ನವೋದ್ಯಮಗಳಿಗೆ ಸರ್ಕಾರದ ಬೆಂಬಲ ಸದಾ ಸಿಗಲಿದೆ: ಸಿಎಂ ಬಸವರಾಜ ಬೊಮ್ಮಾಯಿ
ಸ್ಟಾರ್ಟ್‍ಅಪ್‍ಗಳ ಕುರಿತ ಮೊದಲ ಜಾಗತಿಕ ಸಮ್ಮೇಳನಕ್ಕೆ ಸಾಕ್ಷಿಯಾದ ಬೆಂಗಳೂರು. 40 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಹೂಡಿಕೆದಾರರು, ಉದ್ಯಮಿಗಳು ಮತ್ತು ನವೋದ್ಯಮಿಗಳಿಂದ ಭಾರತೀಯ ಸ್ಟಾರ್ಟ್ ಅಪ್ ಸಮುದಾಯದ ಜತೆಗೆ ಸಂವಾದ
ಬೆಂಗಳೂರು (ಜೂ. 02): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಇಂದು ಸ್ವಿಡ್ಜಲೆರ್ಂಡ್ ಮೂಲದ ಪ್ರಮುಖ ಸಲಹಾ ಸಂಸ್ಥೆಯಾದ ಸ್ಮಡ್ಜಾ & ಸ್ಮಡ್ಜಾ ಆಯೋಜಿಸಿದ ಭಾರತದ ಮೊಟ್ಟಮೊದಲ ಜಾಗತಿಕ ಸ್ಟಾರ್ಟ್ ಅಪ್ (Startup_ ಸಮ್ಮೇಳನವಾದ "ಇಂಡಿಯಾ ಗ್ಲೋಬಲ್ ಇನ್ನೊವೇಶನ್ ಕನೆಕ್ಟ್" ಅನ್ನು ಉದ್ಘಾಟಿಸಿದರು. ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ), ಕ್ಯಾಟಮರನ್ ವೆಂಚರ್ಸ್ ಮತ್ತು ಟಾಟಾ ಡಿಜಿಟಲ್‍ನೊಂದಿಗಿನ ಸಹಭಾಗಿತ್ವದಲ್ಲಿ ಸಮ್ಮೇಳನ ಆಯೋಜಿಸಿವೆ.
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸ್ಟಾರ್ಟ್ ಅಪ್ ಆವಿಷ್ಕಾರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಫಾರ್ಚೂನ್ 500 ಕಂಪನಿಗಳ ಪೈಕಿ 400 ಕಂಪನಿಗಳಿಗೆ ಬೆಂಗಳೂರು (Bengaluru) ನೆಲೆಯಾಗಿದೆ ಮತ್ತು ವಿಶ್ವದ ಯಾವುದೇ ದೇಶವು ಅಂತಹ ಕಂಪನಿಗಳನ್ನು ಹೊಂದಿಲ್ಲ. "ಸ್ಟಾರ್ಟಪ್ ಕರ್ನಾಟಕಕ್ಕೆ ಹೊಸದಲ್ಲ ಮತ್ತು ಕರ್ನಾಟಕವು ಅಗ್ರ ರಾಜ್ಯಗಳಲ್ಲಿ ಒಂದು ಮಾತ್ರವಾಗಿರದೇ ಸ್ಟಾರ್ಟಪ್‍ಗಳಿಗೆ ಅಗ್ರ ತಾಣವಾಗಿದೆ" ಎಂದು ಹೇಳಿದರು.
