ಭಾರತದಲ್ಲಿ ಸ್ಟಾರ್‌ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ ಸೇವೆ ಆರಂಭಿಸಲು ಅಡ್ಡಿಪಡಿಸುತ್ತಿರುವ ಪ್ರಭಾವಿ ಉದ್ಯಮಿಗಳ ವಿರುದ್ಧ ಎಲೋನ್ ಮಸ್ಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಕಸ್ವಾಮ್ಯ ಉಳಿಸಿಕೊಳ್ಳಲು ಗ್ರಾಮೀಣ ಜನರಿಗೆ ಹೈ-ಸ್ಪೀಡ್ ಇಂಟರ್ನೆಟ್ ತಲುಪದಂತೆ ತಡೆಯುತ್ತಿರುವುದು ದೊಡ್ಡ ಅಪರಾಧ ಎಂದಿದ್ದಾರೆ.

ಬೆಂಗಳೂರು (ಅ.7): ವಿಶ್ವದ ಶ್ರೀಮಂತ ಹಾಗೂ 'ಸ್ಪೇಸ್‌ಎಕ್ಸ್' (SpaceX) ಮತ್ತು 'ಸ್ಟಾರ್‌ಲಿಂಕ್' (Starlink) ಸಂಸ್ಥೆಯ ಮುಖ್ಯಸ್ಥ ಎಲೋನ್‌ ಮಸ್ಕ್ (Elon Musk), ಭಾರತದಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಸೇವೆ (Satellite Internet Service) ಆರಂಭಿಸಲು ಅಡ್ಡಿಪಡಿಸುತ್ತಿರುವ ದೇಶದ ಕೆಲವೇ ಕೆಲವು ಪ್ರಭಾವಿ ಶ್ರೀಮಂತ ಉದ್ಯಮಿಗಳ (Oligarchs) ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಏಕಸ್ವಾಮ್ಯವನ್ನು (Monopoly) ಉಳಿಸಿಕೊಳ್ಳಲು ಭಾರತೀಯರಿಗೆ ಹೈ-ಸ್ಪೀಡ್ ಇಂಟರ್ನೆಟ್ ತಲುಪದಂತೆ ತಡೆಯುತ್ತಿರುವುದು ಭಾರತೀಯ ಪ್ರಜೆಗಳ ವಿರುದ್ಧ ಎಸಗುತ್ತಿರುವ ಬಹುದೊಡ್ಡ ಅಪರಾಧ ಎಂದು ಮಸ್ಕ್ ಗಂಭೀರ ಆರೋಪ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ 'X' ನಲ್ಲಿ ಭಾರತಕ್ಕೆ ಸ್ಟಾರ್‌ಲಿಂಕ್ ಇಂಟರ್ನೆಟ್ ಸೇವೆಯ ಅಗತ್ಯತೆ ಮತ್ತು ಗ್ರಾಮೀಣ ಭಾರತದ ಇಂಟರ್ನೆಟ್ ಕೊರತೆಯ ಕುರಿತು ಮಾಡಲಾಗಿದ್ದ ಪೋಸ್ಟ್‌ಗೆ ನೇರವಾಗಿ ರಿಪ್ಲೈ ನೀಡಿರುವ ಮಸ್ಕ್, ಭಾರತದ ಪ್ರಭಾವಿ ಟೆಲಿಕಾಂ ದೈತ್ಯರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಸ್ಕ್ ರಿಪ್ಲೈನಲ್ಲಿ ಏನಿದೆ? ಬಂಡವಾಳಶಾಹಿಗಳ ವಿರುದ್ಧ ನೇರ ವಾಗ್ದಾಳಿ

