ ಮಾಹಿತಿಗಳನ್ನು ರವಾನಿಸಿದೆ ಎಂದು ನಾಸಾ ಹೇಳಿದೆ.

ಸೌರ ಮಾರುತ ಹಾಗೂ ಕರೋನಾ ಎಂದು ಕರೆಯುವ ಸೂರ್ಯನ ಮಧ್ಯಭಾಗದ ಅಧ್ಯಯನ ನಡೆಸಿರುವ ಪಾರ್ಕರ್ ಪ್ರೋಬ್, ಅತ್ಯಂತ ಕುತೂಹಲಕಾರಿ ಮಾಹಿತಿಗಳನ್ನು ಸಂಗ್ರಹಿಸಿದೆ ಎನ್ನಲಾಗಿದೆ.

ಪಾರ್ಕರ್ ಪ್ರೋಬ್: ನಾಸಾದಿಂದ ಇಂದು ಮಹತ್ವದ ಸುದ್ದಿಗೋಷ್ಠಿ!

ಈ ಕುರಿತು ಮಾಹಿತಿ ನೀಡಿರುವ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿವಿಯ ಭೌತಶಾಸ್ತ್ರಜ್ಞ ಪ್ರೊಫೆಸರ್ ಸ್ಟುವರ್ಟ್ ಬೆಲ್, ಕರೋನಾದ ಕಾಂತೀಯ ರಚನೆಯನ್ನು ಪಾರ್ಕರ್ ಪ್ರೋಬ್ ಸ್ಪಷ್ಟವಾಗಿ ಗುರುತಿಸಿದೆ ಎಂದು ಹೇಳಿದ್ದಾರೆ.

ಸೌರ ಮಾರುತಗಳು ಸಣ್ಣ ಕರೋನಲ್ ರಂಧ್ರಗಳ ಮೂಲಕ ಹೊರಹಾಕಲ್ಪಡುತ್ತವೆ ಎಂಬುದು ಸಾಬೀತಾಗಿದ್ದು, ಸೂರ್ಯನ ಧೂಳಿನ ಪರಿಸರದ ಉಗ್ರ ಮನೋಭಾವ ನಮ್ಮನ್ನು ಆಶ್ಚರ್ಯಗೊಳಿಸುತ್ತವೆ ಎಂದು ಬೆಲ್ ತಿಳಿಸಿದ್ದಾರೆ.

ಮುಂದಿನ ಆರು ವರ್ಷಗಳಲ್ಲಿ ಪಾರ್ಕರ್ ಪ್ರೋಬ್ ನೌಕೆ ಸೂರ್ಯನ ಅಂಡಾಕಾರದ ಕಕ್ಷೆಯನ್ನು ಸುತ್ತಲಿದ್ದು, ತಾಂತ್ರಿಕವಾಗಿ ಸೂರ್ಯನನ್ನು ಸ್ಪರ್ಶಿಸಲಿದೆ ಎಂದು ಬೆಲ್ ಸ್ಪಷ್ಟಪಡಿಸಿದ್ದಾರೆ. 

ಆದರೆ ಇಷ್ಟು ಹತ್ತಿರದಿಂದ ಸೂರ್ಯನ ಅಧ್ಯಯನದ ಪರಿಣಾಮ ಸೂರ್ಯನ ಫೋಟೋ ಕ್ಲಿಕ್ಕಿಸಲು ನೌಕೆಗೆ ಸಾಧ್ಯವಾಗುವುದಿಲ್ಲ ಎಂದು ಬೆಲ್ ಹೇಳಿದ್ದಾರೆ. ಒಂದು ವೇಳೆ ನೌಕೆಯ ಕ್ಯಾಮರಾ ಸೂರ್ಯನತ್ತ ತಿರುಗಿದರೆ ಭಸ್ಮವಾಗುವ ಸಾಧ್ಯತೆ ಹೆಚ್ಚು ಎಂದು ಅಂದಾಜಿಸಲಾಗಿದೆ.

ಆದರೆ ಪಾರ್ಕರ್ ಪ್ರೋಬ್ ಕ್ಯಾಮರಾಗಳು ಸೌರ ಮಾರುತವನ್ನು ರೂಪಿಸುವ ಸೂಪರ್ ಸಾನಿಕ್ ಚಾರ್ಜ್ಡ್ ಕಣಗಳ ಹರಿವನ್ನು ಅಳೆಯುವುದು ನಿಶ್ಚಿತ ಎನ್ನಲಾಗಿದೆ.