ನವೋದ್ಯಮಗಳಿಗೆ ಬೆಂಬಲ: "ಸ್ಟಾರ್ಟ್‍ಅಪ್‍ಗಳನ್ನು ಬೆಂಬಲಿಸುವಲ್ಲಿ ಕರ್ನಾಟಕ ಸರ್ಕಾರವು ಎಷ್ಟು ದೂರ ಬೇಕಾದರು ಹೋಗಲು ಸಿದ್ಧವಿದೆ. ನಾವು ಸ್ಪರ್ಧೆಯ ಬಗ್ಗೆ ಚಿಂತಿಸುವುದಿಲ್ಲ. ಇದು ನಮ್ಮನ್ನು ಮುಂದುವರಿಸುತ್ತದೆ ಮತ್ತು ಬೆಳೆಸುತ್ತದೆ. ನಾವು ಸ್ಪರ್ಧೆಯನ್ನು ವೇಗವರ್ಧಕವಾಗಿ ಪರಿವರ್ತಿಸುತ್ತೇವೆ" ಎಂದು ಎರಡು ದಿನಗಳ ಇಂಡಿಯಾ ಗ್ಲೋಬಲ್ ಇನ್ನೋವೇಶನ್ ಕನೆಕ್ಟ್ ಅಂತರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದ ನಂತರ ಸ್ಮಡ್ಜ್ & ಸ್ಮಡ್ಜ್ ಅಡ್ವೈಸರಿಯ ಅಧ್ಯಕ್ಷ ಕ್ಲೌಡ್ ಸ್ಮಾಡ್ಜಾ ಅವರ ಜತೆ ನಡೆಸಿದ ಸಂವಾದದ ವೇಳೆ ಹೇಳಿದರು.
ಇದನ್ನೂ ಓದಿ: ಶರಾವತಿಯಲ್ಲಿ 5,000 ಕೋ.ರು. ವೆಚ್ಚದ ಸೋಲಾರ್ ಸ್ಟೋರೆಜ್: ಸಿಎಂ ಬೊಮ್ಮಾಯಿ
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ), ಐ.ಜಿ.ಐ.ಸಿ.ಯ ಸ್ಟ್ರಾಟಜಿಕ್ ಪಾಲುದಾರ ಸಂಸ್ಥೆಯಾಗಿ ತೊಡಗಿಸಿಕೊಂಡಿದೆ. ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಆವಿಷ್ಕಾರ ಮತ್ತು ಉದ್ಯಮಶೀಲತೆಯ ಕ್ರಿಯಾತ್ಮಕ ಕೇಂದ್ರವಾಗಿ ಕರ್ನಾಟಕದ ಪ್ರೊಫೈಲ್ ಹೆಚ್ಚಿಸಲು ಕೊಡುಗೆ ನೀಡುವ ಮೂಲಕ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಈ ಕಾರ್ಯಕ್ರಮದಲ್ಲಿ ಅವಿಭಾಜ್ಯ ಪಾತ್ರ ವಹಿಸಿದೆ.
ಈ ಕುರಿತು ಮಾತನಾಡಿರುವ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ನ ಅಧ್ಯಕ್ಷರಾದ ಶ್ರೀ ಬಿ.ವಿ.ನಾಯ್ಡು ಅವರು, "ಕೆಡಿಇಎಂ ಪ್ರಾರಂಭದಿಂದಲೂ ಕರ್ನಾಟಕವನ್ನು ಇನ್ನೋವೇಷನ್ ಮತ್ತು ಟೆಕ್ನಾಲಜಿಯ ಜಾಗತಿಕ ಕೇಂದ್ರವಾಗಿ ಸ್ಥಾಪಿಸಲು ಅವಿರತವಾಗಿ ಶ್ರಮಿಸುತ್ತಿದೆ. ದೇಶದ ಅಭಿವೃದ್ಧಿ ಮತ್ತು ಡಿಜಿಟಲ್ ಆರ್ಥಿಕತೆಗೆ ಕೊಡುಗೆ ನೀಡಬಲ್ಲ ನವ ಉದ್ಯಮಗಳಿಗೆ ಉತ್ತಮ ವೇದಿಕೆಯನ್ನು ರಚಿಸಲು ನೀತಿ ನಿರೂಪಕರು ಮತ್ತು ಉದ್ಯಮದ ನಡುವೆ ಸೇತುವೆಯನ್ನು ನಿರ್ಮಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದರು.