ಸ್ಟಾರ್‌ಲಿಂಕ್ ಸೇವೆಗೆ ಎದುರಾಗಿರುವ ಅಡೆತಡೆಗಳ ಕುರಿತು 'X' ನಲ್ಲಿ ಕಳವಳ ವ್ಯಕ್ತಪಡಿಸಿ ಬರೆದಿದ್ದ ಪೋಸ್ಟ್‌ಗೆ ಉತ್ತರ ನೀಡಿರುವ ಮಸ್ಕ್, "ದುರದೃಷ್ಟವಶಾತ್, ಭಾರತೀಯ ಜನರ ಮೇಲೆ ತಮ್ಮ ಏಕಸ್ವಾಮ್ಯದ ಹಿಡಿತವನ್ನು ಮುಂದುವರಿಸಿಕೊಂಡು ಹೋಗುವ ಸಲುವಾಗಿ ಕೆಲವು ಪ್ರಭಾವಿ ಉದ್ಯಮಿಗಳು ನಮ್ಮನ್ನು ಭಾರತಕ್ಕೆ ಪ್ರವೇಶಿಸದಂತೆ ತಡೆಯುತ್ತಿದ್ದಾರೆ. ಆ ಉದ್ಯಮಿಗಳು ಯಾರು ಎಂದು ನೀವು ಸುಲಭವಾಗಿ ಊಹಿಸಬಹುದು..." ಎಂದು ಬರೆದಿದ್ದಾರೆ. ಮುಂದುವರಿದು ಅತ್ಯಂತ ಕಠಿಣ ಶಬ್ದಗಳಲ್ಲಿ ವಾಗ್ದಾಳಿ ನಡೆಸಿರುವ ಅವರು, "ಇದು ಭಾರತದ ಸಾಮಾನ್ಯ ಜನರ ವಿರುದ್ಧ ಎಸಗುತ್ತಿರುವ ಅಪರಾಧ!" (This is a crime against the people of India!) ಎಂದು ಆಕ್ರೋಶ ಹೊರಹಾಕಿದ್ದಾರೆ.

ಭಾರತಕ್ಕೆ ಸ್ಟಾರ್‌ಲಿಂಕ್ ಏಕ ಅಗತ್ಯ?: ಸಂಖ್ಯೆಗಳೇ ಹೇಳುತ್ತಿವೆ ವಾಸ್ತವ

ಭಾರತದಲ್ಲಿ ಇಂಟರ್ನೆಟ್ ಬೆಳೆದಿದ್ದರೂ, ದೇಶದ ದುರ್ಗಮ ಹಾಗೂ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಇಂಟರ್ನೆಟ್ ತಲುಪಿಲ್ಲ ಎಂಬುದನ್ನು ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ:

4G ಇಲ್ಲದ ಹಳ್ಳಿಗಳು: ಮೇ 2026ರ ಅಧಿಕೃತ ವರದಿಗಳ ಪ್ರಕಾರ, ಭಾರತದ ಸುಮಾರು 11,256 ಹಳ್ಳಿಗಳಲ್ಲಿ ಇಂದಿಗೂ 4G ನೆಟ್‌ವರ್ಕ್ ಸಂಪರ್ಕವೇ ಇಲ್ಲ.

ಗ್ರಾಮೀಣ-ನಗರ ತಾರತಮ್ಯ: ಮಾರ್ಚ್ 2026ರ ವೇಳೆಗೆ ಭಾರತದಲ್ಲಿ 1.093 ಶತಕೋಟಿ ಇಂಟರ್ನೆಟ್ ಗ್ರಾಹಕರಿದ್ದರೂ, ಅದರಲ್ಲಿ ಗ್ರಾಮೀಣ ಭಾಗದ ಪಾಲು ಕೇವಲ 440.87 ಮಿಲಿಯನ್. ನಗರಗಳಲ್ಲಿ ಪ್ರತಿ 100 ಜನರಿಗೆ 126.80 ಇಂಟರ್ನೆಟ್ ಚಂದಾದಾರರಿದ್ದರೆ, ಗ್ರಾಮೀಣ ಭಾಗದಲ್ಲಿ ಈ ಪ್ರಮಾಣ ಕೇವಲ 48.31 ಮಾತ್ರ.

ವೈರ್ಡ್ ಇಂಟರ್ನೆಟ್ ಕೊರತೆ: ಭಾರತದಲ್ಲಿ ಕೇವಲ ಶೇ. 4.26 ರಷ್ಟು ಇಂಟರ್ನೆಟ್ ಸಂಪರ್ಕಗಳು ಮಾತ್ರ ವೈರ್ಡ್ (ಫೈಬರ್) ಲೈನ್‌ಗಳನ್ನು ಹೊಂದಿವೆ.

