*  ಸ್ಮರ್ಧಾತ್ಮಕ ಪರೀಕ್ಷೆಗಾಗಿ ಹೊಸ ಯೋಜನೆ*  ಮೂಡುಬಿದಿರೆಯ ಆಳ್ವಾಸ್‌ ಕ್ಯಾಂಪಸ್‌ನಲ್ಲಿ ಸಿಎಂ ಘೋಷಣೆ*  12 ಸಾವಿರ ವಿದ್ಯಾನಿಧಿ ಯೋಜನೆ ಫಲಾನುಭವಿ ವಿದ್ಯಾರ್ಥಿಗಳ ಸಮ್ಮೇಳನ, ಸಿಎಂ ಸಂವಾದ 

ಮೂಡುಬಿದಿರೆ(ಜೂ.02): ನವ ಕರ್ನಾಟಕದ ಮೂಲಕ ನವಭಾರತದ ನಿರ್ಮಾಣಕ್ಕಾಗಿ ರಾಷ್ಟ್ರದಲ್ಲಿ ಕರ್ನಾಟಕವನ್ನು ನಂಬರ್‌ ವನ್‌ ರಾಜ್ಯವನ್ನಾಗಿಸುವ ಶಪಥ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಮಾರು 12 ಸಾವಿರ ವಿದ್ಯಾರ್ಥಿಗಳ ಸಮ್ಮುಖ ಘೋಷಿಸಿದ್ದಾರೆ. ಜತೆಗೆ, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ಮುಖ್ಯಮಂತ್ರಿ ಮಾರ್ಗದರ್ಶಿ ಮಾದರಿಯಲ್ಲೇ ಹೊಸ ತರಬೇತಿ ಯೋಜನೆ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ.

ದ.ಕ ಜಿಲ್ಲಾಡಳಿತದಿಂದ ವಿದ್ಯಾಗಿರಿಯ ನುಡಿಸಿರಿ ಸಭಾಂಗಣದಲ್ಲಿ ಬುಧವಾರ ಮುಖ್ಯಮಂತ್ರಿ ರೈತ ವಿದ್ಯಾನಿಧಿ ರೈತ ಕುಟುಂಬದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನ ಯೋಜನೆಯಡಿ ಜಿಲ್ಲೆಯ ಫಲಾನುಭವಿ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ಆಯ್ದ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ವೇಳೆ ಹಾಗೂ ನಂತರ ಮಾತನಾಡಿ ಈ ವಿಚಾರ ತಿಳಿಸಿದ್ದಾರೆ.

ಬೇರೆ ಪಕ್ಷಗಳಲ್ಲಿಯೂ ಸ್ನೇಹಿತರಿದ್ದಾರೆ, ರಾಜ್ಯಸಭೆ ಚುನಾವಣೆ ಗೆಲ್ತೇವೆ: ಸಿಎಂ ಬೊಮ್ಮಾಯಿ

ರೈತರ ಉಜ್ವಲ ಭವಿಷ್ಯಕ್ಕಾಗಿ ಆರಂಭಿಸಿದ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಇಷ್ಟೊಂದು ದೊಡ್ಡ ವಿದ್ಯಾರ್ಥಿ ಸಮೂಹವನ್ನು ಮೊದಲ ಬಾರಿಗೆ ಉದ್ದೇಶಿಸಿ ಮಾತನಾಡುವ ಅವಕಾಶ ಆಳ್ವಾಸ್‌ ಶಿಕ್ಷಣ ಸಂಸ್ಥೆ ಆವರಣದಲ್ಲಿ ದೊರೆತಿದೆ. ವಿದ್ಯಾರ್ಥಿಗಳು, ಯುವ ಸಮೂಹ ಮತ್ತು ರೈತರ ಶಕ್ತಿ ಸದ್ಬಳಕೆ ಮಾಡಿಕೊಂಡು ನಾಡನ್ನು ಇನ್ನಷ್ಟುಸದೃಢವಾಗಿ ಕಟ್ಟುವ, ಯುವಕರ ಭವಿಷ್ಯವನ್ನು ಉಜ್ವಲಗೊಳಿಸಿ ನವ ಕರ್ನಾಟಕದ ಮೂಲಕ ನವಭಾರತದ ನಿರ್ಮಾಣಕ್ಕೆ ಕೊಡುಗೆ ಸಲ್ಲಿಸುವ ಆಸೆಯಿದೆ. ಇದಕ್ಕಾಗಿ ದೇಶದಲ್ಲೇ ಕರ್ನಾಟಕವನ್ನು ನಂಬರ್‌ ವನ್‌ ರಾಜ್ಯವನ್ನಾಗಿಸುವ ಶಪಥ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಏರು ಧ್ವನಿಯಲ್ಲೇ ಘೋಷಿಸಿದರು.