ದೇಶದಲ್ಲೇ ಸ್ಟಾರ್ಟ್ ಅಪ್ ನೀತಿಯನ್ನು ಪರಿಚಯಿಸಿದ ಮೊದಲ ರಾಜ್ಯ ಕರ್ನಾಟಕ ಎಂದು ಹೇಳಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲೇ ಕೈಗಾರಿಕೀಕರಣ, ಬ್ಯಾಂಕಿಂಗ್ ಮತ್ತು ಅನುಶೋಧನೆಯನ್ನು ಬೆಂಬಲಿಸಿದ ಮೈಸೂರು ಮಹಾರಾಜರು ಸ್ಟಾರ್ಟ್ ಅಪ್ ಕ್ರಾಂತಿಯ ಬೀಜಗಳನ್ನು ಬಿತ್ತಿದರು ಎಂದು ಬಣ್ಣಿಸಿದರು.
ಇದನ್ನೂ ಓದಿ: ಮಂಗಳೂರಿಗೆ ಫರ್ನೀಚರ್ ಕ್ಲಸ್ಟರ್, ಕಾರ್ಕಳಕ್ಕೆ ಶಿಲ್ಪಕಲೆ ಕ್ಲಸ್ಟರ್: ಬೊಮ್ಮಾಯಿ ಘೋಷಣೆ
ಉದ್ಘಾಟನಾ ಸಮಾರಂಭದಲ್ಲಿ ಸಿಂಗಾಪುರ, ಇಸ್ರೇಲ್, ಸ್ವಿಡ್ಜಲೆರ್ಂಡ್, ಯುಎಸ್, ಜಪಾನ್, ಕೊರಿಯಾ ಮತ್ತು ಜರ್ಮನಿಯ ಅಂತರರಾಷ್ಟ್ರೀಯ ಹೂಡಿಕೆದಾರರು, ಖಾಸಗಿ ಈಕ್ವಿಟಿ ಸಂಸ್ಥೆಗಳು, ಉದ್ಯಮಿಗಳು ಮತ್ತು ಅನುಶೋಧಕರು ಭಾಗವಹಿಸಿದ್ದರು. ಸಮಾರಂಭದಲ್ಲಿ ಹಾಜರಿದ್ದ ಕೆಲ ಪ್ರಮುಖರೆಂದರೆ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಧ್ಯಕ್ಷ ಶ್ರೀ ಬಿ ವಿ ನಾಯ್ಡು, ಕ್ಯಾಟಮಾರನ್ ವೆಂಚರ್ಸ್ ಅಧ್ಯಕ್ಷ ಶ್ರೀ ರಂಗನಾಥ್ ಎಮ್ ಡಿ, ಆಕ್ಸೆಲ್ ಪಾಟ್ರ್ನರ್ಸ್, ಇಂಡಿಯಾದ ಪ್ರಶಾಂತ್ ಪ್ರಕಾಶ್ ಮತ್ತು ಬಿಗ್ ಬಾಸ್ಕೆಟ್, ಇಂಡಿಯಾದ ಸಹ- ಸಂಸ್ಥಾಪಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿ ಮೆನನ್ ಉಪಸ್ತಿತರಿದ್ದರು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸ್ಮಡ್ಜಾ & ಸ್ಮಡ್ಜಾ ಅಧ್ಯಕ್ಷ ಕ್ಲೌಡ್ ಸ್ಮಾಡ್ಜಾ, "ಭಾರತವು ಯಾವಾಗಲೂ ನನಗೆ ಉತ್ತಮ ಉದ್ಯಮಶೀಲ ಭರವಸೆಯ ದೇಶವಾಗಿದೆ. 4 ನೇ ಕೈಗಾರಿಕಾ ವಿಕಾಸವು ಪ್ರಾರಂಭವಾದಂತೆ, ಭಾರತವು ವಿಶೇಷವಾಗಿ ತನಗೆ ಮತ್ತು ಜಗತ್ತಿಗೆ ಪರಿಹಾರಗಳನ್ನು ಆವಿಷ್ಕರಿಸುವ ಸಾಮಥ್ರ್ಯದೊಂದಿಗೆ ವೇಗವರ್ಧಕದ ಪಾತ್ರವನ್ನು ವಹಿಸುತ್ತದೆ ಎಂದು ಒಪ್ಪಿಕೊಳ್ಳುವುದು ಸೂಕ್ತವಾಗಿದೆ" ಎಂದರು