ಭಾರತ್ ನೆಟ್ ಯೋಜನೆ: ಭಾರತ್ ನೆಟ್ ಯೋಜನೆಯಡಿಯಲ್ಲಿ 8.5 ಲಕ್ಷ ಕಿ.ಮೀ ಫೈಬರ್ ಕೇಬಲ್ ಅಳವಡಿಸಿ 2.21 ಲಕ್ಷ ಗ್ರಾಮ ಪಂಚಾಯಿತಿಗಳನ್ನು ಸಜ್ಜುಗೊಳಿಸಲಾಗಿದ್ದರೂ, ಜೂನ್ 2026ರ ವರದಿಯಂತೆ ಕೇವಲ 80,472 ಗ್ರಾಮ್ ಪಂಚಾಯಿತಿಗಳಲ್ಲಿ ಮಾತ್ರ ಸೇವೆ ಸಕ್ರಿಯವಾಗಿದೆ.

ತಯಾರಿದ್ದರೂ ಸಿಗದ ಪರ್ಮಿಷನ್!: 20 ಗೇಟ್‌ವೇ ಕೇಂದ್ರಗಳು ಸಿದ್ಧ

ಇಂಡಿಯಾ ಮೊಬೈಲ್ ಕಾಂಗ್ರೆಸ್‌ (IMC) ಕಾರ್ಯಕ್ರಮದಲ್ಲಿ ಮಾತನಾಡಿದ್ದ 'ಸ್ಟಾರ್‌ಲಿಂಕ್ ಬಿಸಿನೆಸ್ ಆಪರೇಷನ್ಸ್' ಉಪಾಧ್ಯಕ್ಷೆ ಲಾರೆನ್ ಡ್ರೇಯರ್ (Lauren Dreyer), ಪ್ರಧಾನಿ ನರೇಂದ್ರ ಮೋದಿಯವರ '100% ಡಿಜಿಟಲ್ ಸಂಪರ್ಕ'ದ ಕನಸನ್ನು ನನಸು ಮಾಡಲು ಸ್ಟಾರ್‌ಲಿಂಕ್ ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ತಿಳಿಸಿದ್ದರು.

ಅಲ್ಲದೆ, ಭಾರತೀಯರ ಡೇಟಾವನ್ನು ಭಾರತದಲ್ಲೇ ಸುರಕ್ಷಿತವಾಗಿಡಲು ವಿಶೇಷ ಸೆಕ್ಯುರಿಟಿ ಸಿಸ್ಟಮ್ ರೂಪಿಸಲಾಗಿದ್ದು, ಈಗಾಗಲೇ ಭಾರತದಾದ್ಯಂತ 20 'ಗೇಟ್‌ವೇ' ಕೇಂದ್ರಗಳನ್ನು ಸ್ಟಾರ್‌ಲಿಂಕ್ ನಿರ್ಮಿಸಿದೆ. ಬೆಟ್ಟಗುಡ್ಡಗಳು, ಗಡಿ ಭಾಗಗಳು, ದ್ವೀಪಗಳು ಹಾಗೂ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ತಕ್ಷಣವೇ ಇಂಟರ್ನೆಟ್ ಒದಗಿಸುವ 'ಡೈರೆಕ್ಟ್ ಟು ಸೆಲ್' (Direct to Cell) ತಂತ್ರಜ್ಞಾನವನ್ನೂ ನೀಡಲು ಕಂಪನಿ ಸಿದ್ಧವಿದೆ.

ಆದರೆ, ಭಾರತದ ಪ್ರಮುಖ ಖಾಸಗಿ ಟೆಲಿಕಾಂ ಸಂಸ್ಥೆಗಳು ಮತ್ತು ಬಂಡವಾಳಶಾಹಿ ಉದ್ಯಮಿಗಳ ತೀವ್ರ ವಿರೋಧ ಹಾಗೂ ಸ್ಪೆಕ್ಟ್ರಂ ಹಂಚಿಕೆಯ ವಿಳಂಬದಿಂದಾಗಿ ಸ್ಟಾರ್‌ಲಿಂಕ್ ವ್ಯಾಪಾರಕ್ಕೆ ಭಾರತ ಸರ್ಕಾರ ಇನ್ನೂ ಪೂರ್ಣಪ್ರಮಾಣದ ಹಸಿರು ನಿಶಾನೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಮಸ್ಕ್ ನೀಡಿರುವ ಹೇಳಿಕೆಯು ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ಸಂಚಲನ ಮೂಡಿಸಿದೆ.