ಬೆಂಗಳೂರು ತಂತ್ರಜ್ಞಾನ ಮೇಳ ಉದ್ಘಾಟಿಸಿದ ಮೋದಿ, ವಿದೇಶಗಳಿಗೆ ತಲುಪಿಸಲು ಇದು ಸಕಾಲ

ಇದೇ ಮೊತ್ತಮೊದಲ ಬಾರಿಗೆ ವರ್ಚ್ಯುಯಲ್ ಆಗಿ ನಡೆಯಲಿರುವ ಮೂರು ದಿನಗಳ “ಬೆಂಗಳೂರು ತಂತ್ರಜ್ಞಾನ ಮೇಳ” (ಬಿಟಿಎಸ್-2020)ವನ್ನು ಗುರುವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

Bangalore Tech Summit 2020: Digital India has become a way of life says PM Modi rbj

ಬೆಂಗಳೂರು, (ನ.19): ಭಾರತದಲ್ಲಿ ಅಭಿವೃದ್ಧಿಪಡಿಸಲಾದ ತಂತ್ರಜ್ಞಾನ ಪರಿಹಾರಗಳನ್ನು ಜಗತ್ತಿನ ಬೇರೆ ದೇಶಗಳಿಗೆ ತಲುಪಿಸಲು ಇದು ಸೂಕ್ತ ಸಮಯವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು.

"

ಇದೇ ಮೊತ್ತಮೊದಲ ಬಾರಿಗೆ ವರ್ಚ್ಯುಯಲ್ ಆಗಿ ನಡೆಯಲಿರುವ ಮೂರು ದಿನಗಳ “ಬೆಂಗಳೂರು ತಂತ್ರಜ್ಞಾನ ಮೇಳ” (ಬಿಟಿಎಸ್-2020)ವನ್ನು ಗುರುವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

“ಡಿಜಿಟಲ್ ಇಂಡಿಯಾ” ಎಂಬುದು ಈಗ ಕೇವಲ ಸರ್ಕಾರದ ಅಭಿಯಾನವಾಗಿ ಉಳಿದಿಲ್ಲ.  ಇದು ಬದುಕಿನ ರೀತಿಯೇ ಆಗಿ ಹೋಗಿದೆ. ಡಿಜಿಟಲ್ ತಂತ್ರಜ್ಞಾನವು ಜನರಿಗೆ  ಪಾರದರ್ಶಕ ರೀತಿಯಲ್ಲಿ ತ್ವರಿತವಾಗಿ ಸೇವೆಗಳನ್ನು ತಲುಪಿಸಲು ಅನುವು ಮಾಡಿಕೊಡುತ್ತಿದೆ. ವಿಶೇಷವಾಗಿ ಆರ್ಥಿಕವಾಗಿ ದುರ್ಬಲರಾದವರಿಗೆ, ನಿರ್ಲಕ್ಷಿತ ಸಮುದಾಯಗಳಿಗೆ ಹಾಗೂ ಸರ್ಕಾರಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಇದಕ್ಕಾಗಿ ನಾವು “ಡಿಜಿಟಲ್ ಇಂಡಿಯಾ”ಗೆ ಧನ್ಯವಾದ ಸಲ್ಲಿಸಬೇಕು ಎಂದು ಅಭಿಪ್ರಾಯಪಟ್ಟರು. 

ಭಾರತದಲ್ಲಿ ಡೈನಾಮಿಕ್ಸ್ 365 ಪ್ರಾಜೆಕ್ಟ್ ಪ್ರಕಟಿಸಿದ ಮೈಕ್ರೋಸಾಫ್ಟ್!