"ಭಾರತವು ಈಗ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್- ಅಪ್ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಇದರ ಪರಿಣಾಮವಾಗಿ, ಇಂಡಿಯಾ ಗ್ಲೋಬಲ್ ಇನ್ನೋವೇಶನ್ ಕನೆಕ್ಟ್ ಭಾರತದ ಸ್ಟಾರ್ಟ್- ಅಪ್ ಮತ್ತು ಅನುಶೋಧನೆಯ ಕಥೆಯು ಹೇಗೆ ಜಾಗತಿಕವಾಗುತ್ತಿದೆ ಎಂಬುದರ ಸಾಮಥ್ರ್ಯವನ್ನು ಇದು ಎತ್ತಿ ತೋರಿಸುತ್ತದೆ. ಪ್ರಪಂಚದ ಹೊಸ ಸಿಲಿಕಾನ್ ವ್ಯಾಲಿಯಾಗಿ ಹೊರಹೊಮ್ಮುವುದು ಉತ್ತಮ, ಸುರಕ್ಷಿತ ಮತ್ತು ಬಲವಾದ ನಾಳೆಗೆ ಕಾರಣವಾಗುತ್ತದೆ" ಎಂದು ಕ್ಲೌಡ್ ಸ್ಮಾಡ್ಜಾ ಬಣ್ಣಿಸಿದರು.
ಬೆಂಗಳೂರಿನ ಹೋಟೆಲ್ ಕಾನ್ರಾಡ್‍ನಲ್ಲಿ ನಡೆಯುತ್ತಿರುವ 2 ದಿನಗಳ ಈ ಸಮ್ಮೇಳನದಲ್ಲಿ ಭಾರತ ಮತ್ತು ಸಿಂಗಾಪುರ, ಇಸ್ರೇಲ್, ಸ್ವಿಡ್ಜಲೆರ್ಂಡ್, ಅಮೆರಿಕ, ಜಪಾನ್, ಕೊರಿಯಾ ಮತ್ತು ಜರ್ಮನಿಯಂತಹ ದೇಶಗಳಿಂದ ಆಗಮಿಸಿದ 100 ಕ್ಕೂ ಹೆಚ್ಚು ಭಾಷಣಕಾರರು ಭಾಗವಹಿಸುತ್ತಿದ್ದಾರೆ. 22 ಅಧಿವೇಶನಗಳಲ್ಲಿ ಪ್ಯಾನೆಲಿಸ್ಟ್‍ಗಳು ತಾಂತ್ರಿಕ ಪಾಲುದಾರಿಕೆಗಳು, ಗ್ರೀನ್‍ಟೆಕ್, ಫಿನ್‍ಟೆಕ್, ಡೀಪ್‍ಟೆಕ್, ಎಡ್‍ಟೆಕ್, ವೆಬ್ 3.0, ಸೂಪರ್ ಆ್ಯಪ್‍ಗಳು ಮತ್ತು ಯುನಿಕಾರ್ನ್ ಗ್ರೋತ್ ಕಥೆಗಳು ಮತ್ತು ಪಾಲುದಾರಿಕೆಗಳ ಕುರಿತು ವಿಚಾರಗಳನ್ನು ಕೇಂದ್ರೀಕರಿಸುತ್ತಾರೆ.
ಇದನ್ನೂ ಓದಿ: ಕರ್ನಾಟಕವನ್ನು ನಂ.1 ಮಾಡುವೆ: ಸಿಎಂ ಬೊಮ್ಮಾಯಿ