ಬರೋಬ್ಬರಿ 8 ಸಾವಿರಕ್ಕೆ ಇದೆಂಥಾ ಫೋನು! ನಂಬೋದು ಕಷ್ಟ, ಆದ್ರೆ ನಂಬಲೇಬೇಕು!
ಭಾರತದ 700 ಪಟ್ಟಣಗಳಲ್ಲಿ 900ಕ್ಕೂ ಹೆಚ್ಚು ಷೋರೂಮುಗಳಿವೆ. ಇದು ಆಫ್ರಿಕಾದ ನಂಬರ್ ಒನ್ ಬ್ರಾಂಡು, 2017ರಲ್ಲಿ 130 ಮಿಲಿಯನ್ ಫೋನುಗಳನ್ನು ಮಾರಿದ್ದೇವೆ ಅಂತೆಲ್ಲ ಕಂಪೆನಿ ಹೇಳಿಕೊಂಡಿದೆ.
ಯಾವ್ ಫೋನ್ ತಗಂಡ್ರೂ ಅಷ್ಟೇ ಕಣ್ರೀ, ನಾಲ್ಕೇ ದಿನಕ್ಕೆ ಬೋರಾಗಿಬಿಡತ್ತೆ. ಕಮ್ಮೀದು ತಗಂಡು ಒಂದು ವರ್ಷ ಇಟ್ಕಂಡು, ಮತ್ತೆ ಹೊಸಾದು ತಗೊಳ್ಳೋದೇ ವಾಸಿ. ಈ ಫೋನ್ ಕಂಪೆನಿಯೋರು ಬೇರೆ ಹೊಸ ಹೊಸ ಆಪ್ಷನ್ಸು ಬಿಡ್ತಾನೇ ಇರ್ತಾರೆ. ಹಳೇ ಫೋನಿಗೆ ಹೊಸ ಅಪ್‌ಡೇಟುಗಳು ಸಿಗಲ್ಲ..
ಹೀಗೆಲ್ಲ ನೆಪಗಳನ್ನು ಹುಡುಕಬೇಕಾಗಿಲ್ಲ. ನೀವು ಯಾವ ಅಂಗಡಿಯಲ್ಲೂ ನೋಡದೇ ಇದ್ದರೂ, ಸಾಮಾನ್ಯವಾಗಿ ಯಾರ ಕೈಲೂ ಕಾಣಿಸದೇ ಇದ್ದರೂ, ಯಾರೂ ಈ ಫೋನಿನ ಕುರಿತು ನಿಮಗೆ ಹೇಳಿರದೇ ಇದ್ದರೂ ಇದು ಅತ್ಯಂತ ಜನಪ್ರಿಯ ಫೋನು ಎಂದು ನೀವು ನಂಬಬೇಕು. ಹೌದು, Tecno Camon i ಫೋನ್ ಅಂತಹದ್ದು!
ಈ ಫೋನಿನ ಏಕೈಕ ಅನುಕೂಲವೆಂದರೆ ಇದರ ಬೆಲೆ. ಕೇವಲ 7999ಕ್ಕೆ ಇದು ಲಭ್ಯ. ಈ ರೇಂಜಿನ ಫೋನುಗಳ ಪೈಕಿ ಇದು ದಿ ಬೆಸ್ಟುಅಂತ ಫೋನು ಕೊಂಡ ನಂತರ ನೀವೂ ಹೇಳುತ್ತೀರಿ ಎಂಬ ನಂಬಿಕೆ ಕಂಪೆನಿಗಿದೆ. ಅವರ ಪ್ರಕಾರ ಇದು ಹೇಳಿ ಕೇಳಿ ವಿದ್ಯಾರ್ಥಿಗಳು ಮತ್ತು ಅದೇ ಆಗ ಕೆಲಸಕ್ಕೆ ಸೇರಿದವರಿಗೆಂದೇ ತಯಾರಾದ ಫೋನು. ಎಲ್ಲಾ ಫೀಚರುಗಳು ಇರಬೇಕು. ದುಬಾರಿ ಆಗಬಾರದು ಎನ್ನುವವರಿಗೆ ಇದಂತೂ ಅತ್ಯುತ್ತಮ ಆಯ್ಕೆಯೇ.