ಕೋವಿಡ್ ಸೋಂಕಿನ ಸನ್ನಿವೇಶದಲ್ಲಿ ರೂಢಿಗೆ ಬಂದ “ಎಲ್ಲಿಂದಾದರೂ ಕೆಲಸ ಮಾಡಿ” ಎಂಬ ಪರಿಕಲ್ಪನೆಯು ಇನ್ನು ಮುಂದೆಯೂ ಉಳಿದುಕೊಳ್ಳಲಿದೆ. ಶಿಕ್ಷಣ, ಆರೋಗ್ಯಸೇವೆ, ಶಾಪಿಂಗ್ ಸೇರಿದಂತೆ ಹಲವು ವಲಯಗಳಲ್ಲಿ ತಂತ್ರಜ್ಞಾನದ ಆನ್ವಯಿಕತೆಯು ಹೆಚ್ಚಾಗಲಿದೆ. ಯಾವ ಬದಲಾವಣೆಯು ಈ ಮುಂಚೆ ಕನಿಷ್ಠ 10 ವರ್ಷಗಳನ್ನು ಹಿಡಿಯುತ್ತಿತ್ತೋ ಅದು ಕೋವಿಡ್ ಸನ್ನಿವೇಶದಲ್ಲಿ ತಾಂತ್ರಿಕ ಬಳಕೆಯಿಂದ ಕೆಲವೇ ತಿಂಗಳುಗಳಲ್ಲಿ ಆಗಿದೆ ಎಂದರು.
Bangalore Tech Summit 2020: Digital India has become a way of life says PM Modi rbj

ನಮ್ಮ ದೇಶವು ಅಭಿವೃದ್ಧಿಯಲ್ಲಿ ಮನುಷ್ಯ ಕೇಂದ್ರಿತ ಧೋರಣೆಯನ್ನು ಅನುಸರಿಸುತ್ತಿದೆ. ತಂತ್ರಜ್ಞಾನವು ಪ್ರಜೆಗಳ ಬದುಕಿನಲ್ಲಿ ಹಲವಾರು ಬದಲಾವಣೆಗಳನ್ನು ತಂದಿದೆ. ಅದರ ಲಾಭಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಸರ್ಕಾರವು ಡಿಜಿಟಲ್ ಮತ್ತು ತಾಂತ್ರಿಕ ಪರಿಹಾರಗಳಿಗೆ ಮಾರುಕಟ್ಟೆ ಸೃಷ್ಟಿಸುತ್ತಿದೆ. ಜೊತೆಗೆ ತಂತ್ರಜ್ಞಾನವನ್ನು ಎಲ್ಲಾ ಯೋಜನೆಗಳ ಪ್ರಮುಖ ಭಾಗವಾಗಿಸಿದೆ. “ತಂತ್ರಜ್ಞಾನ ಮೊದಲು” ಎಂಬುದು ತಮ್ಮ ಆಡಳಿತದ ಮಾದರಿಯಾಗಿದೆ. ತಂತ್ರಜ್ಞಾನದ ಬಳಕೆಯಿಂದ ಮನುಷ್ಯ ಬದುಕಿನ ಘನತೆಯನ್ನು ಉನ್ನತಿಗೇರಿಸಲಾಗಿದೆ. ಇಂತಹ ಉದಾಹರಣೆ ಪ್ರಪಂಚದಲ್ಲಿ ಬೇರೆಡೆ ಸಿಗುವುದು ಕಷ್ಟಸಾಧ್ಯ ಎಂದು ಪ್ರಧಾನಿ ವಿವರಿಸಿದರು. 

ಕೇಂದ್ರ ಸರ್ಕಾರವು ಪ್ರಪಂಚದ ಅತ್ಯಂತ ದೊಡ್ಡ ಆರೋಗ್ಯ ಸೇವಾ ಯೋಜನೆಯಾದ “ಆಯುಷ್ಮಾನ್ ಭಾರತ”ವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ತಂತ್ರಜ್ಞಾನದ ಬಳಕೆಯಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಕೋವಿಡ್ ಸಂಕಷ್ಟದ ವೇಳೆ ಕೋಟ್ಯಂತರ ಜನರಿಗೆ ಕೇವಲ ಒಂದು ಕ್ಲಿಕ್ ಮೂಲಕ ಆರ್ಥಿಕ ನೆರವು ಒದಗಿಸಲು ಸಾಧ್ಯವಾಯಿತು. ತಂತ್ರಜ್ಞಾನವು ಜನರನ್ನು ಒಗ್ಗೂಡಿಸುವಲ್ಲಿ ನೆರವಾಗಿದೆ ಎಂದು ಹೇಳಿದರು.

