ಚಂದಮಾಮನ ಮುತ್ತಿಟ್ಟು 50 ವರ್ಷ: ನಾಸಾ ಸಂಭ್ರಮಾಚರಣೆ!
ನಾಸಾ ಅಪೋಲೊ 11 ಯೋಜನೆಗೆ ಭರ್ತಿ 50 ವರ್ಷ| ಮಾನವ ಮೊದಲ ಬಾರಿಗೆ ಚಂದ್ರನ ಮೇಲ್ಮೈ ಸ್ಪರ್ಶಿಸಿ 50 ವರ್ಷಗಳು| ಅಪೋಲೊ 11 ಯೋಜನೆಯ 50ನೇ ವರ್ಷಾಚರಣೆಯ ಸಂಭ್ರಮಾಚರಣೆ| ಮತ್ತೆ ಚಂದ್ರನಲ್ಲಿ ಮಾನವನನ್ನು ಇಳಿಸಿರುವ ನಾಸಾ| 2024ರಲ್ಲಿ ಚಂದ್ರನೆಡೆಗೆ ಮಾನವರನ್ನು ಕಳುಹಿಸಲಿರುವ ನಾಸಾ|
ಬೆಂಗಳೂರು(ಜು.20): ಅದು ಜು.20, 1969. ಮಾನವರನ್ನು ಹೊತ್ತ ನಾಸಾದ ಅಪೋಲೊ 11 ನೌಕೆ ಯಶಸ್ವಿಯಾಗಿ ಚಂದ್ರನ ಮೇಲ್ಮೈ ಮೇಲೆ ಇಳಿದಿತ್ತು.
ಅಲ್ಲಿಯವರೆಗೂ ಭೂಮಿಯ ಏಕೈಕ ಉಪಗ್ರಹ ಚಂದ್ರ, ತಾಯಿ ತನ್ನ ಕಂದನಿಗೆ ಊಟ ಮಾಡಿಸುವಾಗ ತೋರಿಸುತ್ತಿದ್ದ ಚಂದಮಾಮನಾಗಿ ಉಳಿದಿದ್ದ.
ಆದರೆ ಜು.20, 1969 ರಂದು ಚಂದ್ರನ ನೆಲ ಸ್ಪರ್ಶಿಸಿದ ಮಾನವ, ಅದರ ಅಧ್ಯಯನ ಮಾಡಿದ್ದಷ್ಟೇ ಅಲ್ಲದೇ ಭೂಮಿಯನ್ನು ಹೊರತುಪಡಿಸಿ ಮತ್ತೊಂದು ಆಕಾಶಕಾಯದ ನೆಲ ಮುಟ್ಟಿ ಬಂದ ಹೆಗ್ಗಳಿಕೆಗೂ ಪಾತ್ರನಾದ.
ನಾಸಾದ ಅಪೋಲೊ 11 ನೌಕೆಯಲ್ಲಿದ್ದ ಗಗನಯಯಾತ್ರಿಗಳಾದ ನೀಲ್ ಆರ್ಮ್’ಸ್ಟ್ರಾಂಗ್, ಮೈಕಲ್ ಕಾಲಿನ್ಸ್ ಹಾಗೂ ಬಜ್ ಆಲ್ಡ್ರಿನ್ ಚಂದ್ರನ ನೆಲ ಸ್ಪರ್ಶಿಸುವ ಭಾಗ್ಯ ಪಡೆದವರು. ಇವರ ಪೈಕಿ ನೀಲ್ ಆರ್ಮ್’ಸ್ಟ್ರಾಂಗ್ ಚಂದ್ರನ ಮೇಲೆ ಹೆಜ್ಜೆ ಇರಿಸಿದ ಮೊದಲ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರಾರಾದರು.
ರಷ್ಯಾದೊಂದಿಗಿನ ಶೀತಲ ಸಮರದ ಸಮಯದಲ್ಲಿ ಚಂದ್ರನ ಮೇಲೆ ಕಾಲಿರಿಸುವ ಮೂಲಕ ಅಮೆರಿಕ ರಷ್ಯಾ ಜೊತೆಗಿನ ಬಾಹ್ಯಾಕಾಶ ಸ್ಪರ್ಧೆಯನ್ನು ಗೆದ್ದಿತ್ತು.
ಇದೀಗ ಚಂದ್ರನ ಅಂಗಳದಲ್ಲಿ ಮಾನವ ಮೊದಲ ಬಾರಿ ಹೆಜ್ಜೆ ಇರಿಸಿ ಇಂದಿಗೆ 50 ವರ್ಷಗಳು ಪೂರ್ಣಗೊಂಡಿವೆ. ನಾಸಾ ಅಪೋಲೊ 11 ಯೋಜನೆಯ 50ನೇ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದೆ.
ಇದೀಗ ಅಪೋಲೊ 11 ಯೋಜನೆಯ 50ನೇ ವರ್ಷಾಚರಣೆ ಬೆನ್ನಲ್ಲೇ, ನಾಸಾ ಮತ್ತೆ ಚಂದ್ರನ ಮೇಲೆ ಮಾನವರನ್ನು ಕಳುಹಿಸುವ ಯೋಜನೆ ಘೋಷಿಸಿದೆ. 2024ರಲ್ಲಿ ನಾಸಾ ಮತ್ತೆ ಚಂದ್ರನ ಮೇಲೆ ಮಾನವರನ್ನು ಇಳಿಸಲಿದೆ.
ಅಷ್ಟೇ ಅಲ್ಲ, 2028ರಲ್ಲಿ ಬಹುದೀರ್ಘ ಕಾಲದವರೆಗೆ ಮಾನವರು ಚಂದ್ರನ ಮೇಲೆ ಇರುವ ಹಾಗೆ ನಾಸಾ ಯೋಜನೆ ರೂಪಿಸುತ್ತಿದೆ. ಚಂದ್ರನನ್ನು ಬೇಸ್ ಮಾಡಿಕೊಂಡು ಮುಂದಿನ ಖಗೋಳ ಅನ್ವೇಷಣೆಗಳನ್ನು ಕೈಗೊಳ್ಳುವುದು ನಾಸಾ ಪ್ಲ್ಯಾನ್.