ಇದನ್ನೂ ಓದಿ: ವಾಟ್ಸಪ್‌ನಲ್ಲಿ ಮಹತ್ವದ ಬದಲಾವಣೆ; ಬರುತ್ತಿದೆ ಹೊಸ ಫೀಚರ್!
Tecno Camon i ಫೋನಿನಲ್ಲಿ ಅಂಥದ್ದೇನೈತೆ ಎಂದು ಸರಳವಾಗಿ ನೋಡೋಣ. 3GB RAM, 32GB ROM, 5.5 ಫುಲ್ ಡಿಸ್‌ಪ್ಲೇ, 13 ಮೆಗಾಫಿಕ್ಸೆಲ್‌ನ ಎರಡು ಹಿಂಬದಿ ಕೆಮರಾ, ಅತ್ಯುತ್ತಮ ಸೆಲ್ಫೀ ಕೆಮರಾ, ಅದಕ್ಕೆ ಆರ್ಟಿಫಿಷಿಯಲ್ ಬುದ್ಧಿಮತ್ತೆಯ ಮೆರುಗು, ಫೇಸ್ ಅನ್‌ಲಾಕ್, ವಿಡಿಯೋ ಚಾಟ್‌ಗೂ ಫ್ಲಾಷು, ಮೂರು ಕಾರ್ಡ್ ಸ್ಲಾಟು, ಫಿಂಗರ್‌ಪ್ರಿಂಟ್ ಸೆನ್ಸರ್, ಆಕರ್ಷಕ ಬಣ್ಣ- ಹೀಗೆ ಎಂಟು ಸಾವಿರದ ಬಾಬತ್ತಿಗೆ ಬೇಕಾದಷ್ಟುಸೌಲಭ್ಯಗಳು ಇಲ್ಲಿವೆ.
ಹಾಗೆ ನೋಡಿದರೆ ಈ Tecno Camon i ಸೈಜು ಅಂಗೈಯೊಳಗೆ ಹಿಡಿಸುವಷ್ಟಿದೆ. ತುಂಬ ನಯವಾಗಿರುವ ಸರಕ್ಕನೆ ಕೈಯಿಂದ ಜಾರುತ್ತದೆ. ಒಳ್ಳೆಯ ನಿಲುವಂಗಿ ಹಾಕಿಟ್ಟುಕೊಂಡರೆ ವಾಸಿ. ಮಿಕ್ಕಂತೆ ಈ ಫೋನಿನಲ್ಲಿ ಅಂಥ ದೋಷಗಳೇನಿಲ್ಲ. ಇದನ್ನು ರಿಪೇರಿ ಮಾಡಿಸಲಿಕ್ಕೆ ಎಲ್ಲಿಗೆ ಹೋಗಬೇಕು ಅನ್ನುವ ಪ್ರಶ್ನೆಗೆ ಮಾತ್ರ ಕಂಪೆನಿಯಲ್ಲಿ ಸರಿಯಾದ ಉತ್ತರ ಸಿಗುವುದಿಲ್ಲ. ಆದರೆ ಇವರು 111 ಪ್ರಾಮಿಸ್ ಅನ್ನುವ ಯೋಜನೆ ಹಾಕಿಕೊಂಡಿದ್ದಾರೆ. ನೀರು ದಿನಗಳ ಒಳಗೆ ಸ್ಕ್ರೀನ್ ಒಡೆದುಹೋದರೆ ಒಂದು ಬಾರಿ ರಿಪ್ಲೇಸ್‌ಮೆಂಟ್ ಮಾಡುತ್ತಾರೆ. 12 ತಿಂಗಳ ಮೇಲೆ ಮತ್ತೊಂದು ತಿಂಗಳು ವಾರಂಟಿ ಕೊಡುತ್ತಾರೆ.
