ವಾಷಿಂಗ್ಟನ್(ಅ.21): ವಿಶ್ವದ ಈ ಅನಂತತೆಯಲ್ಲಿ ನಾವು ಒಬ್ಬರೇ ಇಲ್ಲ, ಬ್ರಹ್ಮಾಂಡದ ಬೇರೊಂದು ಸ್ಥಳದಲ್ಲಿ ಮತ್ತೊಂದು ಜೀವ ಜಗತ್ತು ಇದೆ ಎಂಬ ವಾದ ಇಂದು ನಿನ್ನೆಯದಲ್ಲ. ಮಾನವ ತಲೆಯೆತ್ತಿ ಆಗಸ ನೋಡಲು ಪ್ರಾರಂಭಿಸಿದ ದಿನದಿಂದಲೇ ಅದರಾಚೆ ಏನಿದೆ ಎಂಬ ಕುತೂಹಲ ಮಾನವ ಜನಾಂಗದೊಂದಿಗೆ ಪಯಣಿಸಿದೆ.

ಈ ಕುತೂಹಲದಿಂದಲೇ ಮನುಷ್ಯನಿಗೆ ವಿಶ್ವವನ್ನು ಅರಿಯಲು ಸಾಧ್ಯವಾಗಿದ್ದು. ವಿಜ್ಞಾನ ಜಗತ್ತು ಬೆರಗುಗೊಳಿಸುವ ಆವಿಷ್ಕಾರಗಳನ್ನು ಮಾಡಲು ಈ ಕುತೂಹಲವೇ ಪ್ರೇರಕ ಶಕ್ತಿ. ಆದರೆ ಇದುವರೆಗೂ ಮನುಷ್ಯನಿಗೆ ಅಂತಹ ಮತ್ತೊಂದು ಜೀವ ಜಗತ್ತನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. 

ಅದರಂತೆ ವಿಶ್ವದ ಸರ್ವಶ್ರೇಷ್ಠ ಖಗೋಳ ಸಂಸ್ಥೆ ನಾಸಾ ಕೂಡ ಹಲವು ದಶಕಗಳಿಂದ ಏಲಿಯನ್ ಜಗತ್ತನ್ನು ಹುಡುಕುವ ಕಾಯಕದಲ್ಲಿ ನಿರತವಾಗಿದೆ. ಏಲಿಯನ್ ಜಗತ್ತಿನ ಹುಡುಕಾಟದಲ್ಲಿರುವ ನಾಸಾ, ಇದರಲ್ಲಿ ಯಶಸ್ವಿಯಾಗುವ ಕಾಲ ಸನ್ನಿಹಿತವಾಗಿದೆ ಎಂಬ ಆಶಾಭಾವನೆ ಇದೀಗ ಮೂಡಿದೆ.

ಏಲಿಯನ್ ಶಿಪ್ ಅಥವಾ ಪರಗ್ರಹ ಜೀವಿಗಳ ಯಾನದ ಕುರಿತು ದಶಕಗಳಿಂದ ಅಧ್ಯಯನ ನಡೆಸುತ್ತಿರುವ ನಾಸಾದ ನಿಕ್ ಪೋಪ್, ಈ ಕುರಿತು ಇಡೀ ವಿಶ್ವವೇ ಅಚ್ಚರಿಗೊಳ್ಳುವಂತ ಹೇಳಿಕೆ ನೀಡಿದ್ದಾರೆ.

ನಿಕ್ ಪೋಪ್ ಪ್ರಕಾರ ಮುಂದಿನ 10 ವರ್ಷಗಳಲ್ಲಿ ನಾಸಾ ಏಲಿಯನ್ ಜಗತ್ತನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಲಿದೆ. ನಮ್ಮ ಸೌರಮಂಡಲದಲ್ಲೇ ಮತ್ತೊಂದು ಜೀವ ಜಗತ್ತು ಉಸಿರಾಡುತ್ತಿದ್ದು, ಇದನ್ನು ಪತ್ತೆ ಹಚ್ಚುವಲ್ಲಿ ನಾವು ಯಶಸ್ವಿಯಾಗಲಿದ್ದೇವೆ ಎಂದು ನಿಕ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಜೀವ ಜಗತ್ತು ಎಂದೊಡನೆ ಕೇವಲ ಮನುಷ್ಯಾಕೃತಿಯ ಜೀವಿಗಳು ಎಂದು ಭಾವಿಸಬಾರದು ಎಂದು ಸ್ಪಷ್ಟಪಡಿಸಿರುವ ನಿಕ್, ಭೂಮಿಯನ್ನು ಹೋಲುವ ಮತ್ತೊಂದು ಗ್ರಹದಲ್ಲಿ ಜೀವ ವಿಕಸನಕ್ಕೆ ಬೇಕಾದ ಎಲ್ಲಾ ಅಂಶಗಳೂ ಇದ್ದು ಅಲ್ಲಿ ಸೂಕ್ಷ್ಮಾಣು ಜೀವಿಗಳು ಅಥವಾ ಸಸ್ಯಗಳ ಆವಾಸ ಸ್ಥಾನ ಇರಬಹುದು ಎಂದು ನಿಕ್ ಹೇಳಿದ್ದಾರೆ.

ಒಟ್ಟಿನಲ್ಲಿ ನಾಸಾ ವಿಜ್ಞಾನಿ ನಿಕ್ ಪೋಪ್ ಹೇಳಿದಂತೆ ಇನ್ನು 10 ವರ್ಷದ ಅವಧಿಯಲ್ಲಿ ಮಾನವ ತನ್ನ ಬುದ್ದಿಮತ್ತೆಯಿಂದ ಬೇರೊಂದು ಜೀವ ಜಗತ್ತನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾದರೆ, ಮಾನವ ಜನಾಂಗ ತನ್ನ ಅಭಿವೃದ್ಧಿಯ ಅಂತಿಮ ಘಟ್ಟ ತಲುಪಿದಂತೆಯೇ ಸರಿ.