ನೆಟ್ ಬಳಸೋದ್ರಲ್ಲಿ ಭಾರತೀಯರು ಮುಂದಿದ್ದಾರೆ. ಇಡೀ ದಿನ ಸ್ಕ್ರೋಲಿಂಗ್, ವರ್ಕ್ ಅಂತ ಬ್ಯುಸಿ ಇರುವ ಜನರು, ಅಚ್ಚರಿ ಹುಟ್ಟಿಸುವಷ್ಟು ಡೇಟಾ ಖಾಲಿ ಮಾಡ್ತಿದ್ದಾರೆ. 

ಐದು ನಿಮಿಷ ಸೋಶಿಯಲ್ ಮೀಡಿಯಾ (Social media) ಸ್ಕ್ರೋಲ್ ಮಾಡೋಣ ಅಂತ ಕುಳಿತ್ರೆ ಕಥೆ ಮುಗಿತು. ಐದು ಹತ್ತಾಗಿ, 60 ಆದ್ರೂ ಎಚ್ಚರ ಇರೋದಿಲ್ಲ. ರೀಲ್ಸ್, ಶಾರ್ಟ್ಸ್, ಸಿನಿಮಾ, ಸಾಂಗ್, ಯುಟ್ಯೂಬ್ ವಿಡಿಯೋ, ವಾಟ್ಸ್ ಅಪ್ ಚಾಟ್ಸ್ ಅಂತ ಜನರು ಇಡೀ ದಿನ ಕೈನಲ್ಲಿ ಸ್ಮಾರ್ಟ್ಫೋನ್ ಹಿಡಿದಿರ್ತಾರೆ. ಇನ್ನು ಗೇಮ್ ಹುಚ್ಚಿಗೆ ಬಿದ್ದವರಿಗೆ ಸಮಯದ ಪರಿವೆ ಇರೋದೇ ಇಲ್ಲ. ಡೇಟಾ (data) ಖಾಲಿಯಾಗ್ಬೇಕೆ ಅಂದಿನ ಗೇಮ್ ಮುಗಿಬೇಕು. ಕೈನಲ್ಲಿ ಬರೀ ಸ್ಮಾರ್ಟ್ಫೋನ್ ಇದ್ರೆ ಸಾಕಾಗೋದಿಲ್ಲ. ಅದಕ್ಕೆ ತಿನ್ನಲು ಆಹಾರ ಹಾಕ್ತಾನೇ ಇರ್ಬೇಕು. ಅದ್ರ ಆಹಾರ ಇಂಟರ್ನೆಟ್ ಡೇಟಾ. ಈಗ ಸ್ಮಾರ್ಟ್ಫೋನ್ ಮತ್ತೆ ಇಂಟರ್ನೆಟ್ ಕೇವಲ ಹವ್ಯಾಸವಾಗಿ ಉಳಿದಿಲ್ಲ. ಅದು ನಮ್ಮ ಅಗತ್ಯವಾಗಿದೆ. ಇಡೀ ದಿನ ಮೊಬೈಲ್ ಬಳಸುವ ಜನರಿಗೆ ಸ್ವಲ್ಪ ಹೊತ್ತು ನೆಟ್ ಇಲ್ದೆ ಇರೋದಿಕ್ಕೆ ಆಗೋದಿಲ್ಲ. ಡೇಟಾ ಖಾಲಿಯಾದ ತಕ್ಷಣ ರಿಚಾರ್ಜ್ ಮಾಡಿಸಿಕೊಳ್ತಾರೆ. ಹಾಗಿದ್ರೆ ಭಾರತದಲ್ಲಿ ಒಬ್ಬ ವ್ಯಕ್ತಿ ತಿಂಗಳಿಗೆ ಎಷ್ಟು ಡೇಟಾ ಖರ್ಚು ಮಾಡ್ಬಹುದು. ಇದ್ರ ಬಗ್ಗೆ ನಿಮಗೇನಾದ್ರೂ ಐಡಿಯಾ ಇದ್ಯಾ?. ಇದ್ರ ಬಗ್ಗೆ ಬಂದ ವರದಿ ನಮ್ಮನ್ನು ಅಚ್ಚರಿಗೊಳಿಸುತ್ತೆ.

ವರದಿಯ ಪ್ರಕಾರ, ಭಾರತದಲ್ಲಿ ಒಬ್ಬ ಸ್ಮಾರ್ಟ್ಫೋನ್ ಬಳಕೆದಾರ ಪ್ರತಿ ತಿಂಗಳು ಸರಾಸರಿ 32GB ಡೇಟಾವನ್ನು ಬಳಸುತ್ತಿದ್ದಾನೆ. ಈ ಅಂಕಿ ಅಂಶ ದೇಶದಲ್ಲಿ ಇಂಟರ್ನೆಟ್ ಬಳಕೆ ಎಷ್ಟು ವೇಗವಾಗಿ ಹೆಚ್ಚಾಗ್ತಿದೆ ಅನ್ನೋದನ್ನು ನಮಗೆ ತೋರಿಸ್ತಿದೆ. ಅತಿ ಹೆಚ್ಚು ಡೇಟಾ ಬಳಸುವ ದೇಶದಲ್ಲಿ ಭಾರತ ಮುಂದಿದೆ.

