ಶರಾವತಿಯಲ್ಲಿ 5,000 ಕೋ.ರು. ವೆಚ್ಚದ ಸೋಲಾರ್ ಸ್ಟೋರೆಜ್: ಸಿಎಂ ಬೊಮ್ಮಾಯಿ
* ಗ್ರೀನ್ ಎನರ್ಜಿ- ಕ್ಲೀನ್ ಎನರ್ಜಿಗೆ ಕರೆ ನೀಡಿದ ಪ್ರಧಾನಿ ಮೋದಿ
* ವಿಶ್ವದ ಅತಿ ಹೆಚ್ಚ ಸ್ಟಾರ್ಚ್‌ಅಪ್ ಕಂಪನಿಗಳು ಭಾರತದಲ್ಲಿವೆ
* 2024ರಲ್ಲಿ ಕರ್ನಾಟಕದ ಎಲ್ಲ ಮನೆಗೆ ಕುಡಿಯುವ ನೀರು ಪೂರೈಕೆ
ಉಡುಪಿ(ಜೂ.02): ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಯಶಸ್ವಿ 8 ವರ್ಷಗಳನ್ನು ಪೂರೈಸಿರುವ ಈ ಸಂದರ್ಭದಲ್ಲಿ ಸೌರ ಶಕ್ತಿ ಬಳಕೆ ಹೆಚ್ಚಿಸಲು ಕರೆ ನೀಡಿದ್ದು, ಅದರಂತೆ ಶರಾವತಿ ನದಿ ಪ್ರದೇಶದಲ್ಲಿ 5,000 ಕೋಟಿ ರು. ವೆಚ್ಚದಲ್ಲಿ ಸೋಲಾರ್ ಸ್ಟೋರೆಜ್ ನಿರ್ಮಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಬುಧವಾರ ಮಣಿಪಾಲದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ 8 ವರ್ಷಗಳ ಸಾಧನೆಯ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಇಂಧನ ಕ್ಷೇತ್ರದಲ್ಲಿ ಭಾರತವು ಆತ್ಮನಿರ್ಭರತೆಯನ್ನು ಸಾಧಿಸುವ ಉದ್ದೇಶದಿಂದ ಮೋದಿ ಅವರು ಗ್ರೀನ್ ಎನರ್ಜಿ- ಕ್ಲೀನ್ ಎನರ್ಜಿಗೆ ಕರೆ ನೀಡಿದ್ದು, ರಾಜ್ಯದ ಕರಾವಳಿಯಲ್ಲಿ ಸಮುದ್ರದ ನೀರನ್ನು ಬಳಕೆ ಮಾಡಿ ಅಮೋನಿಯಂ ತಯಾರಿಸಿ, ಅದರಿಂದ ವಿದ್ಯುತ್ ಉತ್ಪಾದಿಸುವ ಚಿಂತನೆ ನಡೆಸಲಾಗಿದೆ. ಇದು ಕಾರ್ಯಗತವಾದರೆ ಕರಾವಳಿಯ ಈ ಬಹುದೊಡ್ಡ ಯೋಜನೆಯು ದೇಶದ ಆರ್ಥಿಕತೆಗೆ ಶಕ್ತಿ ತುಂಬಲಿದೆ ಎಂದು ಸಿಎಂ ಹೇಳಿದರು.
ಮಂಗಳೂರಿಗೆ ಫರ್ನೀಚರ್ ಕ್ಲಸ್ಟರ್, ಕಾರ್ಕಳಕ್ಕೆ ಶಿಲ್ಪಕಲೆ ಕ್ಲಸ್ಟರ್: ಬೊಮ್ಮಾಯಿ ಘೋಷಣೆ
ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ, ಕರ್ನಾಟಕವು ಶೇ.20ರಷ್ಟುಎಥೆನಾಲ್ ಬಳಕೆ ನಡೆಸುತ್ತಿದೆ. ದೇಶದಲ್ಲಿ ಅತಿ ಹೆಚ್ಚು ಎಥೆನಾಲ್ ಉತ್ಪಾದಿಸಿ ಬಳಸುವ ಮತ್ತು ಸರಬರಾಜು ಮಾಡುವ ರಾಜ್ಯ ಕರ್ನಾಟಕವಾಗಿದೆ ಎಂದವರು ಹೇಳಿದರು.
