ಸೈಬರ್ ದಾಳಿ, ವೈರಸ್ ಹಾವಳಿ ಎದುರಿಸಿ : ಮೋದಿ ಟೆಕ್ ಟಾಕ್!
‘ಬೆಂಗಳೂರು ಟೆಕ್ ಸಮ್ಮಿಟ್-2020’ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮಾಧ್ಯಮದ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ಈಗ ಆಗಬೇಕಿರುವ ಕೆಲಸಗಳ ಬಗ್ಗೆ ಬೆಳಕು ಚೆಲ್ಲಿದರು.
ಬೆಂಗಳೂರು (ನ.20): ಬೆಂಗಳೂರಿನಲ್ಲಿ ಗುರುವಾರ ಆರಂಭವಾದ 3 ದಿನಗಳ ‘ಬೆಂಗಳೂರು ಟೆಕ್ ಸಮ್ಮಿಟ್-2020’ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮಾಧ್ಯಮದ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ಈಗ ಆಗಬೇಕಿರುವ ಕೆಲಸಗಳ ಬಗ್ಗೆ ಬೆಳಕು ಚೆಲ್ಲಿದರು. ಅದರ ಮುಖ್ಯಾಂಶ ಇಂತಿದೆ.
1. ಕೈಗಾರಿಕೆ ಯುಗದ ಸಾಧನೆಗಳು ಮುಗಿದಿವೆ. ನಾವೀಗ ಮಾಹಿತಿ ಯುಗದ ಮಧ್ಯದಲ್ಲಿ ಇದ್ದೇವೆ. ಇದರ ಲಾಭವನ್ನು ಭಾರತ ಪೂರ್ಣವಾಗಿ ಪಡೆಯಬೇಕು
2. ಈ ನಿಟ್ಟಿನಲ್ಲಿ ವಿಫುಲ ಅವಕಾಶ ಇದೆ. ಯಾಕೆಂದರೆ, ಭಾರತದಲ್ಲಿ ಕೌಶಲ್ಯ, ಜ್ಞಾನ ಇರುವ ಯುವ ಸಮೂಹ ಇದೆ. ಅಷ್ಟೇ ವಿಶಾಲವಾದ ಮಾರುಕಟ್ಟೆಯೂ ಇದೆ
3. ಇದಕ್ಕೆ ಪೂರಕವಾಗಿ ಸ್ಥಳೀಯ ತಂತ್ರಜ್ಞಾನಗಳು ರೂಪುಗೊಳ್ಳುತ್ತಿದೆ. ಇವಕ್ಕೆ ಜಾಗತಿಕ ಮಟ್ಟಕ್ಕೆ ಏರುವ ಸಾಮರ್ಥ್ಯವೂ ಇದೆ. ಆ ಸಮಯ ಈಗ ಬಂದಿದೆ
4. ಐಟಿ ಮಾತ್ರವಲ್ಲ, ಬಿಟಿ, ಎಂಜಿನಿಯರಿಂಗ್ ಮುಂತಾದ ತಾಂತ್ರಿಕ ಕ್ಷೇತ್ರಗಳಲ್ಲಿ ಯುವಸಮೂಹ ನವೀನ ಆವಿಷ್ಕಾರ ಮಾಡಿ ಭಾರತವನ್ನು ಮುಂಚೂಣಿಗೆ ತರಬೇಕು
5. ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದ್ದಂತೆ ದತ್ತಾಂಶ ಸಂರಕ್ಷಣೆ, ಸೈಬರ್ ಸುರಕ್ಷತೆ ಸವಾಲು ಹೆಚ್ಚುತ್ತದೆ. ಇದನ್ನು ಪ್ರತಿಭಾವಂತ ಯುವ ಸಮೂಹ ಎದುರಿಸಬೇಕು
ಬೆಂಗಳೂರು ತಂತ್ರಜ್ಞಾನ ಮೇಳ ಉದ್ಘಾಟಿಸಿದ ಮೋದಿ, ವಿದೇಶಗಳಿಗೆ ತಲುಪಿಸಲು ಇದು ಸಕಾಲ .
ಬೆಂಗಳೂರಿಂದ ಹೊರಕ್ಕೂ ಐಟಿ ಕ್ಷೇತ್ರ ವಿಸ್ತರಣೆ: ಸಿಎಂ
ಬೆಂಗಳೂರು: ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಬೆಂಗಳೂರಿನಿಂದ ಹೊರಗೂ ವಿಸ್ತರಿಸಲು ಆದ್ಯತೆ ನೀಡಿ ‘ಮಾಹಿತಿ ತಂತ್ರಜ್ಞಾನ ಕಾರ್ಯನೀತಿ -2020-25’ ಪ್ರಕಟಿಸಿದ್ದು, ಮುಂದಿನ ಐದು ವರ್ಷದಲ್ಲಿ 60 ಲಕ್ಷ ನೇರ ಹಾಗೂ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದ್ದೇವೆ ಎಂದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರವು 2025ರ ವೇಳೆಗೆ ಸಾಧಿಸಬೇಕು ಎಂದುಕೊಂಡಿರುವ 100 ಬಿಲಿಯನ್ ಡಾಲರ್ ಜೈವಿಕ ತಂತಜ್ಞಾನ ಆರ್ಥಿಕತೆಯ ಗುರಿಯಲ್ಲಿ ರಾಜ್ಯವೇ ಶೇ.50 ರಷ್ಟುಮಾರುಕಟ್ಟೆಯ ಸಿಂಹಪಾಲು ಪಡೆಯಲಿದೆ. ಈ ಗುರಿ ಸಾಧನೆಗೆ ಅಗತ್ಯವಾದ ಎಲ್ಲಾ ಕ್ರಮಗಳನ್ನೂ ಕೈಗೊಂಡಿದ್ದೇವೆ ಎಂದರು.
300 ಶತಕೋಟಿ ಡಾಲರ್ ಡಿಜಿಟಲ್ ಆರ್ಥಿಕತೆ ಗುರಿ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ‘ಡಿಜಿಟಲ್ ಇಂಡಿಯಾ’ ಹಾಗೂ ‘ಆತ್ಮ ನಿರ್ಭರ್ ಭಾರತ್’ ಪರಿಕಲ್ಪನೆಯಡಿ ಕರ್ನಾಟಕ ಸಹ ದಾಪುಗಾಲು ಹಾಕುತ್ತಿದ್ದು, ಸದ್ಯ ಕರ್ನಾಟಕ 52 ಶತಕೋಟಿ ಡಾಲರ್‌ನಷ್ಟುಡಿಜಿಟಲ್ ಆರ್ಥಿಕತೆ ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ 300 ಶತಕೋಟಿ ಡಾಲರ್ ಆರ್ಥಿಕ ಗುರಿ ತಲುಪಲು ಎಲ್ಲ ರೀತಿಯ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಎಂದು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಖಾತೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.