ಇದಕ್ಕೂ ಮೊದಲು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಬೊಮ್ಮಾಯಿ ಅವರು, ಈಗಾಗಲೇ ಸಿಇಟಿ, ನೀಟ್‌ನಂಥ ಪರೀಕ್ಷೆಗಳಿಗೆ ತರಬೇತಿ ನೀಡಲು ಮುಖ್ಯಮಂತ್ರಿ ಮಾರ್ಗದರ್ಶಿ ಆ್ಯಪ್‌ ಇದೆ. ಈ ಯೋಜನೆಗೆ .10 ಕೋಟಿ ಮೀಸಲಿಡಲಾಗಿದ್ದು, ಬೈಜೂಸ್‌ ಜತೆ ಸೇರಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಇದೇ ರೀತಿ ನಾಗರಿಕ ಸೇವಾ ಪರೀಕ್ಷೆಗೂ ಅರ್ಹ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಪ್ರತ್ಯೇಕ ಯೋಜನೆ ರೂಪಿಸಲಾಗುವುದು ಎಂದು ಉತ್ತರಿಸಿದರು.
ರೈತರು ರಜೆ ಇಲ್ಲದೆ ದುಡಿಯುತ್ತಿದ್ದರೂ ಇತರೆ ಕ್ಷೇತ್ರದವರು ಹೆಚ್ಚು ಆದಾಯ ಗಳಿಸುವಂತೆ ರೈತರು ಗಳಿಸುತ್ತಿಲ್ಲ. ಕೃಷಿಕರು ಇದ್ದಲ್ಲೇ ಇರುತ್ತಾರೆ. ಆದ ಕಾರಣ ಅವರ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಾಲ್ಕೇ ಗಂಟೆಯಲ್ಲಿ ರೈತ ವಿದ್ಯಾರ್ಥಿ ನಿಧಿ ಯೋಜನೆಯನ್ನು ಘೋಷಿಸಿದ್ದೇನೆ ಎಂದರು.

ಬ್ಯಾರಿಕೇಡ್‌ ಹಾರಿದ ವಿದ್ಯಾರ್ಥಿ!

ಮಂಗಳೂರು ವಿವಿ ಘಟಕ ಕಾಲೇಜಿನಲ್ಲಿ ಓದುತ್ತಿರೋ ರಾಯಚೂರು ಮೂಲದ ವಿದ್ಯಾರ್ಥಿ ಶಂಕರ ಎಂಬಾತ ಸಿಎಂ ಜತೆ ಮಾತನಾಡಲು ಬ್ಯಾರಿಕೇಡ್‌ ಹಾರಿ ವೇದಿಕೆ ಮುಂಭಾಗಕ್ಕೆ ಆಗಮಿಸಿದ ವಿದ್ಯಮಾನ ನಡೆಯಿತು.

ಕಾರ್ಯಕ್ರಮಕ್ಕಾಗಮಿಸಿದ 12 ಸಾವಿರ ವಿದ್ಯಾರ್ಥಿಗಳ ಪೈಕಿ ಆಯ್ದ 12 ಮಂದಿಗೆ ಮಾತ್ರ ಸಿಎಂ ಜತೆ ಸಂವಾದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಅವರಾರ‍ಯರೂ ವಿದ್ಯಾನಿಧಿ ಪ್ರಯೋಜನ ಪಡೆದ ರೈತರ ಬಗ್ಗೆ ಮಾತನಾಡದ ಕಾರಣ ತನಗೂ ಸಿಎಂ ಜತೆ ಮಾತನಾಡಲು ಅವಕಾಶ ನೀಡಬೇಕೆಂದು ಪೊಲೀಸರಲ್ಲಿ, ಸಂಘಟಕರಲ್ಲಿ ಸಾಕಷ್ಟುಬಾರಿ ಶಂಕರ ವಿನಂತಿಸಿದ್ದ. ಅವಕಾಶ ಸಿಗದಾಗ, ಸಿಎಂ ಭಾಷಣ ಮುಗಿಸುತ್ತಿದ್ದಂತೆ ಬ್ಯಾರಿಕೇಡ್‌ ಜಿಗಿದು ಅಂಗಣಕ್ಕೆ ನುಗ್ಗಿದ. ಅಷ್ಟರಲ್ಲಿ ಪೊಲೀಸರು ಆತನನ್ನು ಹಿಡಿದು ಹೊರಗೆ ಕರೆದೊಯ್ದರು. ಸಮಾರಂಭ ಮುಗಿದ ಬಳಿಕ ಸಿಎಂ ಬಳಿಗೆ ಆತನನ್ನು ಪೊಲೀಸರೇ ಕರೆದುಕೊಂಡು ಹೋದರು. ಆಗ ಆತ, ನಾನೂ ಫಲಾನುಭವಿ. ಆದರೆ ನಾನು ಕಲಿತ ಬಳಿಕ ರೈತನಾಗುತ್ತೇನೆ ಎಂದು ಹೇಳಿದ್ದೇನೆ ಎಂದು ಬಳಿಕ ಸುದ್ದಿಗಾರರಲ್ಲಿ ಪ್ರತಿಕ್ರಿಯಿಸಿದ್ದಾನೆ.