ಎರಡು ಪ್ರಕಾರದ ಸೌರ ಮಾರುತಗಳನ್ನು ಗುರುತಿಸಲಾಗಿದ್ದು, ಒಂದು ಪ್ರತಿ ಸೆಕೆಂಡ್’ಗೆ 700 ಕಿ.ಮೀ ವೇಗದಲ್ಲಿ ಚಲಿಸುವ ಸೂರ್ಯನ ದ್ರುವ ಪ್ರದೇಶದ ದೈತ್ಯ ಕರೋನಲ್ ರಂಧ್ರಗಳ ಮೂಲಕ ಹೊರಬರುವ ಸೌರ ಮಾರುತ. ಎರಡನೇಯದ್ದು ಪ್ರತಿ ಸೆಕೆಂಡ್’ಗೆ 500 ಕಿ.ಮೀ ವೇಗದಲ್ಲಿ ಚಲಿಸುವ ಸೌರ ಮಾರುತ ಎಂದು ನಾಸಾ ತಿಳಿಸಿದೆ. 

ಪಾರ್ಕರ್ ಪ್ರೋಬ್ ಸೂರ್ಯನ ಸಮಭಾಜಕ ವೃತ್ತದ ಸುತ್ತಲೂ ಸುತ್ತುವರೆದಿರುವ ಸಣ್ಣ ಕರೋನಲ್ ರಂಧ್ರಗಳ ಮೂಲಕ ಈ ನಿಧಾನಗತಿಯ ಸೌರ ಮಾರುತವನ್ನು ಸ್ಪಷ್ಟವಾಗಿ ಗುರುತಿಸಿದೆ. ಈ ರಂಧ್ರಗಳ ಮೂಲಕವೇ ಕಾಂತಕ್ಷೇತ್ರಗಳು ಬಾಹ್ಯಾಕಾಶಕ್ಕೆ ಹೊರಹಾಕಲ್ಪಡುತ್ತವೆ.

ಸೂರ್ಯನ ಕರೋನಾ ಭಾಗ ಒಂದು ಮಿಲಿಯನ್ ಡಿಗ್ರಿ ಉಷ್ಣಾಂಶವನ್ನು ಹೊಂದಿದ್ದು, ಮೇಲ್ಮೈ ಭಾಗ ಮಾತ್ರ ಕಡಿಮೆ ತಾಪಮಾನ ಹೊಂದಿರುವುದು ಪಾರ್ಕರ್ ಪ್ರೋಬ್ ರವಾನಿಸಿರುವ ಮಾಹಿತಿಯಿಂದ ಸ್ಪಷ್ಟವಾಗಿದೆ.

ಪಾರ್ಕರ್ ಪ್ರೋಬ್ ಗುರುತಿಸಿರುವ ಆಶ್ಚರ್ಯಕರ ಸಂಗತಿ ಎಂದರೆ, ಸೂರ್ಯನ ಸುತ್ತಲೂ ಧೂಳಿನ ಪ್ರದೇಶ ನಿರ್ಮಾಣವಾಗಿದ್ದು, ಸೂರ್ಯನ ಹತ್ತಿರ ಬಂದು ಭಸ್ಮವಾಗಿರುವ ಕ್ಷುದ್ರಗ್ರಹ ಹಾಗೂ ಧೂಮಕೇತುಗಳ ಅವಶೇಷಗಳು ಎಂದು ನಾಸಾ ಸ್ಪಷ್ಟಪಡಿಸಿದೆ.

ಸೃಷ್ಟಿಯಾಯ್ತು ಇತಿಹಾಸ: ಸೂರ್ಯನ ಸಮೀಪ ಪಾರ್ಕರ್!

ಸದ್ಯ ಸೂರ್ಯನಿಂದ ಕೇವಲ 15 ಮಿಲಿಯನ್ ಮೈಲಿ(24 ಮಿಲಿಯನ್ ಕಿ.ಮೀ)ದೂರದಲ್ಲಿರುವ ಪಾರ್ಕರ್ ಪ್ರೋಬ್,  ಕೊನೆಯಲ್ಲಿ ಕೇವಲ 6 ಮಿಲಿಯನ್ ಕಿ.ಮೀ ದೂರದಿಂದ ಸೂರ್ಯನ ಅಧ್ಯಯನ ನಡೆಸಲಿದೆ.

1976ರಲ್ಲಿ ಹಾರಿ ಬಿಡಲಾಗಿದ್ದ ನಾಸಾದ ಹೆಲಿಯೋಸ್ 2 ನೌಕೆಗಿಂತ 7 ಪಟ್ಟು ಹೆಚ್ಚು ಹತ್ತಿರದಿಂದ ಪಾರ್ಕರ್ ಪ್ರೋಬ್ ಸೂರ್ಯನ ಅಧ್ಯಯನ ನಡೆಸುತ್ತಿರುವುದು ನಿಜಕ್ಕೂ ಮಾನವನ ಬುದ್ದಿಮತ್ತೆಗೆ ಸಾಕ್ಷಿಯಾಗಿದೆ.