ಸೃಷ್ಟಿಯಾಯ್ತು ಇತಿಹಾಸ: ಸೂರ್ಯನ ಸಮೀಪ ಪಾರ್ಕರ್!
ಇತಿಹಾಸ ಸೃಷ್ಟಿಸಿದ ನಾಸಾದ ಪಾರ್ಕರ್ ಪ್ರೋಬ್! ಸೂರ್ಯನ ಅತ್ಯಂತ ಸಮೀಪ ತಲುಪಿದ ನೌಕೆ ಎಂಬ ಹೆಗ್ಗಳಿಕೆ! ಬರೋಬ್ಬರಿ 42.73 ಮಿಲಿಯನ್ ಕಿ.ಮೀ ಪ್ರಯಾಣ! ಹೆಲಿಯೋಸ್-2 ನೌಕೆಯ ದಾಖಲೆ ಅಳಿಸಿ ಹಾಕಿದ ಪಾರ್ಕರ್ ಪ್ರೋಬ್
ವಾಷಿಂಗ್ಟನ್(ಅ.30): ಇದು ನಿಜಕ್ಕೂ ಮಾನವ ನಾಗರಿಕತೆ ಎದೆಯುಬ್ಬಿಸಿ ಸಂಭ್ರಮಿಸುವ ಕ್ಷಣ. ಲಕ್ಷಾಂತರ ವರ್ಷಗಳಿಂದ ಪೃಥ್ವಿಯ ಮೇಲೆ ಜೀವ ಸಂಕುಲ ಬಾಳಿ ಬದುಕಲು ಮೂಲಾಧಾರವಾಗಿರುವ ಸೂರ್ಯನ ಸಮೀಪ ಹೋಗುವಲ್ಲಿ ಮಾನವ ಕೊನೆಗೂ ಯಶಸ್ವಿಯಾಗಿದ್ದಾನೆ.
ಹೌದು, ಸೂರ್ಯನ ಅಧ್ಯಯನಕ್ಕಾಗಿ ಕಳುಹಿಸಲಾಗಿರುವ ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ನೌಕೆ, ಸೂರ್ಯನ ಅತ್ಯಂತ ಸಮೀಪಕ್ಕೆ ಹೋಗಿ ಇತಿಹಾಸ ನಿರ್ಮಿಸಿದೆ. ಇದುವರೆಗೂ ಮಾನವ ನಿರ್ಮಿತ ಯಾವುದೇ ನೌಕೆ ಸೌರಮಂಡಲದ ಕೇಂದ್ರವಾದ ಸೂರ್ಯನಿಗೆ ಇಷ್ಟೊಂದು ಸಮೀಪ ಹೋಗಿರಲಿಲ್ಲ.
We’re getting closer to “touching” the Sun! ☀️#ParkerSolarProbe became the closest-ever spacecraft to the Sun when it passed within 26.55 million miles of the Sun’s surface. Find out more: https://t.co/DVvHLRB1Ap pic.twitter.com/7YPJJwLrp1
— NASA (@NASA) October 29, 2018
ಅಕ್ಟೋಬರ್ 29 ರಂದು ಪಾರ್ಕರ್ ಪ್ರೋಬ್ ನೌಕೆ ಬರೋಬ್ಬರಿ 26.55 ಮಿಲಿಯನ್ ಮೈಲಿ(42.73 ಮಿಲಿಯನ್ ಕಿ.ಮೀ) ಕ್ರಮಿಸಿದ್ದು, ಸೂರ್ಯನಿಗೆ ಇಷ್ಟು ಸಮೀಪ ತಲುಪಿದ ಮೊದಲ ಮಾನವ ನಿರ್ಮಿತ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಮೊದಲು 1976ರಲ್ಲಿ ಹೆಲಿಯೋಸ್-2 ನೌಕೆ ಸೂರ್ಯನ ಸಮೀಪ ಹೋಗಿದ್ದೇ ಇದುವರೆಗಿನ ದಾಖಲೆಯಾಗಿತ್ತು. ಇದೀಗ ಪಾರ್ಕರ್ ಪ್ರೋಬ್ ಈ ದಾಖಲೆಯನ್ನು ಅಳಿಸಿ ಹಾಕಿದೆ.
ಪಾರ್ಕರ್ ಪ್ರೋಬ್ ಇನ್ನೂ ಸುಮಾರು 20 ಮಿಲಿಯನ್ ಕಿ.ಮೀ. ದೂರ ಕ್ರಮಿಸಬೇಕಿದ್ದು, ಸೂರ್ಯನನ್ನು ಬರೋಬ್ಬರಿ 24 ಬಾರಿ ಸುತ್ತು ಹೊಡೆಯಲಿದೆ. ಇನ್ನೂ ಅಚ್ಚರಿಯ ವಿಷಯ ಎಂದರೆ ತನ್ನ ಕೊನೆಯ ಸುತ್ತನ್ನು ಪಾರ್ಕರ್ ಸೂರ್ಯನಿಂದ ಕೇವಲ 3.83 ಮಿಲಿಯನ್ ಮೈಲಿ ದೂರದಲ್ಲಿ ಪೂರ್ಣಗೊಳಿಸಿದೆ.