ಭಾರತಕ್ಕೆ ಇಂಟರ್ ನೆಟ್ 25 ವರ್ಷಗಳ ಹಿಂದೆ ಪದಾರ್ಪಣೆ ಮಾಡಿತು. ಈಗ ದೇಶದಲ್ಲಿ 75 ಕೋಟಿ ಇಂಟರ್ ನೆಟ್ ಸಂಪರ್ಕಗಳಿವೆ. ಇದರಲ್ಲಿ ಶೇ 50ಕ್ಕೂ ಹೆಚ್ಚು ಸಂಪರ್ಕಗಳು ಕಳೆದ ನಾಲ್ಕು ವರ್ಷಗಳಲ್ಲಿ ಆಗಿವೆ. ದೇಶದ ಪ್ರತಿಯೊಂದು ಮನೆಗೂ ವಿದ್ಯುತ್ ಎಂಬುದು ಬಹುತೇಕ ಸಾಕಾರಗೊಳ್ಳಲು ಕೂಡ ತಂತ್ರಜ್ಞಾನವೇ ಕಾರಣವಾಗಿದೆ.  ಇದೀಗ ತಂತ್ರಜ್ಞಾನದ ಮಜಲನ್ನು ಇನ್ನಷ್ಟು ಉನ್ನತಿಗೇರಿಸುವ ಬಗ್ಗೆ ನಾವು ಆಲೋಚಿಸಬೇಕಿದೆ ಎಂದರು.

Bangalore Tech Summit 2020: Digital India has become a way of life says PM Modi rbj

ಕಳೆದ ಎರಡು ತಿಂಗಳುಗಳಲ್ಲಿ 200 ಕೋಟಿ ವ್ಯವಹಾರಗಳು ಡಿಜಿಟಲ್ ಸ್ವರೂಪದಲ್ಲಿ ನಡೆದಿವೆ. ತಂತ್ರಜ್ಞಾನವು ರಕ್ಷಣಾ ಕೇತ್ರದ ವಿಕಸನಕ್ಕೆ ಎಡೆಮಾಡಿಕೊಡುತ್ತಿದೆ. ಮುಂಬರುವ ದಿನಗಳಲ್ಲಿ ಡ್ರೋನ್ ತಾಂತ್ರಿಕತೆಯು ಭೂದಾಖಲೆಗಳನ್ನು ನೀಡಲು ಅನುವು ಮಾಡಿಕೊಡಲಿದೆ. ಇದರಿಂದ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳ ಕೋಟ್ಯಂತರ ರೈತರಿಗೆ ಅನುಕೂಲವಾಗಲಿದೆ ಎಂದು ಮೋದಿ ನುಡಿದರು.

ಕೇಂದ್ರ ಸರ್ಕಾರವು ದತ್ತಾಂಶ ವಿಶ್ಲೇಷಣೆಯ ಸಾಮರ್ಥ್ಯವನ್ನು ಫಲಾನುಭವಿಗಳಿಗೆ ಸುಧಾರಿತ ರೀತಿಯಲ್ಲಿ ಸೇವೆ ತಲುಪಿಸಲು ಮತ್ತು ಸೇವಾ ಕ್ಷಮತೆ ಖಾತ್ರಿಗೊಳಿಸಲು ಬಳಸುತ್ತಿದೆ. ತಂತ್ರಜ್ಞಾನದಿಂದಾಗಿ ಯೋಜನೆಗಳು ಜನರ ಬದುಕಿನಲ್ಲಿ ತ್ವರಿತವಾಗಿ ಧನಾತ್ಮಕ ಬದಲಾವಣೆ ತರುತ್ತಿವೆ. ಜೊತೆಗೆ ಹೆಚ್ಚಿನ ಸಂಖ್ಯೆಯ ಜನರಿಗೆ ಸುಲಭವಾಗಿ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತಿದೆ. ಬಹುತೇಕ ಎಲ್ಲ ಮನೆಗಳಿಗೂ ವಿದ್ಯುತ್ ನೀಡಲು, ಟೋಲ್ ಬೂಥ್ ಗಳನ್ನು ಶೀಘ್ರವಾಗಿ ದಾಟಲು ತಂತ್ರಜ್ಞಾನ ನೆರವಾಗಿದೆ. ಇದು ಕಡಿಮೆ ಅವಧಿಯಲ್ಲಿ ಎಲ್ಲರಿಗೂ ಲಸಿಕೆ ಹಾಕಲು ಸಾಧ್ಯ ಎಂಬ ವಿಶ್ವಾಸವನ್ನೂ ಮೂಡಿಸಿದೆ ಎಂದು ಮೋದಿ ಹೇಳಿದರು.