ಮೋದಿ ಅವರು ಅವರು ಮೊದಲು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷಣೆ ಮಾಡಿದರು. ನಂತರ ಇದಕ್ಕೆ ಸಬ್ ಕಾ ವಿಶ್ವಾಸ್ ಎಂಬ ಘೋಷಣೆಯನ್ನು ಸೇರಿಸಿದರು. ಈಗ ಸಬ್ ಕಾ ಪ್ರಯಾಸ್ ಎಂಬ ಘೋಷಣೆ ಸೇರಿಸಿದ್ದಾರೆ. ಜನರು ಸರ್ಕಾರದ ಯೋಜನೆಗಳ ಫಲಾನುಭವಿಗಳಾಗುವುದು ಮಾತ್ರವಲ್ಲ, ಈ ದೇಶದ ಅಭಿವೃದ್ಧಿಯಲ್ಲಿ ಪಾಲುದಾರರೂ ಆಗಬೇಕೆಂದು ಯೋಜನೆ ರೂಪಿಸುತ್ತಿದ್ದಾರೆ. ಅದಕ್ಕೆ ಕರ್ನಾಟಕವೂ ಕೈಜೋಡಿಸುತ್ತಿದೆ ಎಂದರು.
ಪ್ರತಿಯೊಬ್ಬರ ಮನೆಗೆ ಗಂಗೆಯನ್ನು ತಲುಪಿಸುತ್ತೇನೆ ಎನ್ನುವ ಸಾಹಸ ಇದುವರೆಗಿನ ಯಾವ ಪ್ರಧಾನಿಯಿಂದಾಗಿರಲಿಲ್ಲ. ಆದರೆ ಮೋದಿಯವರು ಘೋಷಣೆಯನ್ನು ಮಾಡಿದ್ದಲ್ಲದೆ ಅದರಲ್ಲಿ ಜಯ ಸಾಧಿಸಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಜಲಜೀವನ ಮಿಷನ್ ನಲ್ಲಿ 25 ಲಕ್ಷ ಮನೆಗಳಿಗೆ ಕುಡಿವ ನೀರಿನ ಸಂಪರ್ಕ ನೀಡಲಾಗಿದ್ದು, ಈ ವರ್ಷ 25 ಲಕ್ಷ ಮನೆಗೆ ಸಂಪರ್ಕ ನೀಡುವ ಗುರಿ ಹೊಂದಿದ್ದು, 2024ರಲ್ಲಿ ಕರ್ನಾಟಕದ ಎಲ್ಲ ಮನೆಗೆ ಕುಡಿಯುವ ನೀರು ಪೂರೈಕೆಯಾಗುವಂತೆ ಯೋಜನೆ ರೂಪಿಸಲಾಗಿದೆ ಎಂದರು.
ಸಮುದ್ರ ನೀರಿನಿಂದ ವಿದ್ಯುತ್ ಉತ್ಪಾದನೆ: ಸಿಎಂ ಬೊಮ್ಮಾಯಿ!
ವಿಶ್ವದಲ್ಲಿ ಅತಿ ಹೆಚ್ಚ ಸ್ಟಾರ್ಚ್‌ಅಪ್ ಕಂಪನಿಗಳು ಭಾರತದಲ್ಲಿದ್ದು, ಕರ್ನಾಟಕದಲ್ಲಿ ಹೆಚ್ಚು ಸ್ಟಾರ್ಚ್‌ಅಪ್ ಸಂಸ್ಥೆಗಳಿವೆ. ಈ ಯೋಜನೆಯನ್ನು ಮೀನುಗಾರಿಕೆ ಮತ್ತು ನೇಕಾರರಿಗೆ ವಿಸ್ತರಣೆ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಜಾಗತಿಕ ಸ್ತರದ 4 ಸ್ಟಾರ್ಚ್‌ಅಪ್‌ಗಳೂ ಭಾರತದಲ್ಲಿದ್ದು, ಅದರಲ್ಲಿ 3 ಕರ್ನಾಟಕದವುಗಳಾಗಿವೆ ಎಂದು ಸಿಎಂ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಂದಾಯ ಸಚಿವ ಆರ್. ಅಶೋಕ್, ಇಂಧನ ಸಚಿವ ಸುನೀಲ್ ಕುಮಾರ್, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕಾ ಸಚಿವ ಎಸ್. ಅಂಗಾರ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ, ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹಾಜರಿದ್ದರು.