ಬೆಂಗಳೂರು ಟೆಕ್ ಶೃಂಗಸಭೆ-2020: '300 ಶತಕೋಟಿ ಡಾಲರ್ ಡಿಜಿಟಲ್ ಆರ್ಥಿಕತೆ ಗುರಿ'
ಸದ್ಯದ ಕರ್ನಾಟಕದ ಡಿಜಿಟಲ್ ಆರ್ಥಿಕತೆ 52 ಶತಕೋಟಿ ಡಾಲರ್, ಇದನ್ನು ಇನ್ನು 5 ವರ್ಷದಲ್ಲಿ 6 ಪಟ್ಟು ಹೆಚ್ಚಿಸುವ ಉದ್ದೇಶ, ಇದಕ್ಕಾಗಿ ರಾಜ್ಯ ಸರ್ಕಾರದಿಂದ ಸಕಲ ಕ್ರಮ: ಉಪ ಮುಖ್ಯಮಂತ್ರಿ, ಐಟಿ, ಬಿಟಿ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ
ಬೆಂಗಳೂರು(ನ.20): ಕರುನಾಡು ಮುಂದಿನ ಐದು ವರ್ಷಗಳಲ್ಲಿ 300 ಶತಕೋಟಿ ಡಾಲರ್ ಡಿಜಿಟಲ್ ಆರ್ಥಿಕತೆಯಾಗುವ ಗುರಿ ಹೊಂದಿದ್ದು, ಇದನ್ನು ಸಾಧಿಸುವ ದಿಸೆಯಲ್ಲಿ ದೃಢ ಹೆಜ್ಜೆಯಿಟ್ಟಿದ್ದೇವೆ ಎಂದು ಉಪ ಮುಖ್ಯಮಂತ್ರಿ, ಐಟಿ, ಬಿಟಿ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಹೇಳಿದ್ದಾರೆ.
"
ಬೆಂಗಳೂರಿನಲ್ಲಿ ಗುರುವಾರದಿಂದ ಆರಂಭವಾದ ‘ಬೆಂಗಳೂರು ಟೆಕ್’ ಶೃಂಗಸಭೆ-2020’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ‘ಡಿಜಿಟಲ್ ಇಂಡಿಯಾ’ ಹಾಗೂ ‘ಆತ್ಮ ನಿರ್ಭರ್ ಭಾರತ್’ ಪರಿಕಲ್ಪನೆಯಡಿ ಕರ್ನಾಟಕ ಸಹ ದಾಪುಗಾಲು ಹಾಕುತ್ತಿದ್ದು, ಸದ್ಯ ಕರ್ನಾಟಕ 52 ಶತಕೋಟಿ ಡಾಲರ್‌ನಷ್ಟುಡಿಜಿಟಲ್ ಆರ್ಥಿಕ ಗುರಿ ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ 300 ಶತಕೋಟಿ ಡಾಲರ್ ಆರ್ಥಿಕ ಗುರಿ ತಲುಪಲು ಎಲ್ಲ ರೀತಿಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದರು.
ಡಿಜಿಟಲ್ ಆರ್ಥಿಕತೆಯ ಗುರಿ ಸಾಧಿಸಲು ರಾಜ್ಯ ಸರ್ಕಾರ ಈಗಾಗಲೇ ಡಿಜಿಟಲ್ ಎಕಾನಮಿ ಮಿಷನ್ ಸ್ಥಾಪನೆ ಮಾಡಿ ಕಾರ್ಯೋನ್ಮುಖವಾಗಿದೆ. ತಂತ್ರಜ್ಞಾನದ ಮೂಲಕ ಆರ್ಥಿಕತೆಗೆ ವೇಗ ಕೊಡುವುದು ಈ ಮಿಷನ್ ಉದ್ದೇಶವಾಗಿದೆ. ‘ಇನ್‌ವೆಸ್ಟ್ ಇಂಡಿಯಾ’ ಮಾದರಿಯಲ್ಲಿ ಈ ಮಿಷನ್ ಜಾಗತಿಕ ಮಟ್ಟದಲ್ಲಿ ಸಂಪರ್ಕ ಸಾಧಿಸಿ ಕರ್ನಾಟಕದ ತಂತ್ರಜ್ಞಾನ ಕೈಗಾರಿಕೆಗಳನ್ನು ಉತ್ತೇಜಿಸುವುದು ಹಾಗೂ ರಾಜ್ಯದ ಹೆಸರನ್ನು ಇನ್ನಷ್ಟು ಉತ್ತಮಗೊಳಿಸುವುದಾಗಿದೆ. ಅಷ್ಟೇ ಅಲ್ಲ ಈ ಮಿಷನ್ ಸರ್ಕಾರದ ಐಟಿ ಸೇರಿದಂತೆ ವಿವಿಧ ಘಟಕಗಳಿಗೆ ಸಲಹೆ ನೀಡಲಿದೆ ಎಂದು ತಿಳಿಸಿದರು.
ಸೈಬರ್ ದಾಳಿ, ವೈರಸ್ ಹಾವಳಿ ಎದುರಿಸಿ : ಮೋದಿ ಟೆಕ್ ಟಾಕ್!
ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್, ಆಟೋಮೇಷನ್ ಇತ್ಯಾದಿಗಳು ಭವಿಷ್ಯದಲ್ಲಿ ಮುಂಚೂಣಿಯಲ್ಲಿರುವುದರಿಂದ, ಆರೋಗ್ಯ, ಸಾರಿಗೆ, ಕೃಷಿ-ತಂತ್ರಜ್ಞಾನ, ಶಿಕ್ಷಣ, ಆರ್ಥಿಕ ಒಳಗೊಳ್ಳುವಿಕೆ, ಇಂಧನ ಹಾಗೂ ಒಟ್ಟಾರೆ ಸಂಪನ್ಮೂಲಗಳು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ದೇಶಿಯ ತಂತ್ರಜ್ಞಾನದ ಮೂಲಕ ಪರಿಹರಿಸಿಕೊಳ್ಳುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಎಆರ್‌ಟಿ ಪಾರ್ಕ್ ಸ್ಥಾಪನೆಗೆ ಕಟ್ಟಡವನ್ನು ಒದಗಿಸಿದೆ. ಕೃತಕ ಬುದ್ಧಿಮತ್ತೆ ರೊಬೋಟಿಕ್‌ಗಳು ಸಮಾಜದ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ವಿಶ್ವಾಸ ತಮಗಿದೆ ಎಂದು ಸಚಿವರು ತಿಳಿಸಿದರು.
‘ನಮ್ಮ ಬೆಂಗಳೂರು’:
ಕಳೆದ ಮೂರು ದಶಕಗಳ ಅವಧಿಯಲ್ಲಿ ಹೊರ ಗುತ್ತಿಗೆ ಕೇಂದ್ರವಾಗಿದ್ದ ಬೆಂಗಳೂರು ಈಗ ವಿಶ್ವದ ಜಾಗತಿಕ ತಂತ್ರಜ್ಞಾನ ಕಂಪನಿಗಳ ಆದ್ಯತೆಯ ತಾಣವಾಗಿದೆ. 2002ರಲ್ಲಿ ಕೇವಲ ಒಂದು ಸಾವಿರ ಐಟಿ ಕಂಪನಿಗಳಿದ್ದ ರಾಜ್ಯದಲ್ಲಿ ಈಗ 5500 ಕ್ಕಿಂತ ಹೆಚ್ಚು ಕಂಪನಿಗಳು, ಲಕ್ಷಾಂತರ ಕೌಶಲ್ಯವುಳ್ಳ ಇಂಜಿನಿಯರ್‌ಗಳನ್ನು ಹೊಂದಿದ್ದು,ಇದು ‘ನಮ್ಮ ಬೆಂಗಳೂರು’ ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ.
ಬೆಂಗಳೂರು ತಂತ್ರಜ್ಞಾನ ಮೇಳ ಉದ್ಘಾಟಿಸಿದ ಮೋದಿ, ವಿದೇಶಗಳಿಗೆ ತಲುಪಿಸಲು ಇದು ಸಕಾಲ
ರಾಜ್ಯದಲ್ಲಿ ಐಟಿ,ಬಿಟಿ ತಂತ್ರಜ್ಞಾನ ಬೆಳೆಯಲು ಕರ್ನಾಟಕ ಸರ್ಕಾರ ನೀಡಿದ ಪ್ರೋತ್ಸಾಹ ಮತ್ತು ಸೌಲಭ್ಯಗಳು ಕಾರಣವಾಗಿದೆ. ಇದಕ್ಕಾಗಿ ನೀತಿಗಳನ್ನು ಜಾರಿಗೆ ತರಲಾಗಿದೆ. ಸರ್ಕಾರ ‘ರಕ್ಷಕ’, ’ಸಮಸ್ಯೆ ಪರಿಹಾರಕ’ನಾಗಿ ಕಾರ್ಯ ನಿರ್ವಹಿಸಿದ್ದು, ಈಗ ‘ವೇಗವರ್ಧಕ’ನಾಗಿ ಕಾರ್ಯನಿರ್ವಹಿಸುತ್ತಿದೆ ಎಂದ ಡಾ. ಅಶ್ವಥ್‌ನಾರಾಯಣ, ಕರ್ನಾಟಕದಲ್ಲಿ ಇರುವ ಉತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆ, ದೊಡ್ಡ ಪ್ರಮಾಣದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ನೂತನ ‘ಐಟಿ ನೀತಿ-2020-25’ ಈ ಕ್ಷೇತ್ರಕ್ಕೆ ಭವಿಷ್ಯಕ್ಕೆ ಬೇಕಾದ ಎಲ್ಲ ಅಗತ್ಯತೆಯನ್ನು ಕಲ್ಪಿಸಲಿದೆ ಎಂದು ಸಚಿವರು ವಿವರಿಸಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ರಾಜ್ಯ ಸರ್ಕಾರ ಹೊಸ ನೀತಿ, ಕಾರ್ಯಕ್ರಮ, ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಮುಖವಾಗಿರುವ ಸಂಪರ್ಕ ಮತ್ತು ಸಂವಹನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿದ್ದು, ‘ಉಡಾನ್’ ಮೂಲಕ ರಾಜ್ಯದ ಹಲವು ನಗರಗಳಲ್ಲಿ ವಿಮಾನ ನಿಲ್ದಾಣ ನಿರ್ಮಿಸಿ ಸಂಪರ್ಕ ವ್ಯವಸ್ಥೆ ಸುಲಭವಾಗಿ ಮಾಡಲಾಗಿದೆ. 4ಜಿ ಸಂಪರ್ಕ ಎಲ್ಲ ಕಡೆ ಲಭ್ಯವಾಗುತ್ತಿದ್ದು, ಮುಂಬರುವ 5-ಜಿ ಸಂವಹನಕ್ಕೆ ಅಗತ್ಯ ಮೂಲ ಸೌಕರ್ಯ ನಿರ್ಮಿಸಲಾಗಿದೆ ಎಂದು ಡಾ. ಅಶ್ವಥ್‌ನಾರಾಯಣ ತಿಳಿಸಿದರು.