ಭಾರತದಲ್ಲಿ 5G ನೆಟ್ವರ್ಕ್ ಅತ್ಯಂತ ವೇಗವಾಗಿ ಹರಡುತ್ತಿದೆ. 2030 ರ ವೇಳೆಗೆ ದೇಶದಲ್ಲಿ ಸುಮಾರು 98 ಕೋಟಿ ಜನರು 5G ಬಳಸುತ್ತಾರೆ ಅಂತ ವರದಿ ಅಂದಾಜಿಸಿದೆ. ಇದು ಪ್ರಸ್ತುತ 5G ಬಳಕೆದಾರರಿಗಿಂತ ಮೂರು ಪಟ್ಟು ಹೆಚ್ಚಾಗಿದೆ. ಇದಕ್ಕೆ ಪ್ರಮುಖ ಕಾರಣ ವೇಗದ ಇಂಟರ್ ನೆಟ್, ಅಗ್ಗದ ಡೇಟಾ ಪ್ಲಾನ್ ಮತ್ತು ಹಳ್ಳಿಗಳಿಗೆ ನೆಟ್ವರ್ಕ್ ವಿಸ್ತರಣೆ. ಒಂದ್ಕಡೆ 5G ಬಳಕೆದಾರರ ಸಂಖ್ಯೆ ಭಾರಿ ಏರಿಕೆಯಾಗ್ತಿದ್ದು, 4G ಬಳಕೆದಾರರ ಸಂಖ್ಯೆ ಸುಮಾರು ಶೇಕಡಾ 60 ರಷ್ಟು ಕಡಿಮೆಯಾಗುವ ಅಂದಾಜಿದೆ. ಅಂದರೆ, 2030 ರ ವೇಳೆಗೆ ಕೇವಲ 23 ಕೋಟಿ ಜನರು 4G ಬಳಸಲಿದ್ದಾರೆ.

ಸದ್ಯ ಒಬ್ಬ ವ್ಯಕ್ತಿ 32 ಜಿಬಿ ಡೇಟಾ ಬಳಸ್ತಿದ್ದಾನೆ. 2030 ರ ವೇಳೆಗೆ ಈ ಅಂಕಿ ಅಂಶ ತಿಂಗಳಿಗೆ ಪ್ರತಿ ವ್ಯಕ್ತಿಗೆ 62GB ಗೆ ಹೆಚ್ಚಾಗಬಹುದು ಎಂದು ವರದಿ ಹೇಳಿದೆ. ಈ ಮೊದಲು ಈ ಅಂದಾಜು 66GB ವರೆಗೆ ಇತ್ತು. ಆದ್ರೆ ಇತ್ತೀಚಿನ ವರದಿಯಲ್ಲಿ, ಅದರಲ್ಲಿ ಸ್ವಲ್ಪ ಬದಲಾವಣೆ ಮಾಡುವ ಮೂಲಕ ಅದನ್ನು ಶೇಕಡಾ 4 ರಷ್ಟು ಕಡಿಮೆ ಮಾಡಲಾಗಿದೆ.

ಡೇಟಾ ಬಳಕೆ ಹೆಚ್ಚಾಗಲು ಕಾರಣ ಏನು? : ಮೇಲೆ ಹೇಳಿದಂತೆ ಈಗ ಪ್ರತಿಯೊಬ್ಬರ ಕೈನಲ್ಲಿ ಸ್ಮಾರ್ಟ್ಫೋನ್ ಇದೆ. ಹಳ್ಳಿಗಳಲ್ಲಿ ಇಂಟರ್ ನೆಟ್ ಸೌಲಭ್ಯವಿದ್ದು, ಅಲ್ಲಿ ಜನರ ಬಳಕೆ ಹೆಚ್ಚಾಗಿದೆ. ಸ್ಮಾರ್ಟ್ ಫೋನ್ ಜೊತೆ ಪ್ರತಿಯೊಬ್ಬರೂ ಇಂಟರ್ ನೆಟ್ ಸಂಪರ್ಕ ಹೊಂದಿದ್ದಾರೆ. OTT ಪ್ಲಾಟ್ಫಾರ್ಮ್ಗಳಲ್ಲಿ ವೀಡಿಯೊ ನೋಡುವುದು ಸಾಮಾನ್ಯವಾಗಿದೆ. ಆನ್ಲೈನ್ ಗೇಮಿಂಗ್ ಹಾಗೂ ಅಪ್ಲಿಕೇಶನ್ ಸಂಖ್ಯೆ ಹೆಚ್ಚಾಗಿದೆ. ಮನೆಯಿಂದಲೇ ಕೆಲಸ ಮಾಡುವವರು, ಆನ್ಲೈನ್ ಕ್ಲಾಸ್ ಗೆ ಡೇಟಾ ಅಗತ್ಯವಿದೆ. 5G ಬಂದ್ಮೇಲೆ ಇಂಟರ್ನೆಟ್ ಇನ್ನಷ್ಟು ವೇಗವಾಗಿದ್ದು, ಜನರು ಸುಲಭವಾಗಿ ಡೇಟಾ ಖರ್ಚು ಮಾಡ್ತಿದ್ದಾರೆ.