ನವದೆಹಲಿ(ಜೂನ್.2):  ವೋಡಾಫೋನ್ ಟಿಲಿಕಾಮ್ ಜೊತೆಗೆ ವಿಲೀನವಾಗಿರುವ ಭಾರತದ ಪ್ರಮುಖ ಟೆಲಿಕಾಮ್ ಸಂಸ್ಥೆ ಐಡಿಯಾ ಸೆಲ್ಯುಲರ್ ಇದೀಗ ತನ್ನ ಹೆಸರನ್ನ ಬದಲಿಸಲಿದೆ. ಜೂನ್ 26 ರಂದು ಐಡಿಯಾ ಟೆಲಿಕಾಮ್ ಸಂಸ್ಥೆಯ ಇಜಿಎಮ್ ಮೀಟಿಂಗ್‌ನಲ್ಲಿ ಐಡಿಯಾ ಹೆಸರನ್ನ ಬದಲಿಸಿ, ವೋಡಾಫೋನ್ ಐಡಿಯಾ ಲಿಮಿಟೆಡ್ ಎಂದು ಅಧೀಕೃತವಾಗಿ ಘೋಷಿಸಲಿದೆ. ಕಳೆದ ಎಪ್ರಿಲ್‌ನಿಂದ ವೋಡಾಫೋನ್ ಜೊತೆ ಐಡಿಯಾ ಸಂಸ್ಥೆ ವಿಲೀನವಾಗಿತ್ತು. ಆದರೆ ಹೆಸರು ಮಾತ್ರ ಬದಲಾಗಿರಲಿಲ್ಲ. 

ವೋಡಾಫೋನ್ ಹಾಗೂ ಐಡಿಯಾ ಸಂಸ್ಥೆಗಳ ವಿಲೀನದಿಂದ ಭಾರತದಲ್ಲಿ ನಂಬರ್.1 ಮೊಬೈಲ್ ನೆಟ್‌ವರ್ಕ್ ಹೆಗ್ಗಳಿಕೆ ಇದೀಗ ವೋಡಾಫೋನ್ ಇಡಿಯಾ ಸಂಸ್ಥೆ ಪಾಲಾಗಲಿದೆ. ಭಾರತದ ಟೆಲಿಕಾಮ್ ಮಾರುಕಟ್ಟೆಯಲ್ಲಿ ವೋಡಾಫೋನ್ ಶೇಕಡಾ 23 ರಷ್ಟು ಪಾಲು ಹೊಂದಿದೆ. ಇನ್ನು ಐಡಿಯಾ ಶೇಕಡಾ 19ರಷ್ಟು ಪಾಲು ಹೊಂದಿದೆ.  ಈ ಎರಡು ಸಂಸ್ಥೆಗಳ ವಿಲೀನದಿಂದ ಭಾರತದ ಮಾರುಕಟ್ಟೆಯಲ್ಲಿ ಶೇಕಡಾ 43ರಷ್ಟು ಪಾಲು ಹೊಂದಲಿದೆ. ಈ ಮೂಲಕ ಟೆಲಿಕಾಮ್ ಮಾರುಕಟ್ಟೆಯಲ್ಲಿ ಶೇಕಡಾ 33 ರಷ್ಟು ಪಾಲುಹೊಂದಿರುವ ಭಾರತದ ಅತೀ ದೊಡ್ಡ ನೆಟ್‌ವರ್ಕ್ ಆಗಿರುವ ಭಾರ್ತಿ ಎರ್ಟೆಲ್ 2ನೇ ಸ್ಥಾನಕ್ಕೆ ಕುಸಿಯಲಿದೆ. ಇಷ್ಟೇ ಅಲ್ಲ ವಿಲೀನದಿಂದ ವೋಡಾಫೋನ್ ಇಡಿಯಾ ಸಂಸ್ಥೆಯ ವಹಿವಾಟು 154 ಕೋಟಿ 8 ಲಕ್ಷದ 96 ಸಾವಿರದ 500 ರೂಪಾಯಿಗೆ ಹೆಚ್ಚಾಗಲಿದೆ. ಈ ಎರಡು ಸಂಸ್ಥೆಗಳ ವಿಲೀನದಿಂದ ಆಫರ್ ಮೇಲೆ ಆಫರ್ ನೀಡುತ್ತಿದ್ದ ರಿಲಾಯನ್ಸ್ ಜಿಯೋ ಸಂಸ್ಥೆಗೂ ಇದೀಗ ಹೊಡೆತ ಬೀಳಲಿದೆ.