ಎರಡು ಕೆಮರಾ ಇರುವುದರಿಂದ ಶೂಟ್ ಮಾಡಿದ ಫೋಟೋಗಳಲ್ಲಿ ಎದುರಿರುವುದನ್ನು ಬೇಕಿದ್ದರೂ ಹಿಂದಿರುವುದು ಬೇಕಿದ್ದರೂ ಫೋಕಸ್ ಆಗುವಂತೆ ಮಾಡಬಹುದು. ವಾಟ್ಸಪ್ ಮೋಡ್ ಕೂಡ ಇದರಲ್ಲಿದೆ. ವಾಟ್ಸಪ್ ಮೋಡ್‌ಗೆ ಹಾಕಿದರೆ ಮಿಕ್ಕೆಲ್ಲ ಕಾರ್ಯಗಳು ಸ್ಥಗಿತಗೊಂಡು ಕೇವಲ ವಾಟ್ಸಪ್ ಮಾತ್ರ ಕಾರ್ಯಾರಂಭ ಮಾಡುತ್ತದೆ. ಬ್ಯಾಟರಿ ವೀಕಾಗಿ ಫೋನು ಸಾಯುವ ಸೂಚನೆ ಸಿಕ್ಕಾಗಲೂ ವಾಟ್ಸಪ್ಪು ಬೇಕು ಅನ್ನುವವರಿಗೆ ಇದು ವರದಾನ!
ಬ್ಯೂಟಿ ಮೋಡ್ ಇದ್ದೇ ಇದೆ. ಜಗತ್ತಿನ ಅತ್ಯುತ್ತಮ ಮೊಡವೆ ನಿವಾರಕ, ಗೌರವರ್ಣ ಪ್ರದಾಯಕ, ತ್ವಚೆಯನ್ನು ಹೊಳಪಾಗಿಸುವ ಶಕ್ತಿಯಿರುವ ಔಷಧಿ ಎಂದರೆ ಈ ಫೋನಿನ ಫ್ರಂಟ್ ಕೆಮರಾ. ಕಣ್ಣಾರೆ ಕಂಡರೂ ಎದುರಾಬದುರಾ ನೋಡಿ ನಿರ್ಧರಿಸಬೇಕಾದ ಫೋಟೋಗಳನ್ನ ಇದರಲ್ಲಿ ತೆಗೆಯಬಹುದು. ಅಂದ ಹಾಗೆ ಪೂರಿ ತಿನ್ನುತ್ತಾ ಇರುವಾಗ ಫೋನ್ ಅನ್‌ಲಾಕ್ ಮಾಡಲಿಕ್ಕೂ ಇಲ್ಲಿ ವ್ಯವಸ್ಥೆಯುಂಟು. ಇದರ ಫಿಂಗರ್ ಪ್ರಿಂಟ್ ಸೆನ್ಸರ್ ಆ್ಯಂಟಿ ಆಯಿಲ್ ಟೆಕ್ನಾಲಜಿ ಹೊಂದಿದೆ.
360 ಡಿಗ್ರಿ ಫ್ಲಾಷ್ ಸುತ್ತಲಿನ ಪರಿಸರವನ್ನು ಬೆಳಗುತ್ತದೆ. ಯಾರಿಗಾದರೂ ಫೋನ್ ಕೊಟ್ಟರೆ ಅವರೇನು ಮಾಡುತ್ತಾರೆ ಎಂದು ತಿಳಿದುಕೊಳ್ಳುವುದಕ್ಕೆ ಸ್ಕ್ರೀನ್ ರೆಕಾರ್ಡಿಂಗ್ ವ್ಯವಸ್ಥೆಯಿದೆ. ಅದನ್ನು ಗುಟ್ಟಾಗಿ ಮಾಡಿಕೊಳ್ಳಬಹುದು. ಆದರೆ ಪರದೆಯ ಮೇಲೊಂದು ನಂಬರ್ ಕೌಂಟರ್ ಓಡುತ್ತಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ವಿಡಿಯೋ ಚಾಟ್ ಮಾಡುವಾಗಲೂ ಫ್ಲಾಷ್ ಹಾಕಿಕೊಂಡು ಪ್ರೇಮಿಯ ಕಣ್ಣಿಗೆ ಬೆಳ್ಳಗೆ ಬೆಳ್ಳಗೆ ಕಾಣುವ ಸದವಕಾಶವನ್ನೂ ಈ ಫೋನ್ ಮಾಡಿಕೊಟ್ಟಿದೆ.
ಈ ಫೋನು ಆನ್‌ಲೈನಲ್ಲಿ ಸಿಗದು. Camon i ಕಂಪನಿಯ ಫೋನುಗಳ ಪೈಕಿ ಟೆಕ್ನೋ ಆಫ್‌ಲೈನು, ಇನ್‌ಫಿನಿಕ್ಸ್ ಆನ್‌ಲೈನು.