ಭಾರತ ದೇಶವು ಈಗ ಮಾಹಿತಿ ಯುಗದ ಮಧ್ಯದ ಅವಧಿಯಲ್ಲಿದ್ದು, ಮುಂಚೂಣಿಗೆ ಬರುವ ಎಲ್ಲಾ ಅವಕಾಶಗಳನ್ನು ಹೊಂದಿದೆ. ಪ್ರತಿಭಾವಂತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜೊತೆಗೆ ಬಲು ದೊಡ್ಡ ಮಾರುಕಟ್ಟೆ ಇದೆ. ಇದಕ್ಕೆ ಪೂರಕವಾಗಿ ಸರ್ಕಾರವು ತಾಂತ್ರಿಕ ಹಾಗೂ ನಾವೀನ್ಯತಾ ಉದ್ದಿಮೆಗಳಿಗೆ ಪೂರಕವಾದ ಕಾರ್ಯನೀತಿಗಳನ್ನು ಜಾರಿಗೊಳಿಸಲು ಒತ್ತು ನೀಡುತ್ತಿದೆ ಎಂದು ಪ್ರಧಾನಿ ಸ್ಪಷ್ಟಪಡಿಸಿದರು.

ಹಿಂದಿನ ಕೈಗಾರಿಕಾ ಯುಗದಲ್ಲಿ ಬದಲಾವಣೆಗಳು ತಕ್ಷಣದ ಪಲ್ಲಟಗಳನ್ನು ಉಂಟು ಮಾಡುತ್ತಿರಲಿಲ್ಲ. ಆದರೆ ಈಗಿನ ಮಾಹಿತಿ ಯುಗದಲ್ಲಿ ಬದಲಾವಣೆಯು ತಕ್ಷಣವೇ ಪಲ್ಲಟಗಳನ್ನು ಉಂಟು ಮಾಡಬಹುದಾಗಿದೆ. ಯಾವುದೇ ವ್ಯಕ್ತಿಯು ಯಾವುದೇ ಸಮಯದಲ್ಲಿ ಮಾರುಕಟ್ಟೆಯ ಸೂತ್ರಗಳನ್ನೇ ತಲೆಕೆಳಗು ಮಾಡುವಂತಹ ಉತ್ಪನ್ನಗಳನ್ನು ರೂಪಿಸಬಹುದಾಗಿದೆ ಎಂದು ನರೇಂದ್ರ ಮೋದಿ ವಿವರಿಸಿದರು.

ದತ್ತಾಂಶ ರಕ್ಷಣೆ, ಸೈಬರ್ ಸುರಕ್ಷತೆಯಲ್ಲಿ ನಮ್ಮ ಯುವ ತಂತ್ರಜ್ಞರು ಪ್ರಮುಖ ಪಾತ್ರ ವಹಿಸಬೇಕು. ಇದನ್ನು ಗಮನದಲ್ಲಿರಿಸಿಕೊಂಡು ಸೂಕ್ತ ಡಿಜಿಟಲ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಬೇಕು. ಜೀವ ವಿಜ್ಞಾನಗಳು, ಎಂಜಿನಿಯರಿಂಗ್ ಇತ್ಯಾದಿ ಕ್ಷೇತ್ರಗಳಲ್ಲಿ ನಾವೀನ್ಯತೆ ಪ್ರಸ್ತುತವಾಗಿದೆ. ನಾವೀನ್ಯತೆಯೇ ಪ್ರಗತಿಗೆ ಚಾಲಕ ಶಕ್ತಿಯಾಗಿದೆ ಎಂದ ಪ್ರಧಾನಿ, ಸೋಂಕಿನ ಸನ್ನಿವೇಶದಲ್ಲಿ ಕ್ಷಮತೆ ತೋರಿದ ತಂತ್ರಜ್ಞಾನ ವಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡುಗೆ ಬೆಳವಣಿಗೆಗೆ ಕೊಡುಗೆ ನೀಡಲು ಅಪರಿಮಿತ ಅವಕಾಶಗಳಿವೆ ಎಂದ ಪ್ರಧಾನಿ, ಮಾಹಿತಿ ತಂತ್ರಜ್ಞಾನ ವಲಯವು ನಮ್ಮ ಹೆಮ್ಮೆಗೆ ಕಾರಣವಾಗಿರುವುದು ಇದೇ ರೀತಿ ಮುಂದುವರಿಯಬೇಕು ಎಂದು ಆಶಿಸಿದರು.

ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ರಾಜ್ಯವು ಉದ್ಯಮಿ ಸ್ನೇಹಿ ವಾತಾವರಣ ನಿರ್ಮಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಉದ್ದಿಮೆಗಳ ಬೆಳವಣಿಗೆಗೆ ಪೂರಕವಾದ ಕಾರ್ಯನೀತಿ ರೂಪಿಸುವ ಜೊತೆಗೆ ಭೂಕಾನೂನು ಮತ್ತು ಕಾರ್ಮಿಕ ಕಾನೂನುಗಳಲ್ಲಿ ಕೂಡ ಬದಲಾವಣೆಗಳನ್ನು ತಂದಿದೆ ಎಂದರು.

ಐಟಿ/ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಅವರು, ಈ ಮೇಳದ ಸಂದರ್ಭದಲ್ಲಿ ಹಲವಾರು ಪರಸ್ಪರ ತಿಳಿವಳಿಕೆ ಒಪ್ಪಂದಗಳು (ಎಂಒಯು) ಆಗುತ್ತಿವೆ; ಈ ಮೇಳವು ಜಗತ್ತಿನೆಲ್ಲೆಡೆಯ ಹೂಡಿಕೆದಾರರು, ಉದ್ಯಮಶೀಲರು, ವಿಷಯ ಪರಿಣತರು, ಶೈಕ್ಷಣಿಕ ವಲಯದವರು ಎಲ್ಲರನ್ನೂ ಒಂದೆಡೆ ಸೇರಿಸುವ ವೇದಿಕೆಯಾಗಿದೆ; 25ಕ್ಕೂ ಹೆಚ್ಚು ರಾಷ್ಟ್ರಗಳು ಉತ್ಸಾಹದೊಂದಿಗೆ ಇದರಲ್ಲಿ ಪಾಲ್ಗೊಂಡಿವೆ ಎಂದರು.

ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸ್, ಸ್ವೀಡನ್ ಉಪ-ರಾಷ್ಟ್ರಾಧ್ಯಕ್ಷ ಗಯ್ ಪರ್ಮಿಲಿನ್, ಮಾಹಿತಿ ತಂತ್ರಜ್ಞಾನ ದೂರದರ್ಶಿತ್ವ ಸಮಿತಿಯ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣ, ಜೈವಿಕ ತಂತ್ರಜ್ಞಾನ ದೂರದರ್ಶಿತ್ವ ಸಮಿತಿಯ ಕಿರಣ್ ಮಜುಂದಾರ್ ಷಾ ಮಾತನಾಡಿದರು. ಐಟಿ/ಬಿಟಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಭಾರಿ ಕೈಗಾರಿಕಾ ಸಚಿವ ಡಾ.ಜಗದೀಶ್ ಶೆಟ್ಟರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಶಾಂತಿನಗರ ಶಾಸಕ ರಿಜ್ವಾನ್ ಅರ್ಷದ್ ನವೋದ್ಯಮ ದೂರದರ್ಶಿತ್ವ ಸಮಿತಿ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಎಸ್ ಟಿಪಿಐ ಮುಖ್ಯಸ್ಥ ಶೈಲೇಂದ್ರ ಕುಮಾರ್ ತ್ಯಾಗಿ, ಐಟಿ/ಬಿಟಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕರಾದ ಮೀನಾ ನಾಗರಾಜ್ ವೇದಿಕೆ ಮೇಲಿದ್ದರು, 

Latest Videos
Follow Us:
Download App:
  • android
  • ios