ನವದೆಹಲಿ (ನ. 20): ಮೊಬೈಲ್‌ ದೂರವಾಣಿ ಸೇವಾದಾರ ಕಂಪನಿಗಳಾದ ಏರ್‌ಟೆಲ್‌ ಹಾಗೂ ವೊಡಾಫೋನ್‌ಗಳು ಡಿಸೆಂಬರ್‌ನಿಂದ ದರ ಏರಿಕೆ ಮಾಡುವ ಘೋಷಣೆ ಮಾಡಿದ ಬೆನ್ನಲ್ಲೇ ‘ರಿಲಯನ್ಸ್‌ ಜಿಯೋ’ ಕೂಡ ಅದೇ ಹಾದಿ ಹಿಡಿದಿದೆ. ಕೆಲವು ವಾರಗಳಲ್ಲಿ ತಾನೂ ಕರೆ ಹಾಗೂ ಡಾಟಾ ದರ ಏರಿಕೆ ಮಾಡುವುದಾಗಿ ಮುಕೇಶ್‌ ಅಂಬಾನಿ ಮಾಲೀಕತ್ವದ ಜಿಯೋ ಮಂಗಳವಾರ ಘೋಷಣೆ ಮಾಡಿದೆ.

‘ಇತರ ಸೇವಾದಾರ ಕಂಪನಿಗಳಂತೆ ನಾವು ಕೂಡ ಭಾರತೀಯ ಮೊಬೈಲ್‌ ಬಳಕೆದಾರರ ಲಾಭಕ್ಕಾಗಿ ಹಾಗೂ ದೂರವಾಣಿ ವಲಯದ ಬಲವರ್ಧನೆಗಾಗಿ ಸರ್ಕಾರಕ್ಕೆ ಹಾಗೂ ನಿಯಂತ್ರಣ ವ್ಯವಸ್ಥೆಗೆ ಸಹಯೋಗ ನೀಡುತ್ತೇವೆ. ಹೀಗಾಗಿ ಮುಂದಿನ ಕೆಲವು ವಾರಗಳಲ್ಲಿ ಡಾಟಾ ಬಳಕೆ ಅಥವಾ ಡಿಜಿಟಲ್‌ ಅಳವಡಿಕೆ ಮೇಲೆ ದುಷ್ಪರಿಣಾಮ ಉಂಟಾಗದಂತೆ ಸೂಕ್ತ ರೀತಿಯಲ್ಲಿ ದರ ಏರಿಕೆ ಮಾಡುತ್ತೇವೆ’ ಎಂದು ಜಿಯೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಟೆಲಿಕಾಂ ಕಂಪೆನಿಗಳ ಮಹತ್ವದ ಘೋಷಣೆ: ಡಿಸೆಂಬರ್‌ನಿಂದ ಮೊಬೈಲ್‌ ಭಾರೀ ದುಬಾರಿ!

ಅಲ್ಲದೆ, ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ‘ಟ್ರಾಯ್‌’ ದೂರವಾಣಿ ದರಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಕಂಪನಿಗಳ ಜತೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದೂ ಜಿಯೋ ಹೇಳಿದೆ.

ಸ್ಥಾಪನೆಯ ಬಳಿಕ ಅತ್ಯಂತ ಕಡಿಮೆ ದರಗಳೊಂದಿಗೆ ಗ್ರಾಹಕರನ್ನು ಆಕರ್ಷಿಸಿದ್ದ ಜಿಯೋದಿಂದ ವೊಡಾಫೋನ್‌ ಹಾಗೂ ಏರ್‌ಟೆಲ್‌ಗಳು ತುಂಬಾ ಹೊಡೆತ ತಿಂದಿದ್ದವು. ಅವುಗಳು ಈಗ ದರ ಏರಿಕೆ ಮಾಡುವ ಘೋಷಣೆ ಮಾಡಿರುವುದು ಜಿಯೋಗೆ ಕೂಡ ವರದಾನ ಎಂದು ಹೇಳಲಾಗಿದೆ. ಇದೇ ಸಂದರ್ಭವನ್ನು ಬಳಸಿಕೊಂಡು ಕರೆ ಹಾಗೂ ಡಾಟಾ ದರ ಹೆಚ್ಚಿಸಲು ಜಿಯೋಗೆ ಇದು ಸಕಾಲ ಎಂದು ಮಾರುಕಟ್ಟೆತಜ್ಞರು ವಿಶ್ಲೇಷಿಸಿದ್ದಾರೆ.

ಜಿಯೋ, ಬಿಎಸ್ಸೆನ್ನೆಲ್‌ ಗ್ರಾಹಕರ ಸಂಖ್ಯೆ ಏರಿಕೆ:

ಸೆಪ್ಟೆಂಬರ್‌ ತಿಂಗಳಲ್ಲಿ ಏರ್‌ಟೆಲ್‌ ಹಾಗೂ ವೊಡಾಫೋನ್‌ಗಳು 49 ಲಕ್ಷ ಚಂದಾದಾರರನ್ನು ಕಳೆದುಕೊಂಡಿವೆ. ಇದರಲ್ಲಿ ಏರ್‌ಟೆಲ್‌ ಪಾಲು 23.8 ಲಕ್ಷ ಹಾಗೂ ವೊಡಾಫೋನ್‌ 25.7 ಲಕ್ಷ.

ಆದರೆ ಜಿಯೋ ಹಾಗೂ ಬಿಎಸ್ಸೆನ್ನೆಲ್‌ ಚೇತರಿಸಿಕೊಂಡಿವೆ. ಜಿಯೋಗೆ 69.83 ಲಕ್ಷ ಹೊಸ ಚಂದಾದಾರರು ಈ ತಿಂಗಳು ಸೇರ್ಪಡೆಯಾದರೆ, ಬಿಎಸ್ಸೆನ್ನೆಲ್‌ಗೆ 7.37 ಲಕ್ಷ ಹೊಸ ಗ್ರಾಹಕರು ಸೇರಿದ್ದಾರೆ.

ಸೆಪ್ಟೆಂಬರ್‌ 30ರ ಅಂಕಿ ಅಂಶಗಳ ಪ್ರಕಾರ ವೊಡಾಫೋನ್‌ 37.24 ಕೋಟಿ, ರಿಲಯನ್ಸ್‌ ಜಿಯೋ 35.52 ಕೋಟಿ, ಏರ್‌ಟೆಲ್‌ 32.55 ಕೋಟಿ, ಬಿಎಸ್‌ಎನ್‌ಎಲ್‌ 11.69 ಕೋಟಿ ಹಾಗೂ ಎಂಟಿಎನ್‌ಎಲ್‌ 33.93 ಲಕ್ಷ ಗ್ರಾಹಕರನ್ನು ಹೊಂದಿವೆ ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಟ್ರಾಯ್‌ ಹೇಳಿದೆ.