Kuvempu Row; ರೋಹಿತ್ ಚಕ್ರತೀರ್ಥ ಪದಚ್ಯುತಿಗೆ ಗಣ್ಯರಿಂದ ಸಿಎಂ ಮೇಲೆ ಒತ್ತಡ

ರಾಜ್ಯದಲ್ಲೇ ಮೊದಲ ಬಾರಿ ಈ ಸಮಾವೇಶ: ಸಚಿವ ಸುನಿಲ್‌

ಮುಖ್ಯಮಂತ್ರಿಯವರ ಕನಸಿನ ಕಲ್ಪನೆಯ ರೈತ ವಿದ್ಯಾನಿಧಿ ಯೋಜನೆಯಲ್ಲಿ ಫಲಾನುಭವಿಗಳ ಪೈಕಿ ರಾಜ್ಯದಲ್ಲೇ ಮೊದಲ ಬಾರಿಗೆ ವಿದ್ಯಾರ್ಥಿಗಳೊಂದಿಗೆ ಸಿಎಂ ನಡೆಸುತ್ತಿರುವ ಈ ಸಂವಾದ ಕಾರ್ಯಕ್ರಮದಲ್ಲಿ ದ.ಕ ಜಿಲ್ಲೆಯಲ್ಲಿ ನಡೆದಿರುವುದು ವಿಶೇಷ. 22 ಸಾವಿರ ಮಂದಿ ಫಲಾನುಭವಿಗಳ ಪೈಕಿ ಜಿಲ್ಲೆಯ ವಿವಿಧ ಹಂತದ ಶಿಕ್ಷಣ ಸಂಸ್ಥೆಗಳ 12 ಸಾವಿರ ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡು ಯಶಸ್ಸಿಗೆ ಕಾರಣರಾಗಿದ್ದಾರೆ ಎಂದು ರಾಜ್ಯ ಇಂಧನ, ಕನ್ನಡ ಸಂಸ್ಕೃತಿ ಸಚಿವ ವಿ.ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ಸಂವಾದದಲ್ಲಿ ಸಿಎಂ ಹೇಳಿದ್ದು

- ಯುವ ಶಕ್ತಿಯ ಭವಿಷ್ಯದಲ್ಲಿ ದೇಶದ ಭವಿಷ್ಯ ಅಡಗಿದ್ದು ‘ನಮ್ಮ ಹಣೆ ಬರಹವನ್ನು ನಾವೇ ಬರೆಯುತ್ತೇವೆ’ ಎನ್ನುವ ಸಂಕಲ್ಪ ವಿದ್ಯಾರ್ಥಿಗಳದ್ದಾಗಬೇಕು. ಆಗ ಯಶಸ್ಸು ಹುಡುಕೊಂಡು ಬರುತ್ತದೆ.
-ಜಗತ್ತಿನ ಜನಸಂಖ್ಯೆ ಪೈಕಿ ಅತಿ ಹೆಚ್ಚು ಯುವಶಕ್ತಿಯ ಲಾಭ ಭಾರತಕ್ಕೆ ಇದೆ. ಇದನ್ನು ಪ್ರಧಾನಿ ಮೋದಿ ಕೂಡ ಹೇಳಿದ್ದಾರೆ. ನಮ್ಮ ದೇಶದ ಜನಸಂಖ್ಯೆಯ ಶೇ.46ರಷ್ಟು ಮಂದಿ 18ರಿಂದ 40 ವರ್ಷದವರು. ಯುವಜನರೆಂದರೆ ಶಕ್ತಿ, ಅವರೆಲ್ಲ ಸಹಸ್ರಾರು ವ್ಯಾಟ್‌ ಶಕ್ತಿ ಇದ್ದಂತೆ.