ತಾಂತ್ರಿಕ ಕಾರಣಗಳಿಂದ ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ಆ್ಯಪ್‌ಗಳನ್ನು ಡಿಲೀಟ್ ಮಾಡೋದು ನಾವು ನೋಡುತ್ತಾ ಬಂದಿರುವ ವಿಚಾರ. ಆದ್ರೆ ಇದೀಗ ‘ಡಿಫರೆಂಟ್’ ಕಾರಣವೊಂದರಿಂದ ಆ್ಯಪನ್ನು ತೆಗೆದು ಹಾಕಲಾಗಿದೆ. ಮಾನವ ಹಕ್ಕುಗಳ ಹೋರಾಟಗಾರರ ಪ್ರತಿಭಟನೆಗೆ ಗೂಗಲ್ ಕೊನೆಗೂ ಮಣಿದಿದೆ. ತನ್ನ ಪ್ಲೇ ಸ್ಟೋರ್ ನಲ್ಲಿದ್ದ ‘ವಿವಾದಾತ್ಮಕ’ ಆ್ಯಪನ್ನು ಗೂಗಲ್ ಇದೀಗ ತೆಗೆದು ಹಾಕಿದೆ.

ಧಾರ್ಮಿಕ ಸಂಸ್ಥೆಯೊಂದು ಬಿಡುಗಡೆ ಮಾಡಿದ್ದ ‘ಗೇ ಕನ್ವರ್ಶನ್‘ ಆ್ಯಪ್ ವಿರುದ್ಧ  ಸಲಿಂಗಿ ಹಕ್ಕು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲಿ ಗೂಗಲ್ ಈ ಕ್ರಮ ಕೈಗೊಂಡಿದೆ.

ವಿವಾದಾತ್ಮಕ ಆ್ಯಪನ್ನು ಅಮೆಜಾನ್ ಮತ್ತು ಆ್ಯಪಲ್ ಕಂಪನಿಗಳು ಕಳೆದ ವರ್ಷವೇ ತಮ್ಮ ಪ್ಲೇಸ್ಟೋರ್‌ನಿಂದ ತೆಗೆದು ಹಾಕಿದ್ದುವು. ಆದರೆ ಸಾಫ್ಟ್‌ವೇರ್ ದೈತ್ಯ ಗೂಗಲ್ ಆ್ಯಪನ್ನು ಅಳಿಸಿ ಹಾಕಲು ನಿರಾಕರಿಸಿತ್ತು. 

ಇದನ್ನೂ ಓದಿ: ವಾಟ್ಸಪ್ ಫೀಚರ್‌ನಲ್ಲಿ ಮಹತ್ವದ ಬದಲಾವಣೆ; 2 ಹೊಸ ಸೌಲಭ್ಯಗಳು

ಅದಾದ ಬಳಿಕ ಸಲಿಂಗಿ ಹೋರಾಟಗಾರರು ಮತ್ತು ಮಾನವ ಹಕ್ಕು ಕಾರ್ಯಕರ್ತರು ಇಂಟರ್ನೆಟ್‌ನಲ್ಲಿ ಗೂಗಲ್ ವಿರುದ್ಧ ಅಭಿಯಾನವನ್ನೇ ಆರಂಭಿಸಿದ್ದರು. ಸಹಿ ಅಭಿಯಾನವನ್ನೇ ನಡೆಸಿದ್ದರು.

‘ಗೇ ಕನ್ವರ್ಶನ್‘ ಆ್ಯಪ್ ಎಂಬೋದು ಕನ್ವರ್ಶನ್ ಥಿರಪಿ [ಪರಿವರ್ತನಾ ಚಿಕಿತ್ಸೆ] ಬಗ್ಗೆ ಕಾರ್ಯಾಚರಿಸುತಿತ್ತು.  ವ್ಯಕ್ತಿಯ ಸಲಿಂಗೀಯ ಲೈಂಗಿಕತೆಯನ್ನು ಪರಿವರ್ತಿಸಿ ಅದನ್ನು ಸರಿಪಡಿಸಬಹುದೆಂದು ಆ ಆ್ಯಪ್ ವಾದವಾಗಿತ್ತು. 

ಇದನ್ನೂ ಓದಿ: ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಕ್ರಾಂತಿ; Samsung ತರಲಿದೆ ಹೊಸ ಮೊಬೈಲ್ ಜಾತಿ!

ಗೂಗಲ್ ಈ ರೀತಿ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ಅಳಿಸಿ ಹಾಕುತ್ತಿರುವುದು ಇದೇ ಮೊದಲೇನಲ್ಲ. ಮಾಲ್‌ವೇರ್ ಅಥವಾ ಬಳಕೆದಾರರ ಸುರಕ್ಷತೆಗೆ ಮಾರಕವಾಗಿರುವ ಆ್ಯಪ್‌ಗಳನ್ನು ಆಗ್ಗಾಗ ಪ್ಲೇ ಸ್ಟೋರ್‌ನಿಂದ ಕೈಬಿಡುತ್ತದೆ.